ಮಠಮಾನ್ಯಗಳು

ಮಠಮಾನ್ಯಗಳು:

ತೋಂಟದಾರ್ಯ ಮಠ, ಗದಗ:

ಗದುಗಿನ ತೋಂಟದಾರ್ಯ ಮಠ ಡಾ. ಕಲಬುರ್ಗಿಯವರ ಯೋಜನೆಗಳ ಮೊದಲ ಕಮ್ಮಟಶಾಲೆ. ಪೂಜ್ಯ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸತ್ ಸಂಕಲ್ಪ ಹಾಗೂ ಕಲಬುರ್ಗಿಯವರ ಉಜ್ವಲ ಪ್ರತಿಭಾಕಲ್ಪ ಎರಡೂ ಸಾಮರಸ್ಯಗೊಂಡು 'ಲಿಂಗಾಯತ ಅಧ್ಯಯನ ಸಂಸ್ಥೆ' ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಯ ಮೂಲಕ ಲಿಂಗಾಯತ ಪುಣ್ಯ ಪುರುಷರ ಮಾಲೆ, ಲಿಂಗಾಯತ ಅಪ್ರಕಟಿತ ಗ್ರಂಥಪ್ರಕಟನ ಮಾಲೆ, ಪ್ರಾಚೀನ ಸಾಹಿತ್ಯಮಾಲೆ, ನೂತನ ಸಾಹಿತ್ಯಮಾಲೆಗಳ ಅಡಿಯಲ್ಲಿ ಸುಮಾರು ೩00 ಗ್ರಂಥಗಳು ಕಲಬುರ್ಗಿಯವರ ನೇತೃತ್ವದಲ್ಲಿ ಪ್ರಕಟಗೊಂಡಿವೆ. ಆಧುನಿಕ ಲಿಂಗಾಯತ ಗಣ್ಯವ್ಯಕ್ತಿಗಳ ಜೀವನ-ಸಾಧನೆಯನ್ನು ಸಾಕ್ಷೀಕರಿಸುವ ಇಲ್ಲಿಯ ' ಲಿಂಗಾಯತ ಪುಣ್ಯಪುರುಷರ ಮಾಲೆ 'ಯು ಒಂದು ಶತಮಾನದ ಲಿಂಗಾಯತ ಸಮಾಜದ ಚರಿತ್ರೆಯನ್ನು ತಿಳಿಸಿಕೊಡುವ ಮೂಲಕ, ಈ ತಲೆಮಾರಿನ ದೊಡ್ಡ ದಾಖಲೆಯೆನಿಸಿದೆ'. ಅಪ್ರಕಟಿತ ಗ್ರಂಥ ಪ್ರಕಟನಮಾಲೆ 'ಯಲ್ಲಿ ಸುಮಾರು ೫0ರಷ್ಟು ಅಪ್ರಕಟಿತ ಪ್ರಾಚೀನ ವಚನಗ್ರಂಥಗಳು ಪ್ರಕಟವಾಗಿದ್ದು, ಇದು ವಚನ ಸಾಹಿತ್ಯದ ಪ್ರಕಟನೆಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ. ಶರಣ ಸಂಸ್ಕೃತಿಯನ್ನು ಪುಸ್ತಕೇತರ ಮಾಧ್ಯಮದಿಂದಲೂ ಪ್ರಸಾರಗೊಳಿಸುವ ಉದ್ದೇಶದಿಂದ ' ಪ್ರವಾದಿ ಬಸವೇಶ್ವರ ' ಹೆಸರಿನ ನಾಟಕ ಬರೆದು, ಪ್ರಸಿದ್ಧ ಕಲಾವಿದ ಬೆಳಗಲ್ಲು ವೀರಣ್ಣ ಅವರ ಮೂಲಕ ಅದನ್ನು ತೊಗಲುಗೊಂಬೆ ಆಟಕ್ಕೆ ಅಳವಡಿಸಿ, ರಾಜ್ಯದ ತುಂಬ ನೂರು ಪ್ರಯೋಗಗಳನ್ನು ಮಾಡಿಸಿದ ಹಿರಿಮೆ ಈ ಶ್ರೀಮಠದ್ದಾಗಿದೆ.

 ಇತರ ಮಠಮಾನ್ಯಗಳು:

ಕನ್ನಡದ ಕೆಲಸಕ್ಕೆ ಎಷ್ಟು ಸಂಸ್ಥೆಗಳಿದ್ದರೂ ಸಾಲದು ಎಂಬ ಭಾವನೆ ಕಲಬುರ್ಗಿಯವರದಾಗಿತ್ತು. ಹೀಗಾಗಿ ಜಾತಿ, ಪ್ರದೇಶ ಇತ್ಯಾದಿಗಳನ್ನು ಮೀರಿ ಕನ್ನಡ ಕೆಲಸಕ್ಕೆ ಮುಂದು ಬರುವ ಸಂಸ್ಥೆಗಳಿಗೆ ಅವರು ವತ್ತಾಸೆಯಾಗಿ ನಿಲ್ಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಅಭಿನಂದನ ಗ್ರಂಥ 'ಕಲ್ಯಾಣ ದೀಪ್ತಿ'ಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಕನ್ನಡ ಭಾಷೆ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಅನುಪಮ ಸೇವೆ ಸಲ್ಲಿಸಿದ ಈ ಮಠವು, ಡಾ ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ಶರಣ ಸಾಹಿತ್ಯ ಕುರಿತಂತೆ ೬೧ ಕೃತಿಗಳು ಕನ್ನಡದಿಂದ ಮರಾಠಿ ಭಾಷೆಗೆ, ೨0 ಪುಸ್ತಕಗಳು ತೆಲಗು ಭಾಷೆಗೆ ಹಾಗೂ ೧0 ಪುಸ್ತಕಗಳು ಹಿಂದಿ ಭಾಷೆಗೆ ಅನುವಾದಗೊಂಡಿರುವುದು ವಿಶೇಷವಾಗಿದೆ.  ಚಿತ್ರದುರ್ಗ ಶ್ರೀ ಮುರುಘಾಮಠದ, ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ೨೫ನೆಯ ವರ್ಷದ ನೆನಪಿಗಾಗಿ ಲಿಂಗಾಯತ ಸಂಸ್ಕೃತಿಗೆ ಸಂಬಂಧಿಸಿದ ೨೫ ಪಿಎಚ್. ಡಿ. ಮಹಾಪ್ರಬಂಧಗಳ ಪ್ರಕಟನೆ, ಶ್ರೀಗಳಿಗೆ 'ಶರಣಶ್ರೀ'  ಹೆಸರಿನ ಅಭಿನಂದನ ಗ್ರಂಥ ಸಮರ್ಪಣೆ ಹಾಗೂ ಶ್ರೀಮಠ ಈವರೆಗೆ ಪ್ರಕಟಿಸಿದ ಹಲವು ಕೃತಿಗಳ ಮರುಮುದ್ರಣಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಈ ಯೋಜನೆಗೆ ಪೂರ್ಣಸ್ವರೂಪವನ್ನು ತಂದುಕೊಟ್ಟವರು ಡಾ. ಎಂ. ಎಂ. ಕಲಬುರ್ಗಿಯವರು. ಬೆಳಗಾವಿಯ ಶ್ರೀ ನಾಗನೂರು ರುದ್ರಾಕ್ಷಿಮಠ ದಲ್ಲಿ 'ವೀರಶೈವ (ಲಿಂಗಾಯತ) ಅಧ್ಯಯನ ಅಕಾಡೆಮಿ'ಯನ್ನು ಸ್ಥಾಪಿಸಲು ಪ್ರೇರೇಪಿಸಿದವರು ಡಾ. ಕಲಬುರ್ಗಿಯವರು. ಈ ಅಕಾಡೆಮಿಯಿಂದ ಶ್ರೇಷ್ಟ ಪಿಎಚ್. ಡಿ. ಪ್ರಬಂಧಗಳು, 'ಕಣವಿ ಸಮಗ್ರಕಾವ್ಯ' ಪ್ರಕಟವಾಗಿವೆ. ಹಾಗೆಯೇ ಶಿವಮೊಗ್ಗದ ಆನಂದಪುರ ಮಠ 'ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆ', ನಿಡಸೋಸಿಯ ಶಿವಲಿಂಗೇಶ್ವರ ಮಠ 'ಶರಣ ಸಂಸ್ಕೃತಿ ಅಕಾಡೆಮಿ', ಕೊಡೆಕಲ್ ಬಸವೇಶ್ವರ ಅಧ್ಯಯನ ಸಂಸ್ಥೆ ಹಾಗೂ ಸೊಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ಮಠದ 'ಪ್ರಭುದೇವರ ಜನಕಲ್ಯಾಣ ಸಂಸ್ಥೆ'ಗಳು ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಪಟ್ಟ ಗ್ರಂಥಪ್ರಕಟಣೆಯ ಕಾರ್ಯವನ್ನು ಸೆರವೇರಿಸಿದುದು ಸ್ಮರಣೀಯ. ಇವರ ಮಾರ್ಗದರ್ಶನದಲ್ಲಿ ಮೈಸೂರಿನ ಸುತ್ತೂರು ಮಠವು 'ಸ್ವರವಚನ ಸಾಹಿತ್ಯ ಪ್ರಕಟನ ಯೋಜನೆ' ಕೈಗೆತ್ತಿಕೊಂಡು ೧0 ಸ್ವರವಚನ ಸಂಪುಟಗಳನ್ನು ಪ್ರಕಟಿಸಿದುದು ಸಾಹಿತ್ಯ ಕ್ಷೆತ್ರಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ಸಿಂದಗಿ ಸಾರಂಗಮಠ 'ಪೂಜ್ಯ ಶ್ರೀ ಚನ್ನವೀರಸ್ವಾಮೀಜಿ ಪ್ರತಿಷ್ಠಾನ', ಕೊಪ್ಪಳದ 'ಅಗಡಿ ಸಂಗಣ್ಣ ಪ್ರತಿಷ್ಠಾನ', ಗದುಗಿನ 'ವೀರನಾರಾಯಣ ಪ್ರತಿಷ್ಠಾನ' ಮುಂತಾದವುಗಳನ್ನು ಇವರು ಹುಟ್ಟುಹಾಕಿ ಹಲವಾರು ಯೋಜನೆಗಳು ಕಾರ್ಯಗತಗೊಳ್ಳುವಂತೆ ಆಸಕ್ತಿವಹಿಸಿ, ಕನ್ನಡ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದರು.