ಸಂಘ-ಸಂಸ್ಥೆಗಳು

ಸಂಘ-ಸಂಸ್ಥೆಗಳು:

"ಒಂದು ಸಾಹಿತ್ಯ ಕೃತಿಯ ಅಧ್ಯಯನವೆಂಬುದು ಅಲ್ಲಿ ಹುದುಗಿರುವ ವ್ಯಕ್ತಿ ಶೋಧ, ಸಮಾಜ ಶೋಧ, ಮೌಲ್ಯದರ್ಶಶೋಧ ಮತ್ತು ಸೌಂದರ್ಯಶೋಧವಾಗಿದೆ."

ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ:

ಆಧುನಿಕ ಕರ್ನಾಟಕದ ಪ್ರಥಮ ಸಾಂಸ್ಕೃತಿಕ ಸಂಸ್ಥೆಯಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಏಕೀಕರಣ ಚಳವಳಿ - ಭಾಷಾ ಚಳವಳಿ ಮೊದಲಾದವುಗಳ ಮೂಲಕ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಇದರ ಸಹಕಾರ್ಯದರ್ಶಿ, ಕಾರ್ಯದರ್ಶಿಯಾಗಿ ದುಡಿಯುವ ಮೂಲಕ ಎಂ. ಎಂ. ಕಲಬುರ್ಗಿಯವರಿಗೆ ಕನ್ನಡದ ಕೆಲಸಗಳ ಸ್ವರೂಪ ಪರಿಚಯವಾಯಿತು. ಸಾಂದರ್ಭಿಕ ಕಾರಣಗಳಿಂದಾಗಿ ಒಂದರ್ಥದಲ್ಲಿ ಮುಚ್ಚಿಹೋಗಿದ್ದ ಅವಧಿಯಲ್ಲಿ ಅವರು ಅದರ ಕಾರ್ಯದರ್ಶಿಯಾದರು.
ಇವರ ಕಾಲಾವಧಿಯಲ್ಲಿ ಮುಚ್ಚಿಹೋಗಿದ್ದ ಗ್ರಂಥಾಲಯ, ಏ. ಟಿ. ಸಾಸನೂರ ದತ್ತಿ ಉಪನ್ಯಾಸ ಇತ್ಯಾದಿಗಳು ಮತ್ತೆ ಆರಂಭವಾದವು. ಹೊಸದಾಗಿ ಕಿತ್ತೂರು ಚೆನ್ನಮ್ಮ, ಬಸವೇಶ್ವರ ಹೆಸರಿನಲ್ಲಿ ದತ್ತಿ ಉಪನ್ಯಾಸಗಳು ಹುಟ್ಟಿಕೊಂಡವು. ಎಲ್. ಟಿ. ಅಮ್ಮಿನಭಾವಿ ಗ್ರಂಥ ಬಹುಮಾನ, ರತ್ನಮ್ಮ ಹೆಗ್ಗಡೆ ಮಹಿಳಾ ಸಾಹಿತ್ಯ ಬಹುಮಾನ ಅಸ್ತಿತ್ವಕ್ಕೆ ಬಂದವು. ವಿಶೇಷ ಉಪನ್ಯಾಸಗಳು ಏರ್ಪಟ್ಟು ಪುಸ್ತಕ ರೂಪದಲ್ಲಿ ಪ್ರಕಟವಾದವು. ಸಂಘದ ಹಳೆಯ ಪ್ರಕಟನೆಗಳು ಮರುಮುದ್ರಣಗೊಂಡವು. ಸಂಘದ ಸಭಾಭವನ, ಕಾರ್ಯಾಲಯಗಳು ಪೀಠೊಪಕರಣದಿಂದ ಸುಸಜ್ಜಿತಗೊಂಡವು. ಹೊಸ ಸಭಾಭವನದ ನೀಲನಕ್ಷೆ ಸಿದ್ಧಗೊಂಡು ಅಡಿಗಲ್ಲನ್ನಿಡಲಾಯಿತು. ಈ ಕ್ರಿಯಾಶೀಲತೆಯನ್ನು ಕಂಡು ನಗರಸಭೆ ಅನುದಾನವನ್ನು ಹೆಚ್ಚಿಸಿತು. ಕರ್ನಾಟಕ ಸರಕಾರ ' ಕಾರ್ಯಾಲಯ ದೀಪಿಕೆ ' ಮೊದಲಾದ ಯೋಜನೆಗಳನ್ನು ನೀಡಿತು. ಅಲ್ಲಿ ಮುದ್ರಣಾಲಯ, ಗ್ರಂಥಾಲಯ, ಪುಸ್ತಕ ಮಾರಾಟ - ಪ್ರದರ್ಶನ, ಉದ್ಯಾನ ಇತ್ಯಾದಿಗಳನ್ನು ನಿರ್ಮಿಸಿ, ಧಾರವಾಡದ ಈ ಹೃದಯ ಪ್ರದೇಶವನ್ನು " ಸಾಂಸ್ಕೃತಿಕ ಕೇಂದ್ರ" ವನ್ನಾಗಿಸುವ ಕನಸು ಇವರದಾಗಿತ್ತು. "ಕನ್ನಡ ಸಂಸ್ಕೃತಿ ಸಮ್ಮೇಳನ" ಹೆಸರಿನ ವಾರ್ಷಿಕ ಅಧಿವೇಶನ ಆರಂಭಿಸುವ ಯೋಜನೆಯನ್ನು ರೂಪಿಸಲಾಗಿದ್ದಿತು. "ಸಂಸ್ಕೃತಿ ಲೋಕ" ಹೆಸರಿನ ಪತ್ರಿಕೆ ಆರಂಭಿಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಲಾಗಿದ್ದಿತು.
ಒಟ್ಟಾರೆ, ಅಧ್ಯಕ್ಷರಾದ ಡಾ. ಪಾಟೀಲ ಪುಟ್ಟಪ್ಪ , ಕಾರ್ಯಾಧ್ಯಕ್ಷರಾದ ಶ್ರೀ ಕೆ. ಎಸ್. ದೇಶಪಾಂಡೆ ಅವರ ಪ್ರೀತಿ ವಿಶ್ವಾಸಗಳನ್ನು ಮೂಲಧನವನ್ನಾಗಿಸಿಕೊಂಡು, ಸಂಘವನ್ನು ನಿತ್ಯವೂ ನಿರ್ಮಾಣಮಾಡುತ್ತ ಬಂದರು.

 ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಯಪುರ:

ವಿಜಯಪುರದ ಬಿ. ಎಲ್. ಡಿ. ಇ. ಸಂಸ್ಥೆಯನ್ನು ಹುಟ್ಟುಹಾಕಿದ ಡಾ. ಫ. ಗು. ಹಳಕಟ್ಟಿಯವರ ಸ್ಮರಣೆಗಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ. ಬಿ. ಪಾಟೀಲರು ಡಾ. ಫ. ಗು. ಹಳಕಟ್ಟಿ ಸ್ಮಾರಕ ಭವನವನ್ನು ನಿರ್ಮಿಸಿರುವರು. ಈ ಸಂಸ್ಥೆಯನ್ನು ಸಾಂಸ್ಕೃತಿಕವಾಗಿ ಎತ್ತರದ ಸ್ಥಾನದಲ್ಲಿ ನಿಲ್ಲಿಸಲು ಡಾ. ಕಲಬುರ್ಗಿಯವರು ಸದಾ ಒಂದಿಲ್ಲೊಂದು ಯೋಜನೆಯನ್ನು ರೂಪಿಸುತ್ತಿದ್ದರು.
ಇದರ ಮೊಟ್ಟ ಮೊದಲ ಯೋಜನೆಯಾಗಿ ' ಫ. ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಪ್ರಕಟನ ಯೋಜನೆ' ಯನ್ನು ರೂಪಿಸಿದರು. ಕೇವಲ 4 ವರ್ಷಗಳ ಅವಧಿಯಲ್ಲಿ 15 ಸಂಪುಟಗಳಲ್ಲಿ ಸುಮಾರು 12500 ಪುಟಗಳ ಈ ಅಮೂಲ್ಯ ಸಾಹಿತ್ಯವನ್ನು ಹೊರತಂದು ಅದರ ಅಪರೂಪದ ದರ್ಶನವನ್ನು ಕನ್ನಡ ನಾಡಿಗೆ ಮಾಡಿಸಿದ ಶ್ರೇಯಸ್ಸು ಡಾ ಕಲಬುರ್ಗಿ ಯವರಿಗೆ ಸಲ್ಲುತ್ತದೆ.
ಡಾ. ಹಳಕಟ್ಟಿ ಸಮಗ್ರ ಸಾಹಿತ್ಯ ಸಂಗ್ರಹ, ಸಂಪಾದನೆ, ಪ್ರಕಟನೆ ಯೋಜನೆಯಿಂದ ಸ್ಮಾರಕ ಭವನವು ಸಂಶೋಧನ ಕೇಂದ್ರವೆಂದು ಗುರುತಿಸಿಕೊಂಡಿತು.
ಕಲಬುರ್ಗಿಯವರು ಈ ಕೇಂದ್ರಕ್ಕೆ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಕೊಡಿಸಲು ಕಾರಣರಾದರು. ಇದರ ಮೊದಲ ಹಂತವಾಗಿ 8 ವಿದ್ಯಾರ್ಥಿಗಳು ಈ ಕೇಂದ್ರದಿಂದ ಪಿ ಎಚ್ ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಈ ಮಹಾಪ್ರಬಂಧಗಳ ವಿಷಯಗಳ ಆಯ್ಕೆಯಿಂದ ಅವುಗಳ ಪ್ರಕಟನೆಯವರೆಗಿನ ಪ್ರೇರಣಶಕ್ತಿ ಕಲಬುರ್ಗಿಯವರು.

ಈ ಕೇಂದ್ರದಿಂದ ಹಮ್ಮಿಕೊಂಡ ಇನ್ನೂಂದು ಯೋಜನೆ 'ಆದಿಲ್ ಶಾಹಿ  ಸಾಹಿತ್ಯ ಅನುವಾದ ಯೋಜನೆ' ಹಳಕಟ್ಟಿ  ಅವರದು  ಸಮಾಜ  ಕಲ್ಯಾಣ  ಕೇಂದ್ರಿತ ವ್ಯಕ್ತಿತ್ವ . ಆದ್ದರಿಂದ ಈ  ಪ್ರತಿಷ್ಟಾನದಲ್ಲಿ  ಎಲ್ಲ  ಸಮಾಜಗಳನ್ನು  ಕೂಡಿಸಿಕೊOಡು "ಇವ  ನಮ್ಮವ , ಇವ  ನಮ್ಮವ , ಇವ  ನಮ್ಮವ " ಎಂಬ  ಆದರ್ಶಕ್ಕೆ   ಸಾಕ್ಷಿಯಾಗಿ  " ಆದಿಲ್ ಶಾಹಿ  ಸಾಹಿತ್ಯ  ಅನುವಾದ  ಯೋಜನೆ " ಅನುಷ್ಟಾನದಲ್ಲಿ  ಬಂದಿತು. ಡಾ .ಕಲಬುರ್ಗಿಯವರ  ಅಧ್ಯಕ್ಷತೆಯಲ್ಲಿ ಕರ್ನಾಟಕ  ಸರಕಾರದಿಂದ  ಅನುದಾನ ಪಡೆದು ಶಾಹಿ ಅರಸರ  ಕಾಲದಲ್ಲಿ  ರಚಿತವಾದ ಸುಮಾರು 18 ಕೃತಿಗಳ  ಅನುವಾದ  ಯೋಜನೆಯನ್ನು  ಸಿದ್ದಪಡಿಸಲಾಯಿತು .

ಇದು ಭಾರತದಲ್ಲಿಯೇ ಒಂದು ಅಪರೂಪದ ಯೋಜನೆ. ಮಧ್ಯಯುಗೀನ ಆದಿಲಶಾಹಿ ಕಾಲದಲ್ಲಿ ರಚಿತಗೊಂಡ ಎಲ್ಲ ಸಾಹಿತ್ಯವನ್ನು ಕನ್ನಡಕ್ಕೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶ. ಶಾಹಿ  ಅರಸರ  ಈ  ಸಾಹಿತ್ಯ ಮೂಲತಃ  ಪರ್ಷಿಯನ್ , ದಖನಿ - ಉರ್ದು  ಭಾಷೆಯಲ್ಲಿ  ರಚಿತವಾದವುಗಳು . ಒಂದೇ  ಒಂದು ಆ ಸಾಹಿತ್ಯದ ಕೃತಿಗಳು ಕಣ್ಣ  ಮುಂದೆ ಇರದಿದ್ದಾಗ  ಅವುಗಳನ್ನು ಕನ್ನಡದಲ್ಲಿ ಅನುವಾದಗೊಳಿಸುವುದು ಸಾಹಸದ  ಕಾರ್ಯವಾಗಿತ್ತು.
ಕಲಬುರ್ಗಿಯವರು ಡಾ ಕೃಷ್ಣ ಕೊಲ್ಹಾರ ಕುಲಕರ್ಣಿಯವರನ್ನು ಯೋಜನೆಯ ನಿರ್ದೇಶಕರನ್ನಾಗಿ ಮಾಡಿ ಅವರ ಮುಖಾಂತರ ಮೊದಲು ಸಾಹಿತ್ಯವನ್ನು ಸಂಗ್ರಹಿಸಲು ಪ್ರಾರಂಭಿಸಿದರು.  ದೇಶಾದ್ಯಂತ ತಿರುಗಾಡಿ ಹಸ್ತಪ್ರತಿಗಳನ್ನು  ಸಂಗ್ರಹಿಸುವ, ಅನುವಾದಿಸುವ, ಪ್ರಕಟಿಸುವ ಕಾರ್ಯ ಪ್ರಾರಂಭಿಸಿದರು . ಹಂತಕನ  ಗುಂಡಿಗೆ  ಬಲಿಯಾಗುವ  ಮುನ್ನಾದಿನ  ಮತ್ತು ಅಂದಿನ ದಿನ ನಿರ್ದೇಶಕರೊಂದಿಗೆ  ಅದೇ ಮಾತು . ದೊರೆತಿದ್ದೆಷ್ಟು ? ಇನ್ನೂ  ದೊರೆಯಬೇಕಾಗಿರುವುದು  ಎಷ್ಟು? ಅದಕ್ಕೆ ಮತ್ತೆ  ಪ್ರವಾಸ  ಎಂದು ? ಇತ್ತ್ಯಾದಿ . ಹೀಗೆ  ಸಂಗ್ರಹಿಸಿದ  ಸಾಹಿತ್ಯದಲ್ಲಿ  ಈಗಾಗಲೇ 12 ಗ್ರಂಥಗಳು  (ಸುಮಾರು 7 ಸಾವಿರ ಪುಟಗಳು) ಪ್ರಕಟವಾಗಿ ಉಳಿದ ಗ್ರಂಥಗಳ ಮುದ್ರಣ ನಡೆಯುತ್ತಿದೆ.
ಒಟ್ಟಿನಲ್ಲಿ ಈ ಸಂಶೋಧನ ಕೇಂದ್ರದ, ಪ್ರಸಾರಾಂಗದ ಬೆನ್ನೆಲುಬಾಗಿ ಕಲಬುರ್ಗಿಯವರು ಇಲ್ಲಿಯವರೆಗೆ ಸುಮಾರು 37 ಗ್ರಂಥಗಳು ಪ್ರಕಟವಾಗಲು ನಿರ್ದೇಶನ ನೀಡಿರುವರು.

ಕೆ .ಎಲ್ .ಇ. ಸಂಸ್ಥೆ , ಬೆಳಗಾವಿ:

ಕೆ .ಎಲ್ .ಇ .ಸಂಸ್ಥೆಯ ಪ್ರಸಾರಂಗದ  ಹಿಂದಿರುವ  ಪ್ರೇರಕಶಕ್ತಿ  ಡಾ . ಕಲಬುರ್ಗಿಯವರು. ಈ  ಪ್ರಸಾರಂಗದಿಂದ  ಇಲ್ಲಿಯವರೆಗೆ  15 ಮೌಲಿಕ ಗ್ರಂಥಗಳು ಪ್ರಕಟವಾಗಿವೆ .ವಿಶೇಷವೆಂದರೆ  ಇಲ್ಲಿ  ಪ್ರಕಟವಾದ  ಬಹುತೇಕ  ಗ್ರಂಥಗಳು ಕೆ .ಎಲ್ .ಇ .ಸಂಸ್ಥೆಯನ್ನು ಕಟ್ಟಿ  ಬೆಳೆಸಿದ  ಮಹನೀಯರ  ಸಾಧನೆಗಳನ್ನು ಒಳಗೊಂಡಿವೆ.

ಸರಕಾರಿ ಸಂಸ್ಥೆಗಳು :

ಕರ್ನಾಟಕದಲ್ಲಿ ವಚನ ಸಾಹಿತ್ಯದ ಪರಿಷ್ಕರಣ - ಪ್ರಕಟನೆಗೆ ನೂರು ವರ್ಷಗಳ ಇತಿಹಾಸವಿದೆ. ಡಾ ಫ. ಗು. ಹಳಕಟ್ಟಿಯವರಂತಹ ವಿದ್ವಾಂಸ ವ್ಯಕ್ತಿಗಳು, ವಿಶ್ವವಿದ್ಯಾಲಯಗಳು, ಲಿಂಗಾಯತ ಮಠಗಳು, ಸಾರ್ವಜನಿಕ ಸಂಸ್ಥೆಗಳು ದುಡಿದರೂ ಈ ಪ್ರಕಾರವನ್ನು ಸಮಗ್ರವಾಗಿ ವ್ಯವಸ್ಥಿತವಾಗಿ ಬೆಳಕಿಗೆ ತರುವುದು ಸಾಧ್ಯವಾಗಿರಲಿಲ್ಲ. ಈ ಕೊರತೆಯನ್ನು ಡಾ ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ೧೫ ಸಂಪುಟ, ೧0 ಸಾವಿರ ಪುಟ, ೨೦ ಸಾವಿರಕ್ಕೂ ಹೆಚ್ಚು ವಚನಗಳ ಪ್ರಕಟನೆಯ ಮೂಲಕ ಪ್ರಥಮ ಬಾರಿಗೆ ತುಂಬಿಕೊಡಲಾಗಿದೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಈ ಬೃಹತ್ ಯೋಜನೆ 'ಸಮಗ್ರ ವಚನ ಸಂಪುಟಗಳು' ಇವತ್ತಿನ ಮಿತಿಗೆ ಸಿಗುವ ಬಸವಯುಗ, ಬಸವೋತ್ತರಯುಗಗಳ ಎಲ್ಲ ಶರಣರ ವಚನಗಳನ್ನು ಬೆಳಕಿಗೆ ತಂದದ್ದು ಒಂದು ಐತಿಹಾಸಿಕ ಕಾರ್ಯವಾಗಿದೆ. ಈ ೧೫ಸಂಪುಟಗಳ ಮೂರನೆಯ ಆವೃತ್ತಿಯನ್ನು ಬೈಬಲ್ ಮಾದರಿಯಲ್ಲಿ ಎರಡೇ ಸಂಪುಟಗಳಲ್ಲಿ ಅಳವಡಿಸಲು ಯೋಜಿಸಿ ಆ ಕಾರ್ಯವನ್ನೂ ಪೂರ್ಣಗೂಳಿಸಿದರು.

ಇದೇ ರೀತಿ ಸಮಗ್ರ ದಾಸಸಾಹಿತ್ಯ ಪ್ರಕಟನ ಯೋಜನೆಯನ್ನು ಸಿದ್ಧಪಡಿಸಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮಿಜಿಯವರ ಮೂಲಕ ಕರ್ನಾಟಕ ಸರ್ಕಾರಕ್ಕೆ ಕಳಿಸುವ ವ್ಯವಸ್ಥೆ ಮಾಡಿದರು. ಅದರಂತೆ ಒಟ್ಟು ೧೩೯ ದಾಸರ ೧೬ ಸಾವಿರ ಕೀರ್ತನೆಗಳ ೩೫ ಸಂಪುಟಗಳು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಪ್ರಕಟಗೊಂಡವು.

ಹಾಗೆಯೇ ರಾಜ್ಯ ಪತ್ರಗಾರ ಇಲಾಖೆಯಿಂದ ಡಾ ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ' ಪ್ರಾಚೀನ ಅಪ್ರಕಟಿತ ಸಾಹಿತ್ಯ ಪ್ರಕಟನ ಯೋಜನೆ' ಯ ಅಡಿಯಲ್ಲಿ 51 ಪುಸ್ತಕಗಳು ಪ್ರಕಟವಾಗಿವೆ.