ಸಂಪಾದನೆ

ಸಂಪಾದನಾಶಾಸ್ತ್ರ:

ಪ್ರಾಚೀನ ಗ್ರಂಥಗಳನ್ನು ಪರಿಷ್ಕರಿಸಿ, ಹಲವು ಹಸ್ತಪ್ರತಿಗಳ ಸಹಾಯದಿಂದ ಶುದ್ಧಪಾಠಗಳನ್ನು ನಿರ್ಣಯಿಸುವುದೇ ಗ್ರಂಥಸಂಪಾದನೆ. ಪ್ರಾಚೀನ ಕೃತಿಗಳು ಪ್ರಕೃತಿಯ 'ಪ್ರಕೋಪಕ್ಕೆ'ತುತ್ತಾಗಿ, ಜನತೆಯ ಉದ್ದೇಶಿತ ಮತ್ತು ಅನುದ್ದೇಶಿತ ಪಾಠವ್ಯತ್ಯಾಸಗಳಿಗೆ ಗುರಿಯಾಗಿ ವಿರೂಪಗೊಳ್ಳುವುದು ಸಹಜ. ವ್ಯವಸ್ಥಿತ ವಿಧಾನಗಳನ್ನವಲಂಬಿಸಿ, ಈ ವಿರೂಪವನ್ನು ಅಳಿಸಿಹಾಕಿ ಅವುಗಳನ್ನು ಮತ್ತೆ ಮೂಲರೊಪಕ್ಕೆ ತಿರುಗಿಸಬೇಕು, ಶುದ್ಧಗೊಳಿಸಬೇಕು. ಈ ಶುದ್ಧೀಕರಣ ಕ್ರಿಯೆಯೆ ಗ್ರಂಥಸಂಪಾದನೆ. ಸಂಪಾದನಾ ಕಾರ್ಯವಿಧಾನ ಐದು ಮಜಲಿನಲ್ಲಿ ಸಾಗುತ್ತದೆ: ಸಾಮಗ್ರಿ ಸಂಕಲನ, ವಂಶಾವಳಿ ನಿರ್ಣಯ, ಪಾಠಸಂಕಲನ, ಪಾಠಪರಿಷ್ಕರಣ ಮತ್ತು ಉನ್ನತ ವಿಮರ್ಶೆ. ಸಂಪಾದನ ಕಾರ್ಯ ಸುಲಭವಾದುದಲ್ಲ; ಯಾಂತ್ರಿಕವೂ ಅಲ್ಲ. ಸಹನೆ, ತಾಳ್ಮೆ, ಧೃಡತೆ, ಪ್ರತಿಭೆ; ಕಲ್ಪನಾಸಾಮರ್ಥ್ಯ, ವಿಚಾರಶಕ್ತಿ, ಪರಕಾಯ ಪ್ರವೇಶ ನೈಪುಣ್ಯವನ್ನು ಅದು ಬಯಸುತ್ತದೆ. ಗ್ರಂಥಸಂಪಾದನೆಯೆನ್ನುವುದು ಯಾವುದೇ ಕೃತಿಯ ಆಶಯ ಮತ್ತು ಪಾಠಾಂತರಗಳನ್ನು ಅವಲಂಬಿಸಿ ನಿಜಪಾಠವನ್ನು ನಿರ್ಣಯಿಸುವ ಹೊಣೆಯಾಗಿದೆ. ಏಕೈಕ ಹಸ್ತಪ್ರತಿಗಳನ್ನವಲಂಬಿಸಿ ಗ್ರಂಥಸಂಪಾದನೆ ಮಾಡುವುದು ಸಾಕ್ಷಿಗಳಿಲ್ಲದೆ ಆತ್ಮಸಾಕ್ಷಿಯ ಬಲದಿಂದ ತೀರ್ಪುನೀಡುವಂತಹ ತುಂಬ ಜವಾಬ್ದಾರಿಯ ಕಾರ್ಯ. ಈ ಅಸಿಧಾರಾವೃತಕ್ಕೆ ಅಂಜಿ ಸಂಪಾದನ ಕಾರ್ಯವನ್ನು ಬಿಟ್ಟುಕೊಟ್ಟರೆ ಇದ್ದೊಂದು ಪ್ರತಿಯೂ ನಾಶವಾಗಬಹುದು. ಆದುದರಿಂದ ಅದರಲ್ಲಿಯ ಭಾಷಿಕ ದೋಷಗಳನ್ನು ಮಾತ್ರ ತಿದ್ದಿ, ಕ್ಲಿಷ್ಠಪಾಠಗಳನ್ನು ಹಾಗೆಯೆ ಇಟ್ಟು ಅಚ್ಚಿಸುವುದು ಕ್ಷೇಮಕರ. ಮಾರ್ಗಕಾವ್ಯ ಸಂಪಾದನೆಗೆ ಹೆಚ್ಚುಪ್ರತಿ ಬಳಸಿದಷ್ಟೂ ಪಾಠ ಹೆಚ್ಚು ಶುದ್ಧವಾಗುತ್ತದೆ. ದೇಶಿಕಾವ್ಯ ಸಂಪಾದನೆಗೆ ಹೆಚ್ಚುಪ್ರತಿ ಬಳಸಿದಷ್ಟೂ ಪಾಠ ಹೆಚ್ಚು ಅಶುದ್ಧವಾಗುತ್ತದೆ.
ಸೂ: ಈ ಕೃತಿಗಳ ಹೆಚ್ಚಿನ ವಿವರಗಳಿಗಾಗಿ ಕೃತಿಗಳ ಹೆಸರಿನಮೇಲೆ ಕ್ಲಿಕ್ಕಿಸಿರಿ.

"ಗ್ರಂಥ ಸಂಪಾದನೆಯೆನ್ನುವುದು ಯಾವುದೇ ಕೃತಿಯ ಆಶಯ ಮತ್ತು ಪಾಠಾಂತರಗಳನ್ನು ಅವಲಂಬಿಸಿ, ನಿಜಪಾಠವನ್ನು ನಿರ್ಣಯಿಸುವ ಹೊಣೆಯಾಗಿದೆ."