ಕನ್ನಡ ಅಧ್ಯಯನ ಪೀಠ

ಶೈಕ್ಷಣಿಕ ಕ್ಷೇತ್ರ:

ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ (ಕನಾ೯ಟಕ ವಿಶ್ವವಿದ್ಯಾಲಯ, ಧಾರವಾಡ):

ಕನಾ೯ಟಕ ವಿಶ್ವವಿದ್ಯಾಲಯವು, ಉತ್ತರ ಕನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಒದಗಿಸಿದ ಬಹುದೊಡ್ಡ ವಿದ್ಯಾಸಂಸ್ಥೆ. ಭಾರತ ಸ್ವಾತಂತ್ರ್ಯದ (೧೯೪೭) ಉತ್ಸಾಹಪೂರ್ಣ ವಾತಾವರಣದಲ್ಲಿ ಇದು ಅವತರಿಸಿತು. ಮುಂದೆ ಕರ್ನಾಟಕ ಏಕೀಕರಣದ (೧೯೫೬) ಉತ್ಸಾಹವನ್ನು ಮೈಗೂಡಿಸಿಕೊಂಡಿತು. kannada vibhaga dharwadಅನೇಕ ಶೈಕ್ಷಣಿಕ ವಿಭಾಗಗಳನ್ನು ಬೆಳೆಸಿತು. ಇವುಗಳಲ್ಲಿ ಕನಾಟಕದ ಭಾಷೆ-ಸಾಹಿತ್ಯ-ಸಂಸ್ಕೃತಿಗಳಿಗೆ ಸಂಬಂಧಿಸಿದ ಕನ್ನಡವಿಭಾಗವು ಸಹಜವಾಗಿಯೇ ಬೆಳೆಯಿತು. ಈ ವಿಶ್ವವಿದ್ಯಾಲಯದ ಪ್ರಥಮ ವಿಭಾಗವಾಗಿರುವ ಇದಕ್ಕೆ ೧೦ ವಷ೯ ತುಂಬುವಹೊತ್ತಿಗೆ (೧೯೬೦) ಡಾ.ಎಂ.ಎಂ.ಕಲಬುರ್ಗಿಯವರು ಅಲ್ಲಿ ವಿದ್ಯಾಥಿ೯ಯಾಗಿ ಪ್ರವೇಶಿಸಿದರು. ಎಂ.ಎ. ಮುಗಿಯುತ್ತಲೇ (೧೯೬೨) ಇದೇ ವಿಭಾಗದ 'ವಚನ ಸಾಹಿತ್ಯ ಪ್ರಕಟಣ ಶಾಖೆಯಲ್ಲಿ ಸಹಾಯಕ ಸಂಶೋಧಕರಾಗಿ ವೃತ್ತಿ ಆರಂಭಿಸಿದರು. ಅದೇ ವಷ೯ ಅಧ್ಯಾಪಕರಾಗಿ ಕನಾ೯ಟಕ ಕಾಲೇಜು ಸೇರಿ, ಮೂರು ವಷ೯ಗಳ ಬಳಿಕ (೧೯೬೬) ಇದೇ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಅಧ್ಯಾಪಕರಾಗಿ ಆಗಮಿಸಿದರು. ಇಲ್ಲಿಯ ಕನ್ನಡ ವಿಭಾಗವು ಸಂಸ್ಥೆಯಾಗಿ ವಿಸ್ತರಿಸಿಕೊಳ್ಳುವ ಕಾಯ೯ದಲ್ಲಿ ನೆರವಾಗುವ, ನೇರವಾಗಿ ದುಡಿಯುವ ಭಾಗ್ಯ ಇವರದಾಯಿತು. ಸಂಸ್ಥೆಯಲ್ಲಿ ಹೊಸದಾಗಿ ತೆರೆದುಕೊಂಡ ಗ್ರಂಥಸಂಪಾದನಾಶಾಸ್ತ್ರ, ಶಾಸನಶಾಸ್ತ್ರ ವಿಷಯಬೋಧನೆಗಳು ಇವರ ಶ್ರಮದಲ್ಲಿ ಬೆಳೆದವು. ಸಂಶೋಧನಾಶಾಸ್ತ್ರವೂ ಒಂದು ಶಿಸ್ತಿನಲ್ಲಿ ವಧಿ೯ಸಿತು. ೧೯೮೨ ರಲ್ಲಿ ಸಂಸ್ಥೆಯ ಮುಖ್ಯಸ್ಥರಾಗಿ ನಿಘಂಟುವಿಜ್ಞಾನ, ನಾಮವಿಜ್ಞಾನ, ಸೃಜನ-ವಿಮಶ೯ನ-ಸಂಶೋಧನ ವಿಷಯಗಳ ಅನ್ವಯಿಕ ಬೋಧನೆಗಳನ್ನು ಜೋಡಿಸಿ, ಕನ್ನಡ ಪಠ್ಯಕ್ರಮವನ್ನು ನವೀಕರಿಸಿದರು ಮತ್ತು ವಿಸ್ತರಿಸಿದರು. ಯಾರೂ ಬಳಸದ ಸ್ಠಿತಿಯಲ್ಲಿ ಮೇಲುಮಹಡಿಯಲ್ಲಿದ್ದ ವಿಭಾಗದ ಗ್ರಂಥಾಲಯವನ್ನು ನೆಲಮಹಡಿಗೆ ತಂದು ವ್ಯವಸ್ಥೆಗೊಳಿಸಿ, ವಿಸ್ತರಿಸಿ ಎಲ್ಲರ ಪ್ರಯೋಜನೆಗೆ ಅಣಿಗೊಳಿಸಿದರು. ೪೦೦೦ ಕಟ್ಟುಗಳನ್ನೊಳಗೊಂಡ 'ಹಸ್ತಪ್ರತಿಶಾಖೆ' ಕನ್ನಡ ಅಧ್ಯಯನ ಪೀಠದ ಅಪೂವ೯ ಆಸ್ತಿ. ಇದು ಇವರ ಆಸಕ್ತಿಯ ಕ್ಷೇತ್ರವಾಗಿರುವುದರಿಂದ ಆಗಾಗ ಸ್ವಪ್ರಯತ್ನದ ಮೂಲಕ ಸುಮಾರು ೧೦೦೦ ಹಸ್ತಪ್ರತಿಗಳನ್ನು ಬೇರೆ ಬೇರೆ ಕಡೆಯಿಂದ ಸಂಗ್ರಹಿಸಿತಂದು ಇದಕ್ಕೆ ಸೇರಿಸಿದರು. ಸಿಂಡಿಕೇಟ್ ಸದಸ್ಯರಾಗಿದ್ದ ಸಂದಭ೯ದಲ್ಲಿ ಕನ್ನಡ ಸಂಶೋಧನ ಸಂಸ್ಥೆ (ಕೆ.ಆರ್ .ಆಯ್)ಯ ೪೦೦೦ ಹಸ್ತಪ್ರತಿ ಕಟ್ಟುಗಳನ್ನು ವಿಭಾಗಕ್ಕೆ ವಗಾ೯ಯಿಸಿ, ಸಂಸ್ಥೆಯ ಈ ಸಂಪತ್ತು ವಧಿ೯ಸುವಂತೆ ಮಾಡಿದರು. ಕೊಲ್ಹಾಪುರ ಲಕ್ಷ್ಮೀಸೇನ ಭಟ್ಟಾರಕ ಜೈನಬಸದಿಯಲ್ಲಿರುವ ಹಸ್ತಪ್ರತಿಗಳ ಮಹತ್ವವನ್ನು ಮನಗಂಡು, ಅಲ್ಲಿಗೆ ಹೋಗಿ ಎಲ್ಲ ಹಸ್ತಪ್ರತಿಗಳ ಸೂಚಿ ಸಿದ್ದಪಡಿಸಿ ಪ್ರಕಟಿಸಿದರು. ಇಂಗ್ಲೆಂಡ್, ಕೆಂಬ್ರಿಜ್, ಆಕ್ಸಫಡ೯ಗಳಿಗೆ ಹೋಗಿ, ಅಲ್ಲಿಯ ಹಸ್ತಪ್ರತಿಗಳ ಅಭ್ಯಾಸ ಕೈಗೊಂಡರು, ಶ್ರೇಷ್ಠ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಯೋಜಕರಾಗಿ ಹೊರಹೊಮ್ಮಿದರು.
                                   ಇದೇ ಅವಧಿಯಲ್ಲಿ ಇಲ್ಲಿಯ ಸಭಾಭವನ್ನು ಪೀಠೋಪಕರಣಗಳಿಂದ ಸುಸಜ್ಜಿತಗೊಳಿಸಿದರು. ದ್ವನಿಮುದ್ರಿಕೆ ಗ್ರಂಥಾಲಯ ಆರಂಭಿಸಿ, ಆರ್. ಸಿ. ಹಿರೇಮಠ ಮೊದಲಾದ ಹಿರಿಯ ಸಾಹಿತಿ, ವಿದ್ವಾಂಸರ ದ್ವನಿಗಳನ್ನು ಸಂಗ್ರಹಿಸುವ ಏರ್ಪಾಟು ಮಾಡಿದರು. ಸಾಂಸ್ಕೃತಿಕ ವಸ್ತುಸಂಗೃಹಾಲಯ ಸ್ಥಾಪಿಸುವ ಉದ್ದೇಶದಿಂದ, ಆಲೂರು ವೆಂಕಟರಾವ ಮೊದಲಾದವರು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ, ವ್ಯವಸ್ಥೆಗೊಳಿಸಿದರು. ಎರಡು ವಷ೯ಗಳಲ್ಲಿ ಆರು ರೀಡರ ಹುದ್ದೆಗಳನ್ನು ತುಂಬುವ ಮೂಲಕ ಅಧ್ಯಾಪಕರ ಜೇಷ್ಠತಾ ಯಾದಿಯನ್ನು ಸರಿಪಡಿಸಿ, ಆಯಾ ಶಾಖೆಗಳನ್ನು ಬಲಪಡಿಸಿದರು. ಇದೇ ಅವಧಿಯಲ್ಲಿ ಸ್ವಪ್ರಯತ್ನದಿಂದ 'ಡಾ|| ಆರ್. ಸಿ. ಹಿರೇಮಠ ವ್ಯಾಖ್ಯಾನಮಾಲೆ'ಯನ್ನು ಆರಂಭಿಸಿದರು. ವಿಭಾಗದ ಮತ್ತು ಕಾಲೇಜಿನ ಕನ್ನಡ ಪ್ರಾಧ್ಯಾಪಕರು ವಷ೯ಕ್ಕೆ ಒಂದು ಸಲ ಸೇರಿ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಸಂವಾದ ನಡೆಸಲು ಅನುಕೂಲವಾಗುವಂತೆ ವಿಶ್ವವಿದ್ಯಾಲಯ ವ್ಯಾಪ್ತಿಯ ಬೇರೆ ಬೇರೆ ಪ್ರದೇಶಗಳಲ್ಲಿ 'ಕನ್ನಡ ಅಧ್ಯಾಪಕರ ಸಮಾವೇಶಗಳನ್ನು' ಜರುಗಿಸಿದರು. ಇದರ ಪ್ರಯೋಜನ ಎಲ್ಲರಿಗೂ ದೊರೆಯುವಂತೆ ಆಯಾ ವಷ೯ದ ಸಾಹಿತ್ಯದ ವಿಮಶೆ೯ ಮತ್ತು ಪ್ರಕಟನೆಗೆ ಅವಕಾಶ ಮಾಡಿಕೊಟ್ಟರು. ಈ ವಿಭಾಗದಲ್ಲಿ ಇಂದಿಗೂ ಜರುಗುತ್ತಲಿರುವ 'ಸಂಸ್ಕೃತಿ ಸಮ್ಮೇಳನ'ವೂ ಇವರ ಕಲ್ಪನೆ ಮತ್ತು ಪ್ರಯತ್ನದ ಫಲ. 
       ಸ್ನಾತಕೋತ್ತರ ಜಾನಪದ ವಿಭಾಗ ಕನಾ೯ಟಕ ವಿಶ್ವವಿದ್ಯಾಲಯದ ಜಾನಪದ ಸ್ನಾತಕೋತ್ತರ ಶಿಕ್ಷಣದ ಬೀಜಾರೋಪಣೆಯಲ್ಲಿ ಡಾ.ಎಂ.ಎಂ.ಕಲಬುರ್ಗಿಯವರ ಪಾಲೂ ಇದ್ದು, ಅದರ ಬೆಳವಣಿಗೆಯಲ್ಲಿ ವಿಶೇಷ ಪಾತ್ರ ವಹಿಸಿದರು. ಜಾನಪದ ಪಠ್ಯಕ್ರಮದಲ್ಲಿ ಕ್ಷೇತ್ರಕಾಯ೯, ಕಾಲೇಜಿನಲ್ಲಿ ಜಾನಪದವು ಬೋಧನ ವಿಷಯವಾಗಿ ಸೇರುವಲ್ಲಿ ಇವರ ಶ್ರಮವಿದೆ. ಇಲ್ಲಿಯ "ಜಾನಪದ ಸಮ್ಮೇಳನ"ದ ಸಂಸ್ಥಾಪಕರಲ್ಲಿ ಒಬ್ಬರಾಗಿ ಮತ್ತು "ಜಾನಪದ ಸಾಹಿತ್ಯ ದಶ೯ನ" ಗ್ರಂಥಮಾಲೆಯ ರೂವಾರಿಯಾಗಿ ಇವರು ಮಾಡಿದ ಕೆಲಸ ಸ್ಮರಣೀಯ. ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಜರುಗುತ್ತಲಿದ್ದ ಜಾನಪದ ಸಮ್ಮೇಳನಗಳು ಸಂಕುಚಿತಗೊಂಡು ವಿಭಾಗದಲ್ಲಿ ಜರುಗುತ್ತಿದ್ದುದನ್ನು ತಪ್ಪಿಸಿ, ತಾವು ಮುಖ್ಯಸ್ಥರಾಗಿರುವಾಗ ಮತ್ತೆ ಬೇರೆ ಬೇರೆ ಪ್ರದೇಶಗಳಲ್ಲಿ (ಸವದತ್ತಿ, ಬೆಳಗಾವಿ) ಜರುಗುವಂತೆ ನೋಡಿಕೊಂಡರು. ಅನಿಯತವಾಗಿದ್ದ 'ಜಾನಪದ ಸಾಹಿತ್ಯ ದಶ೯ನ' ಸಂಪುಟಗಳ ಪ್ರಕಟನೆಯನ್ನು ನಿಯತಗೊಳಿಸಿದರು. ಈ ಸಮ್ಮೇಳನದ ಮತ್ತು ವಿದ್ಯಾಥಿ೯ಗಳ ಕ್ಷೇತ್ರಕಾಯ೯ದ ವಾಷಿ೯ಕ ಅನುದಾನವನ್ನು ಹೆಚ್ಚಿಸಿದರು. ವಾಷಿ೯ಕ 'ಜಾನಪದ ಸಮ್ಮೇಳನಕ್ಕೆ' ಸಮಾನಾಂತರವಾಗಿ ಅನ್ವಯಿಕ ಅದ್ಯಯನಕ್ಕೋಸುಗ ತೊಗಲುಗೊಂಬೆ ಆಟದಂತಹ 'ಜಾನಪದ ಕಲೆಯ ವಾಷಿ೯ಕ ಶಿಬಿರ'ವನ್ನು ಆರಂಬಿಸಿ, ನಿರಂತರ ಜರುಗಲು ಹಣಕಾಸಿನ ವ್ಯವಸ್ಥೆ ಮಾಡಿದರು. ಜಾನಪದ ವಸ್ತುಸಂಗ್ರಹಾಲಯವನ್ನು ಅಸ್ತಿತ್ವಕ್ಕೆ ತರುವುದರ ಸಲುವಾಗಿ, ವಾಷಿ೯ಕ ಅನುದಾನವನ್ನು ಕಲ್ಪಿಸಿ, ಅನೇಕ ವಸ್ತುಗಳನ್ನು ಸಂಗ್ರಹಿಸುವ ಅನುಕೂಲ ಕಲ್ಪಿಸಿದರು . ಕನ್ನಡ, ಜಾನಪದ ಮತ್ತು ಭಾಷಾಶಾಸ್ತ್ರ ಒಂದೇ ಸಂಸ್ಥೆಯ ಸದಸ್ಯ ಶಿಸ್ತುಗಳು, ಪರಸ್ಪರ ಪೂರಕಗಳು ಎಂಬುದನ್ನು ಸ್ಥಾಪಿಸಲು ಜಾನಪದ ಅಧ್ಯಾಪಕರಿಗೆ (ಭಾಷಾಶಾಸ್ತ್ರದ ಅಧ್ಯಾಪಕರಿಗೂ) ಕನ್ನಡ ವಗ೯ಗಳಿಗೆ ಬೋಧಿಸುವ ಅವಕಾಶ ಒದಗಿಸಿದರು. (ಹೆಚ್ಚಿನ ಮಾಹಿತಿಗಾಗಿ ಕನ್ನಡ ವಿಶ್ವವಿದ್ಯಾಲಯ, ಲಿಂಗಾಯತ ಅಧ್ಯಯನ ಸಂಸ್ಥೆ ವಿಭಾಗಗಳನ್ನು ನೋಡಬಹುದು). 
                 ಸ್ನಾತಕೋತ್ತರ ಭಾಷಾವಿಜ್ಞಾನ ವಿಭಾಗ: ಭಾಷಾವಿಜ್ಞಾನ ಅಧ್ಯಾಪಕರಿಗೂ ಕನ್ನಡ ವಿದ್ಯಾಥಿ೯ಗಳಿಗೆ ಬೋಧಿಸುವ ಅವಕಾಶ ಕಲ್ಪಿಸಿಕೊಟ್ಟು, ಎರಡು ವಿಷಯಗಳ ಅಂತಶಿ೯ಸ್ತೀಯತೆಯನ್ನು ಬಲಪಡಿಸಿದರು. ರೀಡರ್, ತಾಂತ್ರಿಕ ಸಹಾಯಕ ಹುದ್ದೆಗಳನ್ನು ತುಂಬಿ, ಅನೇಕ ವಷ೯ಗಳಿಂದ ನೆನೆಗುದಿಗೆ ಬಿದ್ದಿದ್ದ ಭಾಷಾವಿಜ್ಞಾನ ಪ್ರಯೋಗಶಾಲೆಯನ್ನು ಸುಸಜ್ಜಿತವಾಗಿ ಸ್ಥಾಪಿಸಿ ಈ ಶಾಖೆಗೆ  ಡಾ.ಎಂ.ಎಂ.ಕಲಬುರ್ಗಿಯವರು ಶಕ್ತಿತುಂಬಿದರು.
              ಶಾಸನ ಶಾಖೆ: ಕನ್ನಡ ವಿಭಾಗವು ಸಂಸ್ಥೆಯಾಗಿ ಬೆಳೆಯುತ್ತಿದ್ದಂತೆ ಅಸ್ಥಿತ್ವಕ್ಕೆ ಬಂದ ಶಾಸನ ಶಾಖೆಗೆ ಡಾ.ಎಂ.ಎಂ.ಕಲಬುರ್ಗಿಯವರನ್ನು ಮುಖ್ಯಸ್ಥರನ್ನಾಗಿ ಮಾಡಲಾಯಿತು. ಉಪವಿಷಯವನ್ನಾಗಿ ಬೋಧಿಸಲಾಗುತ್ತಿದ್ದ ಈ ವಿಷಯವಗ೯ಕ್ಕೆ ಪ್ರತಿ ವಷ೯ ೧೦ರಷ್ಟು ವಿದ್ಯಾಥಿ೯ಗಳು ಸೇರುತ್ತಿದ್ದರು. ಇಲ್ಲಿಯ ಪಾಠ್ಯ ಮತ್ತು ಪ್ರಾಯೋಗಿಕ ಬೋಧನೆಯಿಂದಾಗಿ ಉತ್ತರ ಕನಾ೯ಟಕದಲ್ಲಿ ಶಾಸನಾಧ್ಯಯನದ ಒಂದು ಪರಂಪರೆಯೇ ಪ್ರಾರಂಭವಾಯಿತು. ಇಬ್ಬರು ಸಹಾಯಕ ಸಂಶೋಧಕರ ನೆರವಿನಿಂದ 'ವಿಜಾಪುರ ಜಿಲ್ಲೆಯ ಶಾಸನಸೂಚಿ' ಇತ್ಯಾದಿ ಪೂರಕ ಗ್ರಂಥಗಳು, ಉತ್ತರ ಕನಾ೯ಟಕದ ಶಾಸನಗಳ ಪರಿವೀಕ್ಷಣೆ-ಪ್ರಕಟನೆಯ ಅಂಗವಾಗಿ 'ಧಾರವಾಡ ತಾಲೂಕಿನ ಶಾಸನಗಳು ಪ್ರಕಟವಾದವು.'

                ಬಸವೇಶ್ವರ ಪೀಠ: ಕನಾ೯ಟಕ ವಿಶ್ವವಿದ್ಯಾಲಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಬಸವೇಶ್ವರಪೀಠವು (೧೯೮೦-೮೮) ಪ್ರಾಧ್ಯಾಪಕ ವಿದ್ಯಾಥಿ೯ ಸಂಪಕ೯ದಿಂದ ಮಾತ್ರ ಜೀವಪಡೆಯುವದೆಂಬ ದೃಷ್ಟಿಯಿಂದ ಅಲ್ಲಿ 'ಡಿಪ್ಲೋಮ ಇನ್ ಬಸವ ಸ್ಟಡೀಸ್' ತರಗತಿಗಳನ್ನು ಡಾ.ಎಂ.ಎಂ.ಕಲಬುರ್ಗಿಯವರು ಆರಂಭಿಸಿದರು. basaveshwar peethaಅದರ ಆಕಷ೯ಣೆಗಾಗಿ ಶಿಷ್ಯವೇತನವನ್ನು ಸ್ಥಾಪಿಸಿದರು. ಸಂಶೋಧನ- ವಿಮಶ೯ನ ತೌಲನವಾಗುವಂತೆ ಪಠ್ಯಕ್ರಮವನ್ನು ವಿಸ್ತೃತ ತಳಹದಿಯ ಮೇಲೆ ರಚಿಸಿ, ಕಲೆ- ಸಮಾಜಶಾಸ್ತ್ರ- ವಿಜ್ಞಾನ ಇತ್ಯಾದಿ ನಿಕಾಯಗಳ ವಿದ್ಯಾಥಿ೯ಗಳಿಗೂ ಪ್ರವೇಶಾವಕಾಶ ನೀಡಿ, ಈ ಶಾಖೆಯ ಅದ್ಯಯನ ಅವಕಾಶ ಹೆಚ್ಚಿಸಿದರು. ವೀರಶೈವ ಗ್ರಂಥಾಲಯವನ್ನು ಸ್ಥಾಪಿಸಿ ಹಳೆ- ಪತ್ರಿಕೆ, ಪುಸ್ತಕ, ಹೊಸ ಪೀಠೋಪಕರಣಗಳಿಂದ ಸುಸಜ್ಜಿತಗೊಳಿಸಿದರು. ವಿಶ್ವವಿದ್ಯಾಲಯದ ಆವರಣದಲ್ಲಿ ವಿಶೇಷೋಪನ್ಯಾಸ, ಹೊರಗೆ ಪ್ರಚಾರೋಪನ್ಯಾಸವೆಂಬ ಪರಿಕಲ್ಪನೆ ಸಾಕಾರಗೊಳಿಸುವ ಮೂಲಕ, ಪೀಠದೊಂದಿಗೆ ಜನತೆ- ವಿದ್ವಜ್ಜನತೆಯ ಸಂಪಕ೯ ಸಾದ್ಯವಾಗಿಸಿದರು. ಈ ಪೀಠದ ಸಿಬ್ಬಂದಿ ಸಹಾಯದಿಂದ ಬಸವಣ್ಣನವರ 'ಟೀಕಿನ ವಚನಗಳು' ಇತ್ಯಾದಿ ಗ್ರಂಥಗಳನ್ನು, ಉಪನ್ಯಾಸಮಾಲೆಯ ಕೃತಿಗಳನ್ನು, ಬಾಹ್ಯವಿದ್ವಾಂಸರಿಂದ ವಚನಗಳ ಇಂಗ್ಲಿಷ, ಜಮ೯ನಿ, ತಮಿಳು ಭಾಷೆಯ ಅನುವಾದಗಳನ್ನು ಹೊರತಂದರು. ಈ ಪ್ರಯತ್ನಗಳಿಂದಾಗಿ ಬಸವೇಶ್ವರರ ಕುರಿತು ಬೋಧನೆ, ವೀರಶೈವ ಗ್ರಂಥಾಲಯ, ವಿಶೇಷೋಪನ್ಯಾಸ-ಪ್ರಚಾರೋಪನ್ಯಾಸ, ಪುಸ್ತಕ ಪ್ರಕಟನೆ - ಈ ನಾಲ್ಕೂ ನೆಲೆಗಳಲ್ಲಿ ಈ ಪೀಠ ಕ್ರಮಬದ್ಧಗೊಂಡಿತು. ಡಾ. ಕಲಬುರ್ಗಿಯವರ ಸ್ವಭಾವ ವ್ಯಕ್ತಿಕೇಂದ್ರಿತ, ಸಮಾಜಕೇಂದ್ರಿತ - ಸಂಸ್ಥೆಕೇಂದ್ರಿತವಾಗಿತ್ತು. ಹೀಗಾಗಿ ಸಂಸ್ಥೆಯ ಯೋಗಕ್ಷೇಮ ಮೊದಲು, ಆಮೇಲೆ ಸ್ವಂತದ್ದು ಎಂಬ ಭಾವದಿಂದ ಅಧ್ಯಯನಪೀಠದ ಎಲ್ಲ ವಿಭಾಗಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ದುಡಿದರು. ಈ ಸಂಸ್ಥೆಯ ಎರಡನೆಯ ತಲೆಮಾರಿನ ಮುಖ್ಯವ್ಯಕ್ತಿಯೆಂದು ಜನ ಗುರುತಿಸುವ ಮಟ್ಟದಲ್ಲಿ ಶ್ರಮಿಸಿದರು. ಇದನ್ನು ಗಮನಿಸಿದ ಡಾ|| ಆರ್. ಸಿ. ಹಿರೇಮಠರು ಇವರ ೫೦ನೆಯ ಹುಟ್ಟುಹಬ್ಬದ ಸಮಾರಂಭದಂದು "Dr. Kalburgi is my Successor" ಎಂದಿದ್ದರು. ಬೇರೊಂದು ಸಂದಭ೯ದಲ್ಲಿ ಡಾ|| ಹಾ.ಮಾ.ನಾಯಕರು "ಕನಾ೯ಟಕ ವಿಶ್ವವಿದ್ಯಾಲಯದಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಿದವರಲ್ಲಿ ಕಲಬುಗಿ೯ಯವರೂ ಕೂಡುತ್ತಾರೆ. ಕನ್ನಡವನ್ನು ಕಟ್ಟುವದೆಂದರೆ ಅದನ್ನು ಬೆಳೆಸಲು ಏನು ಬೇಕೋ ಅದನ್ನು ಮಾಡುವುದು. ಆ ಕೆಲಸವನ್ನು ಅವರು ಸತತವಾಗಿ ಮಾಡಿಕೊಂಡು ಬಂದಿದ್ದಾರೆ"ಯೆಂದು ಬರೆದರು.
              ಪತ್ರಿಕೆಗಳ ಸಂಪಾದಕತ್ವ: ಪತ್ರಿಕೆ ವಿದ್ವತ್ ಕ್ಷೇತ್ರವನ್ನು, ವಿದ್ವಾಂಸರನ್ನು ಬೆಳೆಸುತ್ತದೆ. ಉತ್ತರ ಕನಾ೯ಟಕದ ವಿದ್ವಾಂಸರು ಇಂಥ ಅವಕಾಶದಿಂದ ವಂಚಿತರಾದುದನ್ನು ಗಮನಿಸಿದ ಇವರು, 'ಕನಾ೯ಟಕ ಭಾರತಿ'(೧೯೬೮) ಪತ್ರಿಕೆಯನ್ನು ತರುವಲ್ಲಿ ಪ್ರಧಾನ ಪಾತ್ರವಹಿಸಿದರು. ಕನಾ೯ಟಕ ಸಂಘದ ಕಾಯಾ೯ಧ್ಯಕ್ಷರಾಗಿ ವಿದ್ಯಾಥಿ೯ಗಳಿಗಾಗಿಯೆ 'ವಿದ್ಯಾಥಿ೯ ಭಾರತಿ' ಪತ್ರಿಕೆಯನ್ನು ಆರಂಭಿಸಿದುದು ಹೊಸ ಉಪಕ್ರಮವೆನಿಸಿತು. ಆರಂಭದ ಅನೇಕ ವಷ೯ ಈ ಎರೆಡೂ ಪತ್ರಿಕೆಗಳು ಡಾ. ಕಲಬುರ್ಗಿಯವರ ಸಂಪಾದಕತ್ವದ ಶ್ರಮದಲ್ಲಿ ಬೆಳೆದವು. ಕಾಲಕ್ರಮದಲ್ಲಿ ಅನಿಯತವಾಗಿದ್ದ 'ವಿದ್ಯಾಥಿ೯ ಭಾರತಿ' ಮುಂದೆ ಮತ್ತೆ ಇವರ ಪ್ರಯತ್ನದಿಂದಲೇ ಪ್ರಕಟವಾಗತೊಡಗಿತು. ಕನಾ೯ಟಕದ ಎಲ್ಲ ಜಿಲ್ಲೆಗಳ ಭಾಷಿಕ ಅಧ್ಯಯನ ಮತ್ತು ಅಧುನಿಕ ಕನ್ನಡ ಸಾಹಿತ್ಯ ಪ್ರಕಾರಗಳ ಅದ್ಯಯನಗಳನ್ನು ಕುರಿತಂತೆ ಪ್ರಕಟವಾದ 'ಕನಾ೯ಟಕ ಭಾರತಿ'ಯ ಎರೆಡು ವಿಶೇಷ ಸಂಪುಟಗಳು ಇವರ ಪ್ರಯತ್ನದ ಫಲ. ಜಾನಪದ ವಿಶೇಷ ಸಂಚಿಕೆಯನ್ನು ಪ್ರಕಟಿಸಲು ಸಂಪಾದಕರಾಗಿ ಇವರು ಸಂಗ್ರಹಿಸಿದ್ದ ಪ್ರಬಂಧಗಳನ್ನು ಬಳಸಿಕೊಂಡು ಸಮ್ಮೇಳನಗಳನ್ನೇ ಜರುಗಿಸಬಹುದೆಂಬ ಇವರ ಸೂಚನೆ. "ಜನಪದ ಸಮ್ಮೇಳನ" ಜರುಗಿಸಲು ದಾರಿ ಮಾಡಿಕೊಟ್ಟಿತು. ಹೀಗಾಗಿ ಆರಂಭದ ಹಲವು ಸಮ್ಮೇಳನಗಳನ್ನು ಜರುಗಿಸುವ ಹೊಣೆ ಇವರದಾಗಿದ್ದಿತು. ಇವರ ಪ್ರಯತ್ನದಿಂದಾಗಿ 'ಕನಾ೯ಟಕ ಭಾರತಿ' ಪತ್ರಿಕೆಯ ಮುಂದುವರಿಕೆಯೆಂಬಂತೆ 'ವಿಜ್ಞಾನ ಭಾರತಿ' 'ಮಾನವಿಕ ಭಾರತಿ' ಪತ್ರಿಕೆಗಳು ಹುಟ್ಟಿಕೊಂಡವು, 'ಜಾನಪದ ಭಾರತಿ' ಪತ್ರಿಕೆ ಆರಂಭಿಸುವ ಕನಸುನ್ನೂ ಇವರು ಹೊಂದಿದ್ದರು.
                 ಕನಾ೯ಟಕ ವಿಶ್ವವಿದ್ಯಾಲಯದ ಸಾಂಸ್ಕೃತಿಕ- ಆಡಳಿತಕಾಯ೯:  ವಿದ್ಯಾಥಿ೯ಕೂಟದ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷರಾಗಿ ಡಾ.ಎಂ.ಎಂ.ಕಲಬುರ್ಗಿಯವರು ಸಾಹಿತ್ಯ ಮಂಟಪ, ಸಂಗೀತ ಮಂಟಪ, ನೃತ್ಯ ಮಂಟಪ, ರಂಗಕಲಾ ಮಂಟಪ, ವಕ್ತೃತ್ವ ಮಂಟಪ ಇತ್ಯಾದಿಗಳನ್ನು ಆರಂಭಿಸಿ, ವಿದ್ಯಾಥಿ೯ಗಳಲ್ಲಿ ಕಲಾಸಕ್ತಿ ಬೆಳೆಸಿದರು. 'ವಾಷಿ೯ಕ ಚಿತ್ರಕಲಾ ಪ್ರದಶ೯ನ' ಏರ್ಪಡಿಸುವ ವಿಶೇಷ ಉಪಕ್ರಮ ಆರಂಭಿಸಿದರು. 'ದಿಗಂಬರ' ಹೆಸರಿನ ವಿದ್ಯಾಥಿ೯ಗಳ ಕವನ ಸಂಕಲನ ಪ್ರಕಟನೆ ಒಂದು ಹೊಸ ಪ್ರಯೋಗವೆನಿಸಿತು. ಅನೇಕಸಲ ವಿಶ್ವವಿದ್ಯಾಲಯದ ಸಿನೆಟ್, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸಭೆಗಳ ಸದಸ್ಯರಾಗಿ, ಕಲಾವಿಭಾಗದ ಡೀನ್ಆಗಿ ಕೆಲಸ ನಿವ೯ಹಿಸಿದರು. ಕನ್ನಡ ಸಂಶೋಧನ (ಕೆ.ಆರ್. ಆಯ್)ಯ ಕಯ೯ನಿವಾ೯ಹಕ ನಿದೇ೯ಶಕರಾಗಿಯೂ ಸೇವೆ ಸಲ್ಲಿಸಿದರು. ೧೨ನೇ ಶತಮಾನದ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಸರ್ವಜ್ಞ ಸೋಮೇಶ್ವರನ ಸಂಸ್ಕೃತ ಭಾಷೆಯ  ಒಂದು ಸುಪ್ರಸಿದ್ದ ವಿಶ್ವಕೋಶ "ಮಾನಸೋಲ್ಲಾಸ". ಈ ಕೃತಿಯು ಪ್ರಾಚೀನ ಭಾರತ ದೇಶದ- ಕರ್ನಾಟಕ ರಾಜ್ಯದ ಆಡಳಿತ, ಯುದ್ಧ, ಸಾಹಿತ್ಯ, ಜೋತಿಷ್ಯ, ವೈದ್ಯ, ಬೇಟೆ ಇತ್ಯಾದಿ ಸಾಂಸ್ಕೃತಿಕ ವಿವರಗಳನ್ನು ಒಳಗೊಂಡಿದೆ. ಈ ಮಹತ್ವದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮನಗಾನಿಸಿಕೊಟ್ಟು ಆ ಯೋಜನೆಯನ್ನು ತಮ್ಮ ಪ್ರಧಾನ ಸಂಪಾದಕತ್ವದಲ್ಲೇ ಪ್ರಸಾರಾಂಗದ ಮೂಲಕ ಎಂಟು ಜನ ಸಂಸ್ಕೃತ ಅನುವಾದಕರ ನೆರವುಪಡೆದು ಪ್ರಸ್ತುತ ಯೋಜನೆಯನ್ನು (೧೯೯೮ರಲ್ಲಿ) ಕಾರ್ಯಗತಗೊಳಿಸಿದರು. ಈ ಕೃತಿಯು ಎರೆಡು ಸಂಪುಟಗಳಲ್ಲಿ ಪ್ರಕಟಗೊಂಡಿದೆ.