ಕನ್ನಡದ ಮಹಾಮಾರ್ಗ

ಕನ್ನಡದ ಮಹಾಮಾರ್ಗ:

kannadada mahamarga dr mmk

ಡಾ. ಕಲಬುರ್ಗಿಯವರ ಅಂತರಂಗದ ಶಿಷ್ಯರಲ್ಲೊಬ್ಬರಾದ ಡಾ. ರಾಮಕೃಷ್ಣ ಮರಾಠೆಯವರು ಈ ಕೃತಿಯ ಲೇಖಕರು. ಕಲಬುರ್ಗಿಯವರ ಬಹುಶ್ರುತ ವಿದ್ವತ್ವವನ್ನು, ಅವರ ವ್ಯಕ್ತಿತ್ವದ ನಿಜನಿಲುವುಗಳನ್ನು ತಮ್ಮ ನಿಖರವಾದ ಒಳನೋಟಗಳ ಮೂಲಕ ಸಮಗ್ರೀಕರಿಸಿ ಕಟ್ಟಿಕೊಡುವುದಕ್ಕೆ ಈ ಕೃತಿ ನಿಷ್ಠವಾಗಿದೆ. ಲೇಖಕರೆ ತಮ್ಮ ಮಾತುಗಳಲ್ಲಿ ಹೇಳಿರುವಂತೆ, "ಕಲಬುರ್ಗಿ ಅವರು ಪ್ರಾಧ್ಯಪಕರಾಗಿದ್ದರು, ಮಾರ್ಗದರ್ಶಕರಾಗಿದ್ದರು, ಸಂಶೋಧಕರಾಗಿದ್ದರು, ಸಂಪಾದಕರಾಗಿದ್ದರು, ಸಂಘಟಕರಾಗಿದ್ದರು, ಆಡಳಿತಗಾರರಾಗಿದ್ದರು, ಉತ್ತಮ ವಾಗ್ಮಿಯಾಗಿದ್ದರು. ಹೀಗೆ ಅವರ ವ್ಯಕ್ತಿತ್ವ ಅನೇಕ ಶಿಸ್ತುಗಳನ್ನು ವ್ಯಾಪಿಸಿಕೊಂಡಿತ್ತು, ಅನೇಕ ಮುಖಗಳನ್ನು ಒಳಗೊಂಡಿತ್ತು. ನಿಜಕ್ಕೂ ಅವರ ಕುರಿತು ಬರೆಯುವುದು ದೊಡ್ಡ ಸಾಹಸದ ಕೆಲಸವೇ..." ಈ ಸವಾಲನ್ನು ಮರಾಠೆಯವರು ಇಲ್ಲಿ ಸಮರ್ಥವಾಗಿ ಎದುರಿಸಿದ್ದಾರೆ. 'ಬೆನ್ನಹಿಂದಿನ ಬೆಳಕು' ಮೊದಲಾದ ೧೦ ಉಪಶೀರ್ಷಿಕೆಗಳಲ್ಲಿ ಡಾ. ಕಲಬುರ್ಗಿಯವರ ಬದುಕು ಮತ್ತು ಸಾಹಿತ್ಯದ ಬದುಕಿನ ಆಲೋಚನೆ, ಅಸ್ಮಿತೆಗಳನ್ನು ಇಲ್ಲಿ ಕ್ರಮವಾಗಿ ನಿರೂಪಿಸಿದ್ದಾರೆ. 'ಅನುಬಂಧ'ಕ್ಕೆ ಮೂದಲು ಕಲಬುರ್ಗಿಯವರ ಬಾಳಪುಟಗಳನ್ನು ತೆರೆದಿಡುವ ಅರ್ಥಗರ್ಭಿತವಾದ ಭಾವಚಿತ್ರಗಳನ್ನು ಆಯ್ದು ಸಂಯೋಜಿಸಿರುವುದು ಒಂದು ಸ್ತುತ್ಯಕ್ರಮ. ಅಂತೆಯೆ ಅನುಬಂಧದಲ್ಲಿ ಅವರ ಮರಣಾನಂತರ ನಾಡಿನ ಪ್ರಮುಖ ಸಾಹಿತಿಗಳು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳನ್ನು, ಸಂಸ್ಥೆಗಳು ಬೇರೆ ಬೇರೆ ರೂಪದಲ್ಲಿ ತೋರಿದ ಪ್ರೀತಿ, ಅಭಿಮಾನ, ಗೌರವದ ಸಂಗತಿಗಳನ್ನು, ಕಲಬುರ್ಗಿಯವರೆ ಸಾಂದರ್ಭಿಕವಾಗಿ ವಿವಿಧ ವಿಷಯಗಳನ್ನು ಕುರಿತು ಆಡಿದ ಸೂತ್ರರೂಪದ ಹೇಳಿಕೆಗಳನ್ನು, ಕೊನೆಯಲ್ಲಿ ಅವರ ಒಟ್ಟು ಸಾಧನೆಯನ್ನು ಸೂಚಿಸುವ ಕೃತಿಪಟ್ಟಿಯನ್ನು ಅಳವಡಿಸಿಕೊಳ್ಳಲಾಗಿದೆ.(ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆ, ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ- ಗದಗ-೨೦೧೬.)

ಮರಾಠಿ ಕಲಬುರ್ಗಿ:

marathi kalaburgi

ಡಾ. ಎಂ.ಎಂ.ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿ ಮರಾಠಿ ಪತ್ರಿಕೆಗಳು, ಮರಾಠಿ ಲೇಖಕರು ತೋರಿದ ಪ್ರತಿಕ್ರಿಯೆ ಅಭೂತಪೂರ್ವವಾದುದು. ಗಡಿತಂಟೆ, ನುಡಿತಂಟೆಯನ್ನು ಮೀರಿ ಸಾಂಸ್ಕೃತಿಕ ಸಂಬಂಧಕ್ಕೆ ಅದು ಸಾಕ್ಷಿಯಂತಿದ್ದಿತು. ಇದನ್ನು ಕನ್ನಡಿಗರಿಗೆ ಪರಿಚಯಿಸಬೇಕೆಂಬ ಇಚ್ಚೆಯಿಂದ ಮರಾಠಿ ಮತ್ತು ಕನ್ನಡ ಎರಡೂ ಭಾಷೆಗಳನ್ನು ಚನ್ನಾಗಿ ಬಲ್ಲ ಪತ್ರಿಕಾರಂಗದ ಡಾ. ಸರಜೂ ಕಾಟ್ಕರ ಕೆಲವು ಮಹತ್ವದ ಲೇಖನಗಳನ್ನು, ಪತ್ರಿಕೆಯ ಸಂಪಾದಕೀಯಗಳನ್ನು ಕನ್ನಡಕ್ಕೆ ಅನುವಾದಿಸಿ 'ಮರಾಠಿ ಕಲಬುರ್ಗಿ' ಹೆಸರಿನ ಈ ಕೃತಿಯನ್ನು ರೂಪಿಸಿದ್ದಾರೆ. ಇದರಲ್ಲಿ ಕೆಲವರು ಪತ್ರಗಳ ಮೂಲಕವೂ ವ್ಯಕ್ತಪಡಿಸಿದ ಅಭಿಮತಗಳ ಭಾವಚಿತ್ರಗಳನ್ನು, ಆರಂಭದಲ್ಲಿ ತಾವೇ ಬರೆದ ಒಂದು ನೀಳ್ಗವಿತೆಯನ್ನು ಅಳವಡಿಸಿಕೊಂಡಿದ್ದಾರೆ. ಇವುಗಳನ್ನು ಹೊರತುಪಡಿಸಿ ೨೯ ಲೇಖನಗಳು ಇಲ್ಲಿದ್ದು; ಅವೆಲ್ಲವೂ ಕಲಬುರ್ಗಿಯವರ ಹತ್ಯಾ ಸಂದರ್ಭದ ದಾಖಲೆಗಳಂತಿವೆ. (ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಠಾನಮಠ, ಎಡೆಯೂರು- ಡಂಬಳ, ಗದಗ-೨೦೧೬).

 

ಲಿಂಗಾಯತ ಅಧ್ಯಯನ ಸಂಸ್ಥೆ ಮತ್ತು ಡಾ.ಎಂ.ಎಂ.ಕಲಬುರ್ಗಿ:

lingayata adyayana samsthe &mmk

ಈ ಕೃತಿ ರಚಿಸಿದವರು ಪ್ರಕಾಶ ಗಿರಿಮಲ್ಲನವರ. ಲೇಖಕರ ನುಡಿಯಲ್ಲಿ ಅವರು "ಈ ಕೃತಿ ಲಿಂಗಾಯತ ಅಧ್ಯಯನ ಸಂಸ್ಥೆಗೂ ಡಾ. ಕಲಬುರ್ಗಿಯವರಿಗೂ ಇದ್ದ ಹಾರ್ದಿಕ-ಆತ್ಮೀಕ ಸಂಬಂಧವನ್ನು ತಿಳಿಸುತ್ತದೆ" ಎಂದಿದ್ದಾರೆ. ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಶ್ರೀಗಳು ಜುಲೈ ೨ ೧೯೭೪ರಲ್ಲಿ ಶ್ರೀಮಠದ ಪೀಠಾದಿಪತಿಗಳಾದ ಹೊಸದರಲ್ಲಿ ಡಾ. ಎಂ.ಎಂ.ಕಲಬುರ್ಗಿಯವರ ನಿರ್ದೇಶನದಲ್ಲಿ "ಲಿಂಗಾಯತ ಅಧ್ಯಯನ ಸಂಸ್ಥೆಯು" ಸ್ಥಾಪನೆಯಾದುದು(೧೯೭೫) ಈಗ ಇತಿಹಾಸ. ಅಂದಿನಿಂದಲೂ ಕಲಬುರ್ಗಿಯವರು ಸಂಸ್ಥೆಯ 'ಪ್ರಸಾರಾಂಗ'ದ  ಹೊಣೆವಹಿಸಿಕೊಂಡು ತಾವು ಜೀವಿಸುವವರೆಗೂ ಅದು ಸರ್ವೊತ್ಕೃಷ್ಟವಾಗಿ ಬೆಳೆಯುವಂತೆ ಶ್ರಮಿಸಿದರು. ಅವರು ಸಮಗ್ರ ಲಿಂಗಾಯತ ಅಪ್ರಕಟಿತ ಪ್ರಾಚೀನ ಸಾಹಿತ್ಯ ಪ್ರಕಟಣ ಯೋಜನೆ, ಪುಣ್ಯಪುರುಷ ಸಾಹಿತ್ಯರತ್ನಮಾಲೆ, ನೂತನ ಸಾಹಿತ್ಯ ರತ್ನಮಾಲೆ ಮತ್ತು ಗ್ರಂಥಮಾಲೆ, ಪಿಎಚ್.ಡಿ. ಪ್ರಬಂಧಮಾಲೆ, ಅನುವಾದ ಮತ್ತು ಗ್ರಾಮೀಣ ಸಾಹಿತ್ಯಮಾಲೆ ಹೀಗೆ ಹಲವು ಯೋಜನೆಗಳ ಅಡಿಯಲ್ಲಿ ಈ ವರೆಗೆ ಅಂದಾಜು ೫೦೦ ರಷ್ಟು ವಿವಿಧ ವಸ್ತು, ವಿನ್ಯಾಸ, ಕಾಲಘಟ್ಟ, ಪ್ರದೇಶ, ಸಂಸ್ಕೃತಿಗಳಿಗೆ ಸಂಬಂಧಪಟ್ಟ ಕೃತಿಗಳನ್ನು ಪ್ರಕಟಿಸಿರುವುದರ ಹಿಂದಿನ ಯೋಜಿತ ಮನಸ್ಸು ಡಾ. ಕಲಬುರ್ಗಿಯವರದಾದರೆ ಕ್ರತುಶಕ್ತಿ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರದು. ಇವರಿಬ್ಬರ ಸಂಯುಕ್ತ ಚೈತನ್ಯದ ಮೂರ್ತರೂಪ ಲಿಂಗಾಯತ ಅಧ್ಯಯನ ಸಂಸ್ಥೆ. ಈ ಸಂಸ್ಥೆಯೊಂದಿನ ಗಾಢತೆಯನ್ನು ದಾಖಲಿಸುವುದು ಈ ಕೃತಿಯ ಮುಖ್ಯ ಉದ್ದೇಶ. (ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ. ಎಡೆಯೂರು, ಡಂಬಳ-ಗದಗ-೨೦೧೬).