ಡಾ. ಕಲಬುರ್ಗಿ ಎಂಬ ಕಣ್ಣಮುಂದಿನ ಬೆಳಕು:
ಕಲಬುರ್ಗಿಯವರ ಮರಣಾನಂತರ ಅವರನ್ನು ಸ್ಮರಿಸಿಕೊಂಡು ೩೩ ಜನರು ಬರೆದ ಲೇಖನಗಳನ್ನು ಡಾ.ಎಸ್. ಪಿ. ಪದ್ಮಪ್ರಸಾದ ಸಂಪಾದಿಸಿದ ಕೃತಿ ಇದು. ಇದರಲ್ಲಿರುವ ಅನುಬಂಧಗಳು ಡಾ. ಕಲಬುರ್ಗಿಯವರ ಜೀವನ ಪರಿಚಯ, ಕೃತಿಪ್ರಪಂಚ ಮತ್ತು ಅವರನ್ನೊಳಗೊಂಡ ಕೆಲವು ಮಹತ್ವದ ಭಾವಚಿತ್ರಗಳನ್ನೊಳಗೊಂಡಿವೆ. ಸಂಪಾದಕ ಪದ್ಮಪ್ರಸಾದ (ಮೊದಲ ಬಿನ್ನಹ) ಅವರು "ಡಾ. ಎಂ.ಎಂ.ಕಲಬುರ್ಗಿಯವರು ಒಂದು ಮರೆಯಲಾಗದ / ಮರೆಯಬಾರದ ನೆನಪಾಗಿ ಉಳಿದಿದ್ದಾರೆ. ಅಂಥವರೊಡನೆ ಸಾಹಿತ್ಯಿಕ ವಿಚಾರಗಳಲ್ಲಿ ಜಗಳಾಡುವುದೂ ಪ್ರಯೋಜನಕಾರಿಯಾಗಿತ್ತು. ಅವರನ್ನು ನಮ್ಮಿಂದ ದುಷ್ಟ ಕೈಗಳು ದೂರಮಾಡಿದಾಗ ವಿವಿಧ ಪತ್ರಿಕೆಗಳಲ್ಲಿ ಹಲವಾರೂ ಲೇಖನಗಳು ಪ್ರಕಟವಾದವು. ಕೆಲವರು ಲೇಖನಗಳನ್ನು ಬರೆದರೂ ಸಹ ಪ್ರಕಟಿಸಲಾಗದೆ ಸುಮ್ಮನಾದರು. ಈ ಲೇಖನಗಳಲ್ಲಿ ಸಮಕಾಲೀನ ಸಾಹಿತ್ಯ ಚರಿತ್ರೆಯ ಅನೇಕ ವಿವರಗಳು ಹಾಗೂ ಡಾ.ಕಲಬುರ್ಗಿಯವರ ವಿದ್ವತ್ ಪ್ರೇಮ ಮತ್ತು ಪಾಂಡಿತ್ಯದ ಆಳವನ್ನು ಸೂಚಿಸುವ ಅನೇಕ ಅಂಶಗಳಿದ್ದವು... ಈ ಲೇಖನಗಳನ್ನೆಲ್ಲ ಸಂಕಲಿಸಿ ಇವುಗಳ ಜೊತೆಗೆ ನನ್ನ ನೆನಪುಗಳನ್ನೂ ದಾಖಲಿಸಿದ ಲೇಖನಗಳನ್ನು ಸೇರಿಸಿ" ಈ ಕೃತಿ ರೂಪಿಸಿರುವುದಾಗಖೇಳಿಕೊಂಡಿದ್ದಾರೆ. (ಪ್ರ. ಪ್ರಕಾಶ ಸಾಹಿತ್ಯ, ಬೆಂಗಳೂರು - ೨೦೧೫).
ಹುತಾತ್ಮ ಕಲಬುರ್ಗಿ:
ಈ ಕೃತಿಯ ಸಂಪಾದಕರು; ಕೆ.ಎಸ್. ಭಗವಾನ. ಚೆನ್ನಣ್ಣ ವಾಲಿಕಾರ ಅವರ 'ಕಲಬುರ್ಗಿ ಗುರುಗಳು' ಕವನದಿಂದ ಪ್ರಾರಂಭವಾಗುವ ಈ ಕೃತಿ, ಒಟ್ಟು ನಲ್ವತ್ತು ಬರಹಗಳನ್ನು ಒಳಗೊಂಡಿದೆ. ಪ್ರಜಾವಾಣಿ, ಆಂದೋಲನ, ಹೊಸತು, ವಿಜಯ ಕರ್ನಾಟಕ, ಮೈಸೂರು ಮಿತ್ರ, ಉದಯವಾಣಿ, ಕನ್ನಡಪ್ರಭಾ, ಸಂಯುಕ್ತ ಕರ್ನಾಟಕ, ಹಿಮಾಗ್ನಿ, ಪ್ರಬುದ್ಧ ಭಾರತ, ವಾರ್ತಾಭಾರತಿ, ಅಗ್ನಿ, ಲಂಕೇಶ, ಬಹುಜನ ನಾಯಕ, ಬಹುಜನ ಕನ್ನಡಿಗರು, ಮತ್ತು ಮಯೂರ- ಹೀಗೆ ಸುಮಾರು ೧೫ ಕನ್ನಡ ಪತ್ರಿಕೆಗಳು ಡಾ. ಕಲಬುರ್ಗಿಯವರ ಹತ್ಯೆಗೆ ಸ್ಪಂದಿಸಿದ ವಿಭಿನ್ನ ಬರಹಗಳನ್ನು ಮುಖ್ಯವಾಗಿ ಒಳಗೊಂಡಿರುವ ಈ ಕೃತಿ, ಇವುಗಳಿಗೆ ಹೊರತಾದ ಕೆಲವರ ಪೂರ್ಣಪ್ರಮಾಣದ ಲೇಖನಗಳನ್ನು, ಕೆಲವು ಹಿರಿಯ ಲೇಖಕರ, ಆತ್ಮೀಯರ ತತ್ವಾಲೀನ ಪ್ರತಿಕ್ರಿಯೆಗಳನ್ನು ಸೇರಿಸಿಕೊಂಡಿವೆ. ಜೊತೆಗೆ ಚಂದ್ರಶೇಖರ ಪಾಟೀಲರು ಕಲಬುರ್ಗಿಯವರ ಹತ್ಯೆಯ ಸಂದರ್ಭದಲ್ಲಿ 'ಅಗ್ನಿ' ಪತ್ರಿಕಗೆ, ರಹಮತ್ ತರೀಕೆರೆ ಕಲಬುರ್ಗಿಯವರು ಬದುಕಿದ್ದಾಗಲೆ ಲಂಕೇಶ ಪತ್ರಿಕೆಗೆ ಕೆ.ಎಸ್.ಭಗವಾನ 'ಕನ್ನಡಪ್ರಭ' ಪತ್ರಿಕೆಗೆ ನೀಡಿದ ಮೂರು ಸಂದರ್ಶನಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. (ಪ್ರ. ವಿಸ್ಮಯ ಪ್ರಕಾಶನ , ಮೈಸೂರು-೨೦೧೫).
ಸಾಂಸ್ಥಿಕಪ್ರಜ್ಞೆ ಡಾ.ಎಂ.ಎಂ.ಕಲಬುರ್ಗಿ :
ಈ ಕೃತಿಯ ಲೇಖಕರು ಡಾ. ಎಂ. ಎಸ್. ಮದಭಾವಿಯವರು. ಇಲ್ಲಿ ವಿಜಯಪುರದ ಡಾ.ಫಗು.ಹಳಕಟ್ಟಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕಾರಣೀಭೂತರಾದ ಡಾ.ಎಂ.ಎಂ.ಕಲಬುರ್ಗಿಯವರು ಆ ಮೂಲಕ ಫ. ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಪ್ರಕಟನ ಯೋಜನೆ, ಮಹಾಪ್ರಬಂಧಗಳ ಪ್ರಕಟನೆ, ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆ ಮತ್ತು ಇನ್ನಿತರ ಕೆಲವು ಗ್ರಂಥಗಳನ್ನು ಪ್ರಕಟಿಸುವ ಯೋಜನೆಗಳನ್ನು ಕಾರ್ಯಗತಗೊಳ್ಳುವಂತೆ ನೋಡಿಕೊಂಡು ಬಿ.ಎಲ್.ಡಿ.ಇ. ಸಂಸ್ಥೆಯ ಹೆಸರು ರಾಷ್ಟ್ರಮಟ್ಟದಲ್ಲಿ ನೆಲೆಗೊಳ್ಳುವಂತೆ ಮಾಡಿದರು. ಇದೇ ರೀತಿ ಬೆಳಗಾವಿಯ ಕೆ.ಎಲ್.ಇ. ಸಂಸ್ಥೆ, ಗದುಗಿನ ವೀರಶೈವ (ಲಿಂಗಾಯತ) ಅಧ್ಯಯನ ಸಂಸ್ಥೆ, ಬಾಲ್ಕಿ ಹಿರೇಮಠ ಸಂಸ್ಥಾನಮಠ, ಸೊಂಡುರಿನ ಶ್ರೀ ಪ್ರಭುದೇವರ ಸಂಸ್ಥಾನಮಠ, ಬಸವ ಸಮಿತಿ ಬೆಂಗಳೂರು, ಬಸವರಾಜ ಕತ್ರಿಮನಿ ಟ್ರಸ್ಟ- ಬೆಳಗಾವಿ, ಅಗಡಿ ಸಂಸ್ಕೃತಿ ಪ್ರತಿಷ್ಠಾನ ಕೊಪ್ಪಳ, ಮಹಿಳಾ ಸಾಹಿತ್ಯಿಕಾ, ನವನಗರ ಹುಬ್ಬಳ್ಳಿ, ನೆಲೆ ಪ್ರಕಾಶನ ಸಿಂದಗಿ, ಬಸವಪೀಠ ಧಾರವಾಡ, ಶ್ರೀ ವೀರನಾರಾಯಣ ಸಂಸ್ಕೃತಿ ಪ್ರತಿಷ್ಠಾನ ಗದಗ, ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ, ಧಾರವಾಡ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಸಿಂಧಗಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಮತ್ತು ಸರಕಾರದ ಸಂಸ್ಥೆಗಳು-ಹೀಗೆ ಹಲವು ಹತ್ತು ಸಂಸ್ಥೆಗಳನ್ನು ಮುನ್ನಡೆಸಿದ ಹೆಗ್ಗಳಿಕೆಯನ್ನು ಪರಿಚಯಿಸುವ ಕೃತಿ ಇದಾಗಿದೆ. (ಪ್ರ. ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ಬಿ.ಎಲ್.ಡಿ.ಇ. ಸಂಸ್ಥೆ-ವಿಜಯಪುರ-೨೦೧೫).