ಮಹಾರಾಷ್ಟ್ರದ ಕನ್ನಡ ಶಾಸನಗಳು

ಶಾಸನ ಸಾಹಿತ್ಯ:

ಮಹಾರಾಷ್ಟ್ರದ ಕನ್ನಡ ಶಾಸನಗಳು:

shasan_11

ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗವು ಎರಡು ದಿನ ಏರ್ಪಡಿಸಿದ್ದ ವಿಶೇಷ ಉಪನ್ಯಾಸಗಳ ಲಿಖಿತರೂಪ ಈ ಕೃತಿ. ೧೯೫೬ರ ಮಹಾರಾಷ್ಟ್ರದ ನಕ್ಷೆಯನ್ನು ಇಲ್ಲಿ ಪ್ರಮಾಣವಾಗಿಟ್ಟುಕೊಂಡು ಈ ಶಾಸನಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಕೃತಿಯ ಲೇಖಕರೇ ಹೇಳಿರುವಂತೆ "ಇಂದಿನ ಮಹಾರಾಷ್ಟ್ರದಲ್ಲಿ ಸಿಗುವ 'ಕನ್ನಡ ಶಾಸನ'ಗಳಿಂದ ಹೊರಡುವ ಧ್ವನಿ ಸಂಗ್ರಹಕ್ಕೆ ಮಾತ್ರ ಈ ಅಧ್ಯಯನ" ಸೀಮಿತಗೊಂಡಿದೆ. ಆದರೂ ಕರ್ನಾಟಕದಲ್ಲಿಯಂತೆ ಮಹಾರಾಷ್ಟ್ರದಲ್ಲಿಯೂ ಕನ್ನಡ ಶಾಸನಗಳೇ ಹೆಚ್ಚು(ಸುಮಾರು ೩೦೦). ಸಂಸ್ಕೃತ, ಪ್ರಾಕೃತ ಭಾಷೆಗಳಲ್ಲಿ ಸಿಗುವ ಶಾಸನಗಳಿಗಿಂತಲೂ ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಯಲ್ಲಿ ಸಿಕ್ಕಿರುವ ಶಾಸನಗಳ ಸಂಖ್ಯೆ ೭೬. ಮುಂದೆ ಯಾರಾದರು ಸಂಶೋಧನೆ ಕೈಕೊಂಡರೂ ಮಹಾರಾಷ್ಟ್ರದ ಶಾಸನಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣುವ ಸಂಭವ ಕಡಿಮೆ. ಮಹಾರಾಷ್ಟ್ರದ ಕನ್ನಡ ಶಾಸನಗಳ ಐತಿಹಾಸಿಕ ಬೆಳವಣಿಗೆಯನ್ನು ಮೂರು ಘಟ್ಟಗಳಲ್ಲಿ ಈ ಕೃತಿ ಗುರುತಿಸುತ್ತದೆ. ಮೌರ್ಯ ಅಶೋಕ(ಕ್ರಿ.ಶ.ಪೂ ೩೦೦)ನ ಪ್ರಾಕೃತ ಶಾಸನ (ಠಾಣಾ ಜಿಲ್ಲೆಯ ಸೋಪಾರಾ)ದಿಂದ ಪ್ರಾರಂಭವಾಗುವ ಮೊದಲ ಘಟ್ಟ. ಆಮೇಲೆ ಮಹಾರಾಷ್ಟ್ರವನ್ನು ಆಳಿದ (ಕ್ರಿ.ಶ.೩೦೦) ಶಾತವಾಹನರೂ ಶಾಸನಗಳ ಭಾಷೆಯ ವಿಷಯದಲ್ಲಿ ಅಶೋಕನನ್ನೇ ಅನುಸರಿಸಿದರು. ತರುವಾಯದ ಘಟ್ಟದಲ್ಲಿ (೨ನೇಯ ಘಟ್ಟ) ಬಾದಾಮಿಯ ಚಾಲುಕ್ಯರು ಮತ್ತು ಮಳಖೇಡದ ರಾಷ್ಟ್ರಕೂಟರು ಕರ್ನಾಟಕ-ಮಹಾರಾಷ್ಟ್ರ ಎರೆಡೂ ರಾಜ್ಯಗಳಲ್ಲಿ ಏಕಪ್ರಕಾರವಾದ ಅಧಿಕಾರ ನಡೆಸಿದರೂ ಮಹಾರಾಷ್ಟ್ರದಲ್ಲಿ ಕನ್ನಡದಲ್ಲಾಗಲಿ, ಮರಾಠಿಯಲ್ಲಾಗಲಿ  ಶಾಸನಗಳು ಹುಟ್ಟಲಿಲ್ಲಾ. ಇನ್ನು ಮೂರನೇಯ ಘಟ್ಟದಲ್ಲಿ ಕಲ್ಯಾಣ ಚಾಲುಕ್ಯ, ನಂತರದ ಕಲಚೂರಿ, ಯಾದವ ಮತ್ತು ಇವರ ಅಧಿಕಾರಿಗಳ ಕಾಲದಲ್ಲಿ ಕರ್ನಾಟಕ- ಮಹಾರಾಷ್ಟ್ರ  ಈ ಎರೆಡೂ ಪ್ರಾಂತಗಳಲ್ಲಿ ಕನ್ನಡ ಶಾಸನಗಳು ಹೇರಳವಾಗಿ ಹುಟ್ಟಿಕೊಂಡವು. ಇವುಗಳಲ್ಲಿ ಕಲ್ಯಾಣ ಚಾಲುಕ್ಯರ, ವಿಶೇಷವಾಗಿ ಆರನೆಯ ವಿಕ್ರಮಾದಿತ್ಯನ ಶಾಸನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಒಟ್ಟಾರೆ ಮಹಾರಾಷ್ಟ್ರದ ಗ್ರಾಮಗಳ ಒಂದು ಕಾಲದ ಸಾಮರಸ್ಯ ಬದುಕಿನ ಅಧ್ಯಯನ ಎನ್ನುವುದನ್ನು ಈ ಕೃತಿ ನಿಸ್ಸ್ಂದೇಹವಾಗಿಯೂ ಮನದಟ್ಟು ಮಾಡಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಕೃತಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಚಾರಿತ್ರಿಕವಾಗಿ ಮಹತ್ವದ್ದು.

ಬಸವಣ್ಣನವರನ್ನು ಕುರಿತು ಶಾಸನಗಳು:

shasan_9ಕಲಬುರ್ಗಿಯವರು ಶಾಸನ ಅಧ್ಯಯನ ಕ್ಷೇತ್ರವನ್ನು ಪ್ರವೇಶಿಸಿದ ಚಾರಿತ್ರಿಕ ಮಹತ್ವವನ್ನು ಒಳಗೊಂಡಂತೆ ಅವರ ಮೊದಲ ಪ್ರಕಟಿತ ಪುಸ್ತಿಕೆ ಎನ್ನುವ ಹಿರಿಮೆ ಈ ಕೃತಿಗಿದೆ. ಹನ್ನೊಂದು ಶಾಸನಗಳ ಆಧಾರದಿಂದ ಬಸವಣ್ಣನವರ ಜೀವನ ಮತ್ತು ವೀರಶೈವ(ಲಿಂಗಾಯತ)ದ ತಾತ್ವಿಕತೆಯನ್ನು ಶೋಧಿಸಿಕೊಡುವುದು ಇದರ ಉದ್ದೇಶವಾಗಿದೆ. ೭೮ ಪುಟವ್ಯಾಪ್ತಿಯ ಈ ಪುಟ್ಟಕೃತಿ (೧)ಶಾಸನ (೨)ಶರಣರ ದೃಷ್ಟಿ-ಶಾಸನ ಸೃಷ್ಟಿ (೩)ಬಸವಣ್ಣನವರನ್ನು ಕುರಿತ ಶಾಸನಗಳು (-ಅಸಮ್ಮತ ಶಾಸನಗಳು, ಸರ್ವಸಮ್ಮತ ಶಾಸನಗಳು) (೪) ಸಮೀಕ್ಷೆ ಎನ್ನುವ ನಾಲ್ಕು ವಿಭಾಗಗಳಲ್ಲಿ 'ವಿಷಯ'ವನ್ನು ಮಂಡಿಸುತ್ತದೆ. ಪ್ಲೀಟ್ ಮತ್ತು ವೆಂಕಟಸುಬ್ಬಯ್ಯನವರಂಥ ವಿದ್ವಾಂಸರು ಶರಣರ ಅದರಲ್ಲೂ ಬಸವಣ್ಣನವರ ಚಾರಿತ್ರಿಕ ಅಸ್ತಿತ್ವವನ್ನು ಪ್ರಶ್ನಿಸುತ್ತಿದ್ದ ಸಂದರ್ಭದಲ್ಲಿ ಮೂಡಿಬಂದ ಈ ಪುಸ್ತಕಕ್ಕೆ ಅದರದೇ ಆದ ಐತಿಹಾಸಿಕ ಮಹತ್ವವಿದೆ. (ಪ್ರ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ: ವ್ಯಾಸಂಗ ವಿಸ್ತರಣ ವಿಭಾಗ, ಉಪನ್ಯಾಸ ಗ್ರಂಥಮಾಲೆ-೭೨, ಪ್ರ.ಆ. ೧೯೬೮, ದ್ವಿ.ಆ. ೧೯೭೨)

 

ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು:

shasan_10ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಡಾ. ಕಲಬುರ್ಗಿಯವರನ್ನು ೧೯೭೭-೭೮ನೆಯ ಸಾಲಿನ ರಾಷ್ಟೀಯ ಉಪನ್ಯಾಸಕರೆಂದು ಆಯ್ಕೆಮಾಡಿ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಲು ಅವಕಾಶ ಕಲ್ಪಿಸಿತು. ಇದರಂಗವಾಗಿ ಅವರು ೧೯೭೮ ಮಾರ್ಚ ೯, ೧೦, ೧೧ರಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಸ್ತುತ ವಿಷಯ ಕುರಿತು ಉಪನ್ಯಾಸ ನೀಡಿದರು. ಆ ಉಪನ್ಯಾಸಗಳೇ ಈ ಕೃತಿಯಲ್ಲಿ ಪ್ರಕಟವಾಗಿವೆ. ಪ್ರಸ್ತಾವನೆಯಲ್ಲಿ ಡಾ. ಕಲಬುರ್ಗಿಯವರು "....ಪ್ರಾಚೀನ ಕರ್ನಾಟಕದಲ್ಲಿ ಜರುಗುತ್ತಲಿದ್ದ ಆತ್ಮಾನು ಸಂಧಾನಕ್ಕಾಗಿ ಸಂಬಧಪಟ್ಟ ಜೈನ ಸಮಾಧಿ ಮರಣ, ಮೌಲ್ಯಾನು ಸಂಧಾನಕ್ಕಾಗಿ ಸಂಬಂಧಪಟ್ಟ ಹಿಂದೂ ಬಲಿದಾನ-ವೀರಮರಣಗಳ ಮತ್ತು ಈ ಪ್ರಸಂಗಗಳಲ್ಲಿ ನಿರ್ಮಿಸುತ್ತಲಿದ್ದ ಸ್ಮಾರಕಗಳನ್ನು ಸಮಾಧಿಮರಣ ಸ್ಮಾರಕ, ಬಲಿದಾನಮರಣ ಸ್ಮಾರಕ, ವೀರಮರಣ ಸ್ಮಾರಕ ಎಂದು ಕರೆಯಬಹುದು. ಅವುಗಳ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಈ ಪುಸ್ತಕದ ವಸ್ತು. ಕರ್ನಾಟಕದ ಇತಿಹಾಸವನ್ನು ಪುನರಚಿಸುವುದಕ್ಕೆ 'ಅಸಾಮಾನ್ಯ ಮರಣಗಳ ಅಭ್ಯಾಸ ತುಂಬ ಪೂರಕವೆನಿಸುತ್ತವೆ". ಎಂದು ಹೇಳಿ, ಕೃತಿಯ ವಸ್ತುನಿಷ್ಠತೆಯನ್ನು ಅವರೇ ಪರಿಚಯಿಸಿದ್ದಾರೆ. ( ಐ.ಬಿ.ಎಚ್. ಪ್ರಕಾಶನ ಐದನೆಯ ಮುಖ್ಯರಸ್ತೆ, ಗಾಂಧಿನಗರ-ಬೆಂಗಳೂರು, ೧೯೮೦).