ಜಾನಪದ ಸಾಹಿತ್ಯ

ಜಾನಪದ ಸಾಹಿತ್ಯ:

ಜಾನಪದವು ಈಗ ಒಂದು ಅಧ್ಯಯನ ಶಿಸ್ತಾಗಿ ಬೆಳೆದಿದೆ. ಒಂದು ಕಾಲದಲ್ಲಿ ವಿದ್ವಾಂಸರು ಈ ಕ್ಷೇತ್ರದ ಬಗ್ಗೆ ಉಪೇಕ್ಷೆಯ ಭಾವನೆಯುಳ್ಳವರಾಗಿದ್ದರು. ಆದರೆ ಅಶಿಕ್ಷಿತ ಜನಸಮುದಾಯ ತಮ್ಮ ಬದುಕಿನ ಕ್ರಿಯೆ ಮತ್ತು ಲಯಗಳೊಂದಿಗೆ ಜೈವಿಕ ಸಂಬಂಧ ಹೊಂದಿರುವ ಈ ಕ್ಷೇತ್ರದ ಶ್ರವ್ಯ-ದೃಶ್ಯ ಸಾಹಿತ್ಯ, ಕಲೆ, ಪರಿಕರಗಳನ್ನು, ವೈದಕೀಯ ಹಾಗೂ ಕ್ರೀಡೆಗಳನ್ನು ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ದಾಟಿಸುತ್ತ 'ಕುರಿತೋದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳೆನಿಸಿದರು. ''ತೋಂಡಿ ಪರಂಪರೆ'ಯ ಈ ಕ್ಷೇತ್ರಕ್ಕೆ ಕೀರ್ತಿ, ಪ್ರತಿಷ್ಠೆ, ಲೇಖಕರ ಹಕ್ಕು, ರಾಯಧನ  ಮುಂತಾದ ಯಾವುದೇ ವೈಯಕ್ತಿಕ ಲಾಭದ ಹಪಹಪಿ ಇಲ್ಲದ ಕಾರಣವಾಗಿ 'ಪಠ್ಯಗಳು'ಕೈಯಿಂದ ಕೈಗೆ, ಕಿವಿಯಿಂದ ಕಿವಿಗೆ, ಬಾಯಿಂದ ಬಾಯಿಗೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆಗೊಳ್ಳುತ್ತ ಕಾಲದೊಂದಿಗೆ ಸಂಭಿಸುತ್ತ ರಸ-ಕಸಗಳೆರೆಡೂ ಸೇರಿ ಚರಪಾಠವಾಗಿ ಬೆಳೆದುದು ಈ ಕ್ಷೇತ್ರದ ಅನಿವಾರ್ಯತೆಯೂ ಹೌದು, ವಿಪರ್ಯಾಸವೂ ಹೌದು. ಜನಪದ, ಜಾನಪದ ಎರೆಡೂ ಪದಗಳು ಈ ಕ್ಷೇತ್ರದಲ್ಲಿ ಬಳಕೆಯಲ್ಲಿದ್ದು, ವಿದ್ವಾಂಸರಾದ ಹಾ.ಮಾ.ನಾಯಕರು ಮತ್ತು ಡಾ. ಕಲಬುರ್ಗಿಯವರು ಭಿನ್ನ ನಿಲುವು ತಾಳಿದ್ದಾರೆ. 'ಜಾನಪದ'ವೆಂದರೆ-ಜನಪದ ಸಾಹಿತ್ಯ, ಕಲೆ, ಕ್ರೀಡೆ, ವೈದ್ಯ ಮುಂತಾದ ಎಲ್ಲವನ್ನೂ ಒಳಗೊಂಡುದು, 'ಜನಪದ'ವೆಂದರೆ- ಸಾಹಿತ್ಯಕ್ಕೆ ಮಾತ್ರ ಸೀಮಿತಗೊಂಡುದು ಎಂದು ಹಾಮಾನಾ ಹೇಳಿದರೆ ಕಲಬುರ್ಗಿಯವರು ಇದಕ್ಕೆ ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರು ಹಳ್ಳಿ ಮೂಲದ, ಕೃಷಿಕ ವೃತ್ತಿಯ, ಅವಿಭಕ್ತ ಕುಟುಂಬದವರು. ಈ ಮೂರು ಆಯಾಮಗಳು ಕಾರಣವಾಗಿ ಜಾನಪದ ಇವರ ಸ್ವಭಾವವಾಗಿಬಿಟ್ಟಿತ್ತು. ಹೀಗಾಗಿ ಜಾನಪದ ಭೋಧನೆ, ಸಂಶೋಧನೆ, ಸಂಘಟನೆ, ಪ್ರಸಾರ ಇತ್ಯಾದಿ ಕಾಯ೯ಗಳಲ್ಲಿ ಇವರು ಸಹಜವಾಗಿಯೇ ಪಾತ್ರವಹಿಸಿದ್ದಾರೆ. ಮುಖ್ಯ ಸಂಗತಿಗಳು ಹೀಗಿವೆ:

೧. ಕನಾ೯ಟಕ ವಿಶ್ವವಿದ್ಯಾಲಯದಲ್ಲಿ 'ಜಾನಪದ ಸಾಹಿತ್ಯ ಸಮ್ಮೇಳನ' ಅಸ್ತಿತ್ವಕ್ಕೆ ಬರುವಲ್ಲಿ ಮುಖ್ಯಪಾತ್ರ ವಹಿಸಿದುದು, ಹಂಪಿ ವಿಶ್ವವಿದ್ಯಾಲಯದಲ್ಲಿ 'ದೇಶಿ ಸಮ್ಮೇಳನ' ಆರಂಭಿಸಿದುದು- ಹೀಗೆ ಎರಡು ಸಮ್ಮೇಳನಗಳನ್ನು ಅಸ್ತಿತ್ವಕ್ಕೆ ತಂದ ಹಿರಿಮೆ ಇವರದಾಗಿದೆ.

೨. ಕನಾ೯ಟಕ ವಿಶ್ವವಿದ್ಯಾಲಯದಲ್ಲಿ ಜಾನಪದ ಮ್ಯೂಜಿಯಂ ಸಲುವಾಗಿ ವಸ್ತುಗಳನ್ನು ಸಂಗ್ರಹಿಸಿದುದು, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಸಜ್ಜಿತ ಜಾನಪದ ಮ್ಯೂಜಿಯಂ ಸ್ಥಾಪಿಸಿದುದು-ಹೀಗೆ ಎರೆಡು ಮ್ಯೂಜಿಯಂಗಳು ಇವರಿಂದ ಹುಟ್ಟುಹಾಕಲ್ಪಟ್ಟವು.

೩. ಕನಾ೯ಟಕ ವಿಶ್ವವಿದ್ಯಾಲಯದಲ್ಲಿ ವಾಷಿ೯ಕ 'ಜಾನಪದ ಅನ್ವಯಿಕ ಅದ್ಯಯನ' ಶಿಬಿರವನ್ನು ಇವರೇ ಆರಂಭಿಸಿದರು.

೪. ಗದುಗಿನ ತೋಂಟದಾಯ೯ಮಠದ 'ಲಿಂಗಾಯತ ಅಧ್ಯಯನ ಸಂಸ್ಥೆ'ಯ ಆಶ್ರಯದಲ್ಲಿ 'ಪ್ರವಾದಿ ಬಸವೇಶ್ವರ' ನಾಟಕದ ಪಠ್ಯ ರಚಿಸಿ, ಇದನ್ನು ಪ್ರಸಿದ್ಧ ಕಲಾವಿದ ಶ್ರೀ ಬೆಳಗಲ್ಲು ವೀರಣ್ಣ ಕುಟುಂಬದ ಮೂಲಕ ಜಾನಪದ ತೊಗಲುಗೊಂಬೆ ಆಟಕ್ಕೆ ಅಳವಡುವಂತೆ ಮಾಡಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ೧೦೦ ಪ್ರಯೋಗಗಳನ್ನು ಮಾಡಿಸಿ, ಕಲಾವಿದರಿಗೆ ಒಂದು ಲಕ್ಷ ರೂಪಾಯಿ ಆದಾಯ ಬರುವಂತೆ ಮಾಡಿ ಜನಪದ ಈ  ಕಲೆಯ ಪ್ರಸಾರ ಪ್ರಸಾರಕ್ಕೆ ಮತ್ತು ಜನಪದ ಕಲಾವಿದರ ಪೋಷಣೆಗೆ ನೆರವಾದ ಧನ್ಯತೆ ಇವರದ್ದಾಗಿದೆ.

೫. ಕನ್ನಡ ಅದ್ಯಯನಪೀಠ, ತೋಂಟದಾಯ೯ಮಠ, ಕನ್ನಡ ವಿಶ್ವವಿದ್ಯಾಲಯಗಳ ಮೂಲಕ ಜಾನಪದ ಕ್ಷೇತ್ರಕಾಯ೯, ವಿಚಾರ ಸಂಕೀಣ೯, ಪುಸ್ತಕ ಪ್ರಕಟಣೆಗಳನ್ನು ದೊಡ್ಡ ಪ್ರಮಾಣದಲ್ಲಿ ಏರ್ಪಡುವಂತೆ ನೋಡಿಕೊಂಡ ಹೆಗ್ಗಳಿಕೆ ಇವರದ್ದಾಗಿದೆ.

೬. ಸಾಹಿತ್ಯ, ಶಾಸನ, ಭಾಷೆ, ಗ್ರಾಮೀಣ ಆಚರಣೆಗಳನ್ನು ಆಕರವಾಗಿ ಬಳಸಿ ಜಾನಪದ ಅಧ್ಯಯನ, ಲೇಖನ ಬರವಣಿಗೆ ಕಾಯ೯ ಇವರಿಂದ ನಡೆಯಿತು. (ಹೆಚ್ಚಿನ ವಿವರಗಳಿಗೆ ನೋಡಿ: "ಕನ್ನಡ ಅಧ್ಯಯನಪೀಠ- ಸ್ನಾತಕೋತ್ತರ ಜಾನಪದ ವಿಭಾಗ"). ಈ ಎಲ್ಲ ಕೆಲಸ ಕಾಯ೯ಗಳನ್ನು ಗಮನಿಸಿ "ಜಾನಪದ ಮತ್ತು ಯಕ್ಷಗಾನ ಅಕಾಡಮಿ"ಯು ಇವರಿಗೆ "ಜಾನಪದತಜ್ಞ" ಪ್ರಶಸ್ತಿ ನೀಡಿತು. ಮಹಾಲಿಂಗಪೂರದಲ್ಲಿ ಜರುಗಿದ "ಅಖಿಲ ಕನಾ೯ಟಕ ಶ್ರೀಕೃಷ್ಣ ಪಾರಿಜಾತ ಸಮ್ಮೇಳನ"ದ ಅಧ್ಯಕ್ಷತೆ ಗೌರವ ಇವರಿಗೆ ಲಭಿಸಿತು.

ಉತ್ತರ  ಕರ್ನಾಟಕದ ಜನಪದ ಪದ್ಯ ಸಾಹಿತ್ಯ
ಸಮಾಜ ಪುಸ್ತಕಾಲಯ, ಧಾರವಾಡ - ೧೯೭೮
ಜನಪದ ಮಾರ್ಗ
ಲಕ್ಷ್ಮಿ ಪ್ರಿಂಟಿಂಗ್ & ಪಬ್ಲಿಷಿಂಗ್ ಹೌಸ್ , ಮೈಸೂರು - ೧೯೯೫