ಸಂಶೋಧನೆ

 ಸಂಶೋಧನೆ

ಹೊಸದಾಗಿ ತಾವು ಶೋಧಿಸಿದ ಶೋಧ ಮತ್ತು ಬೇರೆಯವರು ಶೋಧಿಸಿದ ಆಕರಗಳನ್ನು ಬಳಸಿ ಮಾಡುವ ಶೋಧ ಎಂದು  ಎರಡು ರೀತಿಯಲ್ಲಿ ಸಂಶೋಧನೆಯನ್ನು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿ ಸಂಶೋಧನೆ ಮಾಡುವವರು ವಿಪುಲ. ಡಾ. ಕಲಬುರ್ಗಿಯವರು ಮಾತ್ರ ಹೊಸ ಆಕರಗಳನ್ನು ಶೋಧಿಸಿ, ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿ ಸಂಶೋಧನೆ ಮಾಡಿದ್ದಾರೆ. ಕನ್ನಡ ಸಂಶೋಧನೆಯ ಇತಿಹಾಸದಲ್ಲಿ ಆಕರನಿಷ್ಠಶೋಧ, ವ್ಯಾಖ್ಯಾನನಿಷ್ಠಶೋಧ- ಹೀಗೆ ಎರಡು ಮಜಲುಗಳು ಕಂಡುಬರುತ್ತವೆ. ಈ ಎರಡು ಮಜಲುಗಳಲ್ಲಿಯೂ ಇವರು ದುಡಿದಿದ್ದಾರೆ. ಸಂಶೋಧನೆ ಏಕಶಿಸ್ತೀಯ ಅಧ್ಯಯನಕ್ಷೇತ್ರವಲ್ಲ, ಬಹುಶಿಸ್ತೀಯ ಅಧ್ಯಯನಕ್ಷೇತ್ರ. ಈ ಮಾತಿಗೆ ಅಥ೯ ತುಂಬುವಂತೆ ಸಂಸ್ಕೃತಿ, ಇತಿಹಾಸ, ಶಾಸನ, ಜಾನಪದ, ವ್ಯಾಕರಣ, ಛಂದಸ್ಸು, ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನಾಶಾಸ್ತ್ರ, ನಾಮಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ಇವುಗಳನ್ನು ಬಳಸಿಕೊಂಡು ಅಂತರ್ಶಿಸ್ತೀಯ ಸಂಶೋಧನೆಯನ್ನು ಪೂರೈಸಿದ್ದಾರೆ. ಹೀಗೆ ಸಂಶೋಧನೆಯ ಎಲ್ಲ ಹಂತ, ಎಲ್ಲ ಆಯಾಮ, ಎಲ್ಲ ವಿಷಯಗಳನ್ನು ತೆಕ್ಕೆಗೆ ಅಳವಡಿಸಿಕೊಂಡು ದುಡಿಯುವವ ಸಮಗ್ರ ಸಂಶೋಧಕನೆನಿಸುತ್ತಾನೆ. ಈ ದೃಷ್ಟಿಯಿಂದ ಡಾ. ಕಲಬುರ್ಗಿಯವರು 'ಸಮಗ್ರಸಂಶೋಧಕ' ರೆನಿಸಿದ್ದಾರೆ.
ಸೂ: ಈ ಕೃತಿಗಳ ಹೆಚ್ಚಿನ ವಿವರಗಳಿಗಾಗಿ ಕೃತಿಗಳ ಹೆಸರಿನಮೇಲೆ ಕ್ಲಿಕ್ಕಿಸಿರಿ.

"ಸಂಶೋಧನೆ ಎನ್ನುವುದು ಸುಳ್ಳು ಇತಿಹಾಸದ ಮೂಲಕ ವರ್ತಮಾನದಲ್ಲಿ ಹುಟ್ಟುಹಾಕುತ್ತಲಿರುವ ಶೋಷಣೆಯನ್ನು ಹತ್ತಿಕ್ಕಲು, ನಿಜ ಇತಿಹಾಸವನ್ನು ಶೋಧಿಸಿಕೊಡುವುದು ಸಂಶೋಧಕನ ಕರ್ತವ್ಯವಾಗಿದೆ. ಅಂದರೆ ಸಂಶೋಧನೆಯೆಂಬುದು ಕೇವಲ ಇತಿಹಾಸದ ಶೋಧವಲ್ಲ. ಸುಳ್ಳು ಇತಿಹಾಸವನ್ನು ಮುಂದುಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವೂ ಆಗಿದೆ. ಸತ್ಯವೆಂಬ ಭೂತಕಾಲದ ಬಲದಿಂದ ಅಸತ್ಯವೆಂಬ ವರ್ತಮಾನ ಕಾಲವನ್ನು ಸರಿಪಡಿಸುವುದಾಗಿದೆ."