ಮಾರ್ಗ ಸಂಪುಟಗಳು:
ಮಾರ್ಗ ಸಂಪುಟ ೭ :
ತಮ್ಮ ಸಂಶೋಧನಾ ಪ್ರಬಂಧಗಳನ್ನು ಹಾಗೂ ಇತರ ಬರಹಗಳನ್ನು ವಿಷಯಾನುಸಾರ ವಿಂಗಡಿಸಿ ಆರು ಸಂಪುಟಗಳಲ್ಲಿ ಪ್ರಕಟಿಸುತ್ತ ಬಂದಿದ್ದ ಕಲಬುರ್ಗಿಯವರು, ತಮ್ಮ ಉಳಿದ ಪ್ರಬಂಧಗಳನ್ನು ಪ್ರಕಟಿಸುವ ಸಿದ್ಧತೆಯಲ್ಲಿರುವಾಗಲೇ ಅನಿರೀಕ್ಷಿತವಾಗಿ ಹತ್ಯೆಗೀಡಾದರು. ಈ ಘಟನೆ ನಡೆದ ನಾಲ್ಕು ತಿಂಗಳ ನಂತರ ಅವರ ಧರ್ಮಪತ್ನಿ ಉಮಾದೇವಿ ಕಲಬುರ್ಗಿಯವರು ಈ ಏಳನೆಯ ಸಂಪುಟವನ್ನು ಪ್ರಕಟಿಸಿದ್ದಾರೆ. ಈ ಸಂಪುಟದಲ್ಲಿ ಪ್ರಬಂಧ ಪ್ರತಿಕ್ರಿಯೆ, ಪ್ರಸ್ತಾವನೆ, ಪುಸ್ತಕಾವಲೋಕನ, ಭಾಷಣಗಳೆಂಬ ವಿಭಾಗಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಮೊದಲ ಭಾಗದಲ್ಲಿ ೪೩ ಪ್ರಬಂಧಗಳಿದ್ದು ಇವು, ಬಸವಣ್ಣನವರ ಜೀವನ ಚರಿತ್ರೆ, ಬಸವಣ್ಣ ದಕ್ಷಿಣಭಾರತದ ಪರ್ಯಾಯ ಬುದ್ಧ: ಬಸವಣ್ಣನವರ ಲಿಂಗಾಯತವು ಪೂರ್ಣಧರ್ಮ, 'ಪಂಚಾಚಾರ್ಯರ ನಿಜಸ್ವರೂಪ', 'ಜಗದಾರಾಧ್ಯ ಜಗದ್ಗುರು', 'ವೀರಶೈವ ಇತಿಹಾಸ ಮತ್ತು ಭೋಗೊಲ', 'ಲಿಂಗಾಯತ: ಒಂದು ಸ್ವತಂತ್ರ ಧರ್ಮ'- ಮುಂತಾದ ಆಕರನಿಷ್ಟ ಒಳನೋಟಗಳಿಂದ ಪುಷ್ಟಿಪಡೆದು ಅವರ ಸಮಾಜಮುಖಿ ಚಿಂತನೆಗಳನ್ನು ನಿದರ್ಶಿಸುತ್ತವೆ. ಮುಖ್ಯವಾಗಿ ನಾಥ-ಶೈವ-ವೀರಶೈವ-ಲಿಂಗಾಯತ ಪಂಥಗಳ ನಿರ್ವಚನಗಳು ಇವಾಗಿವೆ. ಅಲ್ಲದೆ ಗ್ರಂಥ ಸಂಪಾದನೆ, ಶಾಸನ ಸಾಹಿತ್ಯ ಸಂಪಾದನೆ, ಜಾನಪದ ಸಾಹಿತ್ಯ ಸಂಪಾದನೆಗಳಿಗೆ ಸಂಬಂಧಿಸಿದಂತೆ ಪಾರಂಪರಿಕ ಪರಿಷ್ಕರಣ ಪದ್ದತಿ ಕೈಬಿಟ್ಟು ನೂತನ ವಿಧಾನಗಳನ್ನು ಹೇಗೆ ಅಳವಡಿಸಿಕೊಳ್ಳಬಹುದೆಂಬುದನ್ನು ಮತ್ತು ಅದರಿಂದಾಗುವ ಪ್ರಯೋಜನವನ್ನು ನಿರೂಪಿಸುವ ಲೇಖನಗಳನ್ನೂ ಇಲ್ಲಿ ಕಾಣಬಹುದು. 'ಪ್ರತಿಕ್ರಿಯೆ' ವಿಭಾಗವು ಪತ್ರಿಕೆಗಳಲ್ಲಿ ಧರ್ಮ, ಸಾಹಿತ್ಯ, ಸಮಾಜ, ಸಂಶೋಧನೆ ವಿಚಾರಗಳ ಕುರಿತು ಪ್ರಕಟವಾಗುತ್ತಿದ್ದ ಲೇಖನಗಳಿಗೆ ಕಲಬುರ್ಗಿಯವರು ತೋರಿದ ಭಿನ್ನಾಭಿಪ್ರಾಯರೂಪದ ಬರಹಗಳಿವೆ. 'ಪುಸ್ತಕಾವಲೋಕನ' ಭಾಗವು ೧೨ ಕೃತಿಗಳ ಕುರಿತು ಬರೆದಿರುವ ವಿಶ್ಲೇಷಣಾತ್ಮಕ ಚಿಂತನಗಳನ್ನು ಒಳಗೊಂಡಿದೆ. ಕೊನೆಯದಾದ- 'ಸಂಪಾದಕರ ನುಡಿ' ಭಾಗವು ಇವರು ಬರೆದ ಸಂಪಾದಕೀಯಗಳಿಗೆ ಸಂಬಧಿಸಿದುದಾಗಿದೆ. 'ಭಾಷಣ' ವಿಭಾಗವು ನುಡಿಹಬ್ಬ, ಸಮ್ಮೇಳನ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಸಮಾರೋಪ- ಮುಂತಾದ ಸಾಂದಂರ್ಭಿಕ ಭಾಷಣಗಳ ಲಿಖಿತ ರೂಪಗಳನ್ನು ಒಳಗೊಂಡಿದೆ. (ಪ್ರ) : ಸಪ್ನ ಬುಕ್ ಹೌಸ್, ಬೆಂಗಳೂರು – ೨೦೧೫
ಮಾರ್ಗ ಸಂಪುಟ ೮:
ಡಾ. ಎಂ.ಎಂ.ಕಲಬುರ್ಗಿಯವರ ಮರಣಾನಂತರ ಅವರ ೭೯ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಶ್ರೀಮತಿ ಉಮಾದೇವಿ ಕಲಬುರ್ಗಿ ಅವರು ಈ ಸಂಪುಟ ಪ್ರಕಾಶನಗೊಳ್ಳುವಂತೆ ಆಸಕ್ತಿವಹಿಸಿದುದು ವಿಶೇಷವಾಗಿದೆ. ಮಾರ್ಗ ಸಂಪುಟ ಸರಣಿಯ ಎಂಟನೆಯ ಸಂಪುಟ ಇದಾಗಿದ್ದು ಇದರಲ್ಲಿ ೧೧೪ ಲೇಖನಗಳು ಸೇರಿವೆ. ಈ ಲೇಖನಗಳನ್ನು ವಿಷಯಾನುಸಾರ ಆತ್ಮಕಥೆ, ಪ್ರಬಂಧ, ಭಾಷಣ, ವ್ಯಕ್ತಿಚಿತ್ರ, ಮುನ್ನುಡಿ, ಬೆನ್ನುಡಿ, ಅರಿಕೆ, ಇತರ ಎಂದು ೮ ವಿಭಾಗಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ. ಮೊದಲಭಾಗ ಕಲಬುರ್ಗಿಯವರ ಜೀವನ, ಪರಿಸರ, ಸಾಹಿತ್ಯಿಕ, ಸಾಮಾಜಿಕ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಸಂಗತಿಗಳನ್ನು ನಿರೂಪಿಸುವ ೨೦ ಪುಟಗಳ ಗಳ 'ನನ್ನ ಬದುಕು'ಆತ್ಮಕಥೆಯನ್ನು ಒಳಗೊಂಡಿದೆ. ನಂತರದ ಏಳು ಭಾಗಗಳು ಕ್ರಮವಾಗಿ ಸಂಶೋಧನೆ, ಛಂದಸ್ಸು, ಭಾಷೆ, ಧರ್ಮ, ಪ್ರತಿಕ್ರಿಯೆ, ಸಮಾಜ, ಸಂಶೋಧನೆಯ ಸ್ವರೂಪ, ಬಸವಣ್ಣನವರ ನಿಜ ಚರಿತ್ರೆ, ಲಾವಣಿ, ಸಮ್ಮೇಳನ, ವಿಚಾರ ಸಂಕಿರಣ, ಗ್ರಂಥ ಬಿಡುಗಡೆ, ಅಧ್ಯಕ್ಷೀಯ ಭಾಷಣ, ಉದ್ಘಾಟನಾ ಭಾಷಣ, ವ್ಯಕ್ತಿಚಿತ್ರ, ಬೇರೆಯವರ ಕೃತಿಗಳಿಗೆ ಬರೆದ ಮುನ್ನುಡಿ, ಬೆನ್ನುಡಿ, ತಮ್ಮ ಕೃತಿಗಳಿಗೆ ಬರೆದ ಅರಿಕೆ, ಸಂಪಾದಕೀಯ, ಸಾಂಧರ್ಭಿಕ ಬರಹಗಳು ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಬರಹಗಳಿಂದ ಆವೃತವಾಗಿದೆ.(ಪ್ರ. ಸಪ್ನ ಬುಕ್ ಹೌಸ್, ಬೆಂಗಳೂರು-೨೦೧೬).