ಕನ್ನಡ ನಾಮವಿಜ್ಞಾನ

ಶಾಸ್ತ್ರ ಸಾಹಿತ್ಯ:

ಕನ್ನಡ ನಾಮವಿಜ್ಞಾನ:

kannada naama vijnana

ಈ ಕೃತಿಯ 'ಅರಿಕೆ'ಯಲ್ಲಿ ಡಾ.ಕಲಬುರ್ಗಿಯವರು ಹೇಳಿರುವ ಮಾತುಗಳೇ 'ಕೃತಿ' ಆಶಯವನ್ನು ವ್ಯಕ್ತಪಡಿಸುತ್ತವೆ. ಉದಾಹರಣೆಗೆ "ಗ್ರಂಥಸಂಪಾದನ ಶಾಸ್ತ್ರ, ಸಂಸ್ಕೃತಿ ಶಾಸ್ತ್ರ, ಭಾಷಾಶಾಸ್ತ್ರ ಮತ್ತು ಜನಪದ ಶಾಸ್ತ್ರಗಳು ಒಂದೊಂದಾಗಿ ಕನ್ನಡದಲ್ಲಿ ಕಣ್ಣು ತೆರೆಯುತ್ತ ಬಂದಿವೆ. ಈಗ ಇವುಗಳ ಮಗ್ಗುಲಲ್ಲಿ ನವೀನಶಾಖೆ 'ನಾಮವಿಜ್ಞಾನ'. ಈ ಹೊಸ ಜ್ಞಾನಶಾಖೆಯನ್ನು ವಿಜ್ಞಾನ ಶಿಲ್ಪಕ್ಕೆ ಅಳವಡಿಸಲು ಮಾಡಿದ ಪ್ರಯತ್ನವಾಗಿ ಈ ಪುಸ್ತಕ ಬೆಳಕು ಕಂಡಿದೆ. ಈ ಕಾರಣದಿಂದಾಗಿ ಇದಕ್ಕೆ "ಕನ್ನಡ ನಾಮವಿಜ್ಞಾನ"(Kannada Onomastics)ಎಂದು ಹೆಸರಿಟ್ಟಿದ್ದೇನೆ ಎನ್ನುವ ಡಾ.ಎಂ.ಎಂ.ಕಲಬುರ್ಗಿಯವರು...(ಈ ಕೃತಿ)ಭಾಷಿಕ ಸ್ತರದಲ್ಲಿ ಪ್ರಾರಂಭವಾಗಿ, ಚಾರಿತ್ರಿಕ-ಭೌಗೋಲಿಕ ಸ್ತರಗಳನ್ನು ತಬ್ಬಿಕೊಂಡು, ಸಾಂಸ್ಕೃತಿಕ ಸ್ತರದಲ್ಲಿ ಈ ಅಧ್ಯಯನ ವಿರಮಿಸುತ್ತದೆ. ಹೀಗಾಗಿ ನಾಮವಿಜ್ಞಾನ ಅನಿವಾರ್ಯವಾಗಿ ಶಾಸ್ತ್ರ-ಶಾಸ್ತ್ರೇತರವೆಂದು ಸಂಯುಕ್ತ ಅಭ್ಯಾಸವಾಗಿ ಪರಿಣಮಿಸುತ್ತದೆ..." ಎಂದಿದ್ದಾರೆ. ಈ ಕೃತಿಯ ವಿಷಯವನ್ನು ಲೇಖಕರು ನಾಮ, ವ್ಯಕ್ತಿನಾಮ, ಕುಟುಂಬನಾಮ, ಗ್ರಾಮನಾಮ ಎನ್ನುವ ಉಪಶೀರ್ಷಿಕೆಗಳಲ್ಲಿ ವಿಂಗಡಿಸಿಕೊಂಡು ಒಳರಚನೆಗಳ ಮೂಲಕ ವಿಶ್ಲೇಷಿಸಿರುವುದು ಸುಲಭ ಸಂವಹನಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಒಟ್ಟಾರೆ ಈ ಕ್ಷೇತ್ರದ ಮಹತ್ವದ ಕೃತಿ ಇದು. (ಪ್ರ. ಪ್ರ.ಮುದ್ರಣ, ಎಂ. ಎಂ. ಕಲಬುರ್ಗಿ: 'ಸೌಜನ್ಯ' ಕಲ್ಯಾಣನಗರ, ಧಾರವಾಡ, ಪರಿಷ್ಕ್ರತ ಆವೃತ್ತಿ, ಜಿ.ಕಲ್ಲಯ್ಯ ರೋಹಿಣಿ ಪ್ರಿಂಟ್, ಬೆಂಗಳೂರು. ೧೯೯೫)

ಕನ್ನಡ ಹಸ್ತಪ್ರತಿಶಾಸ್ತ್ರ:

kannada hastaprati shastra

ಈ ಕೃತಿ ಪ್ರಕಟವಾಗುವ ಮುಂಚೆ ಕನ್ನಡದಲ್ಲಿ ಹಸ್ತಪ್ರತಿಶಾಸ್ತ್ರರೂಪದ ಪೂರ್ಣಪ್ರಮಾಣದ ಗ್ರಂಥ ಪ್ರಕಟವಾಗಿದ್ದಿಲ್ಲ. ಇಂಥ ಸಂದರ್ಭದಲ್ಲಿ ಈ ಕೊರತೆಯನ್ನು ತುಂಬಲು ಡಾ. ಕಲಬುರ್ಗಿಯವರು ಈ ಕೃತಿಯನ್ನು ರಚಿಸಿರುವುದು 'ಅರಿಕೆ'ಯಿಂದ ಸ್ಪಷ್ಟವಾಗುತ್ತದೆ. ಕನ್ನಡದ ಮಟ್ಟಿಗೆ ಇದು ಮೊದಲ ಪ್ರಯತ್ನ. ಹಸ್ತಪ್ರತಿ ಹುಟ್ಟನ್ನೂ ಒಳಗೊಂಡಂತೆ ಅವುಗಳ ಪ್ರಸರಣ, ಸಂಗ್ರಹಣ, ವ್ಯವಸ್ಥಾಪನ ಮತ್ತು ಪ್ರಯೋಜನಗಳ ಅಧ್ಯಯನದ ಫಲಿತಗಳನ್ನು ಇಲ್ಲಿ ನೋಡಬಹುದಾಗಿದೆ. ಪೀಠಿಕೆಯಲ್ಲಿ ಹಸ್ತಪ್ರತಿಶಾಸ್ತ್ರದ ಸಂಕ್ಷಿಪ್ತ ಇತಿಹಾಸವಿದ್ದು, ಹಸ್ತಪ್ರತಿಶಾಸ್ತ್ರದ ಅಭ್ಯಾಸಿಗಳಿಗೆ ಪ್ರಯೋಜನವಾಗುವಂತೆ ಖಚಿತ ಆಧಾರಗಳೊಂದಿಗೆ ಈ ಕೃತಿಯನ್ನು ಇವರು ರೂಪಿಸಿದ್ದಾರೆ.
(ಪ್ರ.) ೧೯೯೩ರಲ್ಲಿ ಪ್ರಕಟವಾಗಿದ್ದ ಈ ಕೃತಿ, ೨೦೧೦ರಲ್ಲಿ ಮರುಮುದ್ರಣಗೊಂಡಿದೆ.

 

 

ಪ್ರತಿಬಿಂಬ (ಶಬ್ದಮಣಿದರ್ಪಣ ವಿವೇಚನೆ) :

ಶೀರ್ಷಿಕೆಯೇ ಹೇಳುವಂತೆ 'ಪ್ರತಿಬಿಂಬ' ಡಾ. ಕಲಬುರ್ಗಿಯವರು ಶಬ್ದಮಣಿ ದರ್ಪಣ  ಕುರಿತು ಕೈಕೊಂಡ ಮರುಶೋಧದ ಫಲವಾಗಿ ಮೂಡಿಬಂದುದರಿಂದ ಅಭ್ಯಾಸಿಗಳು ಅವಶ್ಯ ಓದಲೇಬೇಕಾದ ಒಂದು ಮೌಲಿಕ ಕೃತಿ. ಕೇಶಿರಾಜನ ಕೌಟುಂಬಿಕ ಹಿನ್ನೆಲೆ, ಅವನ ಮತದ ವಿಚಾರ, 'ಶಬ್ದಮಣಿದರ್ಪಣ'ರಚನೆಗೆ ಕಾರಣವಾದ ಸಾಹಿತ್ಯಿಕ ಒತ್ತಾಸೆ, ಅನಂತರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕಿಟೆಲ್, ಡಿ.ಎಲ್. ನರಸಿಂಹಾಚಾರ್ಯರ ಸಂಗ್ರಹ ಮತ್ತು ಮದ್ರಾಸ್ ಪ್ರತಿಗಳಲ್ಲಿ ಸೂತ್ರ, ಸೂತ್ರಗಳ ಆಧಿಕ್ಯ ಸೂತ್ರಗಳ ಪಾಠ, ವೃತ್ತಿ, ವ್ಯಾಖ್ಯಾನ, ಪ್ರಯೋಗ, ಟೀಕೆ ಮುಂತಾದವುಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಸಪ್ರಮಾಣವಾಗಿ ಎತ್ತಿತೋರಿಸುವ ಕೃತಿ ಇದಾಗಿದೆ. ಕೊನೆಯಲ್ಲಿ ಶಬ್ದಮಣಿದರ್ಪಣದ ಅಭ್ಯಾಸ ಪರಂಪರೆಯ ಸಮಗ್ರ ಚಿತ್ರಣವನ್ನು ಈ ಕೃತಿ ಒದಗಿಸುತ್ತದೆ.
(ಪ್ರ. ಪರಶುರಾಮ. ಕೋಡಗುಂಟಿ, ಬಂಡಾರ ಪ್ರಕಾಶನ-ಮಸ್ಕಿ, ಮೊದಲ ಮುದ್ರಣ-೧೯೭೪, ಮರುಮುದ್ರಣ, ೨೦೧೫.)

"ಚರಿತ್ರೆಯ ವಿಷಯದಲ್ಲಿ ನಮ್ಮ ಪ್ರಾಚೀನ ಕವಿಗಳು ತೋರಿಸಿದ ಐತಿಹಾಸಿಕ ಅವಜ್ಞೆ, ಹಸ್ತಪ್ರತಿಗಳ ವಿಷಯದಲ್ಲಿ ನಮ್ಮ ಲಿಪಿಕಾರರು ಮಾಡಿದ ಅಪ್ರಾಮಾಣಿಕ ನಕಲುಕಾರ್ಯಗಳು ಕನ್ನಡದ ಚಾರಿತ್ರಿಕ ಸಾಹಿತ್ಯಕ್ಕೆ ಒಂದು ದೊಡ್ಡ ಶಾಪವಾಗಿ ಪರಿಗಣಿಸಿವೆ. ಇವುಗಳಿಂದಾಗಿ ನಮ್ಮ ಇತಿಹಾಸ ಕವಿಗಳ ಕೈಯಲ್ಲಿ, ನಮ್ಮ ಕೃತಿಗಳು ಲಿಪಿಕಾರರ ಕೈಯಲ್ಲಿ ತಮ್ಮ ಮೂಲ ಸ್ವರೂಪವನ್ನು ಹಾಳು ಮಾಡಿಕೊಂಡುವು".