ಗ್ರಂಥಸಂಪಾದನ ಶಾಸ್ತ್ರ:
ಗೊಲ್ಲಸಿರುಮನ ಚರಿತೆ:
ಈ ಕೃತಿಯ 'ಪ್ರಸ್ತಾವನೆ'ಯಲ್ಲಿ ಸಂಪಾದಕ ಕಲಬುರ್ಗಿಯವರು ಅದಾಗಲೆ ಸಿದ್ಧಕವಿಯ 'ಸಿರುಮಣನಾಯಕನ ಸಾಂಗತ್ಯ'(೧೯೮೩ರಲ್ಲಿ) ಕೆಂಚಶೆಟ್ಟಿಸುತ ರಾಮನ 'ಸಿರುಮನ ಚರಿತೆ'(೧೯೯೧ರಲ್ಲಿ) ಸಂಪಾದಿಸಿ; ಪ್ರಕಟಿಸಿರುವುದನ್ನು ವಿವರಿಸುತ್ತ ಪ್ರಸ್ತುತ 'ಗೊಲ್ಲಸಿರುಮನ ಚರಿತೆ' ತಾವು ಪ್ರಕಟಿಸುತ್ತಿರುವ ಮೂರನೆಯ ಕೃತಿ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕವಿ ಚರಿತೆಕಾರರೂ, ಅನ್ಯಕವಿಗಳೂ ಉಲ್ಲೇಖಿಸದಿರುವ ಈ ಕೃತಿಯ ಕರ್ತೃ ಮಲ್ಲಕವಿ ಇರಬೇಕೆಂದು ಕೆಲವು ಆಂತರಿಕ ಪ್ರಮಾಣಗಳಿಂದ ಊಹಿಸುವ ಕಲಬುರ್ಗಿಯವರು, ಅಂಥ ಆಧಾರಗಳಿಂದಲೇ ಅವನು 'ವೀಶೈವ'ನಾಗಿರಬೇಕೆಂದೂ ಹೇಳುತ್ತಾರೆ. ಈ ಕೃತಿಯಲ್ಲಿ ಆರು ಸಂಧಿಗಳಿದ್ದು, ಚಂದ್ರಗಿರಿಯಲ್ಲಿ ಆಗ ಆಳುತ್ತಲಿದ್ದ ಸಾಳುವ ನರಸಿಂಹ ಹಾಗೂ ಗೊಲ್ಲಸಿರುಮನ ಮಧ್ಯೆ ಸಂಭವಿಸಿದ ಯುದ್ಧ ಸಿರುಮನ ಸೋಲಿನಲ್ಲಿ ಕೊನೆಗೊಳ್ಳುವ ಚರಿತ್ರೆಯನ್ನು ಹೇಳುವುದಕ್ಕೆ ಮೀಸಲಾಗಿವೆ. ಈ ಸೋಲು, ಸಿರುಮನ ಸ್ವಾಭಿಮಾನವನ್ನು ನಿರೂಪಿಸುವುದರ ಜೊತೆಗೆ ಅವನ ಕುಟುಂಬದ ಮೇಲೆ ಅದು ಬೀರುವ ದುರಂತ ಪರಿಣಾಮದ ಕರುಣಾಜನಕ ಕಥೆಯನ್ನು ತೆರೆದಿಡುತ್ತದೆ. (ಪ್ರ. ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ೧೯೯೪).
ಕುಮಾರ ರಾಮಯ್ಯನ ಚರಿತ್ರೆ:
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ - ೨೦೦೧
ಸಿದ್ಧಮಂಕಚರಿತೆ / ತಗರ ಪವಾಡ :
'ಸಿದ್ದಮಂಕ ಚರಿತೆ'ಯ ಕರ್ತೃ ಯಾರೆಂಬುದು ತಿಳಿದಿಲ್ಲ ಡಿ.ಎಲ್. ನರಸಿಂಹಾಚಾರ್ಯರು ತಾವು ಸಂಪಾದಿಸಿದ ಸಿದ್ಧರಾಮ ಚರಿತ್ರದ ಪೀಠಿಕೆಯಲ್ಲಿ ಇದರ ಕರ್ತೃ ಸಿದ್ದಯ್ಯನೆಂಬ ಕವಿ ಇರಬಹುದೆಂದು ಉಹಿಸಿದ್ದಾರೆ. ಕವಿಯ ಕಾಲದ ಬಗ್ಗೆಯೂ ಹೆಚ್ಚಿನ ಆಧಾರಗಳು ಇರುವುದರಿಂದ ಕೃತಿಯ ಛಂದಸ್ಸು, ಭಾಷೆ ಇತ್ಯಾದಿ ಆಂತರಿಕ ಪ್ರಮಾಣಗಳನ್ನು ಆಧರಿಸಿ ಈ ಕೃತಿಯ ಕಾಲ ಸುಮಾರು ೧೭ನೆಯ ಶತಮಾನದವಿರಬಹುದೆಂದೂ ಒಂದು ವೇಳೆ ಇದು ನಿಜವಾದರೆ ಹಾಲುಮತ ಕುರಿತ ಪುರಾಣಗಳಲ್ಲಿ ಇದೇ ಮೊದಲಿನದಾಗಬಹುದೆಂದೂ ಸಂಪಾದಕರಲ್ಲೊಬ್ಬರಾದ ಡಾ. ಎಂ.ಎಂ.ಕಲಬುರ್ಗಿಯವರು ಉಹಿಸಿದ್ದಾರೆ. "ಲಿಂಗಾಯತ ಹಾಗೂ ಕುರುಬ ಸಮಾಜಗಳ ಏಕೀಕರಣವನ್ನು ಧ್ವನಿಸುವ ಪುರಾಣೀಕೃತ ಇತಿಹಾಸ ಕೃತಿಯಾಗಿರುವ ಈ ಸಿದ್ಧಮಂಕ ಚರಿತೆ, ಪ್ರಸ್ತುತ ಎರೆಡೂ ಸಮಾಜಗಳ ವಿಲಿನೀಕರಣ ಸಂದರ್ಭದ ಘಟನೆಯನ್ನು ಆಧರಿಸಿದೆ. ಬಹುಶಃ "ಭಂಡಾರ ಸಂಸ್ಕೃತಿ"ಯಿಂದ "ವಿಭೂತಿ ಸಂಸ್ಕೃತಿ"ಗೆ ಹೊರಳುವ, "ಸಿದ್ಧಪಂಥೀಯ"ರು "ಶರಣಪಂಥೀಯ"ರಾಗುವ ಕ್ರಿಯೆ ಪರೋಕ್ಷವಾಗೀ ಇಲ್ಲಿ ಕಾಣುತ್ತದೆ. ಅಲ್ಲಮಪ್ರಭು ಕಾರಣವಾಗಿ ಸಿದ್ಧರಾಮ ಕಾರಣವಾಗಿ ಮಂಕಯ್ಯ ತಂದೆ ಶರಣ ಸಂಸ್ಕೃತಿಗೆ ಹೊರಳಿದ ಎರೆಡು ಘಟನೆಗಳ ಸಂಪುಟವಾಗಿರುವ ಈ ಕೃತಿ, ಶರಣರ "ಉದಾರವಾದಿ ಮತಾಂತರ ದೃಷ್ಟಿ"ಯೀಂದಲೂ ಮಹತ್ವವಾಗಿದೆ" ಎಂದಿದ್ದಾರೆ ಸಂಪಾದಕರು. ಈ ಕಾವ್ಯ ನಾಲ್ಕು ಸಂಧಿಗಳನ್ನು ಒಳಗೊಂಡಿದ್ದು , ಚತುರ್ಥಸಂಧಿ ದೊಡ್ಡದಾಗಿದೆ.
'ತಗರ ಪವಾಡ'- ಕುರುಬ ಕುರಿತು ಸಮಾಜವನ್ನು ಕುರಿತ ಇನ್ನೊಂದು ಸಾಂಗತ್ಯಕಾವ್ಯ ಸಿದ್ಧಮಂಕ ಚರಿತೆಯ ಹೆಗ್ಗಗೌಡನು ತಗರ ಪವಾಡದಲ್ಲಿ ಪದ್ಮಗೊಂಡನೆನಿಸಿದ್ದಾನೆ. ಆದರೆ ತಗರ ಪವಾಡದಲ್ಲಿ ಪದ್ಮಗೊಂಡನ ಮಗ ಶಾಂತಮುತ್ತಯ್ಯ ಕಥಾನಾಯಕನೆನಿಸಿದರೆ, ಸಿದ್ಧಮಂಕ ಚರಿತೆಯಲ್ಲಿ ಶಾಂತಮುತ್ತಯ್ಯನ ತಂದೆ ಪದ್ಮಗೌಡ (ಹೆಗ್ಗ ಗೌಡ) ಒಬ್ಬ ಉಪನಾಯಕ. ತಗರ ಪವಾಡದಲ್ಲಿ ಸತ್ತ ಕುರಿ ಬದುಕಿಸಿದ ಕಥೆಯಿದ್ದು, ಕಲ್ಯಾಣದಿಂದ ಹೊರಹೋಗಿದ್ದ ಕುರುಬರು ಮರಳಿ ಬರುವಂತಾದುದು ಈ ಪವಾಡದಿಂದಲೇ ಎನ್ನುವ ವಿಷಯವಿದ್ದರೆ, ಸಿದ್ಧಮಂಕ ಚರಿತೆಯಲ್ಲಿ 'ಸತ್ತಕುರಿಯ' ವಿಷಯ ಕಾರಣವಾಗಿ ಕಲ್ಯಾಣದಿಂದ ಹೊರಹಾಕಲ್ಪಟ್ಟಿದ್ದ ಕುರುಬನನ್ನು ಒಳಗೆ ಕರೆದುಕೊಂಡ ವಿವರಗಳಿವೆ. ಅಂದರೆ ಒಂದೇ ಮೂಲದ ಕಥೆಗಳು ಎರೆಡು ಕವಲುಗಳಾಗಿ ಬೆಳೆದಿವೆ. 'ತಗರ ಪವಾಡ' ಎರಡು ಸುರುಳಿಗಳಲ್ಲಿದ್ದು, ಇದರ ಪೂರ್ಣಪಠ್ಯ ಸಿಕ್ಕಿಲ್ಲ. (ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ಸಂಸ್ಥಾನಮಠ, ಗದಗ-೨೦೦೪).