ಧಾರವಾಡ ತಾಲೂಕಿನ ಶಾಸನಗಳು

ಶಾಸನ ಸಾಹಿತ್ಯ:

ಧಾರವಾಡ ತಾಲೂಕಿನ ಶಾಸನಗಳು:

shasan_12

ಈ ಕೃತಿ, ಧಾರವಾಡ ತಾಲೂಕು ವ್ಯಾಪ್ತಿಯಲ್ಲಿ ಬರುವ ೧೯೩೧ ಗ್ರಾಮಗಳಲ್ಲಿ ೨೮ ಗ್ರಾಮಗಳ ೭೪ ಶಾಸನಗಳ ಪರಿವೀಕ್ಷಣೆ ಕೈಕೊಂಡ ಒಂದು ಪಟ್ಟಿಯನ್ನು ಒದಗಿಸುತ್ತದೆ. ಅದರಲ್ಲಿಯ ಒಟ್ಟು ಶಾಸನಗಳ ೧/೨ರಷ್ಟು ಶಾಸನಗಳು ಮೊದಲ ಬಾರಿಗೆ ಈ ಕೃತಿಯಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ೨೮ ಗ್ರಾಮಗಳ ಹೊರತಾಗಿಯೂ ಇನ್ನುಳಿದ ೧೩೫ ಗ್ರಾಮಗಳಲ್ಲಿ ಸರಿಯಾಗಿ ಸರ್ವೇಕಾರ್ಯ ಕೈಕೊಂಡರೆ ಹೊಸ ಶಾಸನಗಳು ಸಿಗುವ ಸಂಭವ ಹೆಚ್ಚು ಎಂದು ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಹೀಗೆ ಒಂದು ವ್ಯವಸ್ಥಿತ ಯೋಜಿತ ಕ್ರಮದಲ್ಲಿ ಇಲ್ಲಿ ಶಾಸನದ ಪರಿಚಯ, ಶಾಸನದ ಸಾರಾಂಶ, ಶಾಸನದ ಪಾಠ, ಶಾಸನ ಸಿಕ್ಕ ಊರಿನ ಹೆಸರು, ಶಾಸನ ರಚನೆಯ ಕಾಲ, ಅದು ಲಭಿಸಿರುವ ಸ್ಥಳ, ಅದರ ಸಧ್ಯದ ಸ್ಥಿತಿ, ಆ ಕಾಲದಲ್ಲಿದ್ದ ಅರಸು-ಮಾಂಡಲಿಕರು, ಆ ಶಾಸನ ನಿರ್ಮಿತಿಗೆ ಕಾರಣವಾದ ಪ್ರೇರಣೆ, ಶಾಸನಗಳನ್ನು ಪರಿಷ್ಕರಿಸಲು ಅನುಸರಿಸಿದ ವಿಧಾನ, ಕನ್ನಡೇತರರಿಗಾಗಿ ಇಂಗ್ಲೀಷ ಭಾಷೆ, ರೋಮನ್ ಲಿಪಿ ಬಳಕೆ. ಈ ಸಂಗತಿಗಳನ್ನೆಲ್ಲ 'ಪ್ರಸ್ತಾವನೆ'ಯಲ್ಲಿ ವಿವರಿಸಿ, ಅಧ್ಯಯನಕ್ಕೆ ಒಂದು ಸೂಕ್ತ ಪ್ರವೇಶವನ್ನು ಒದಗಿಸಲಾಗಿದೆ. ವಿಶೇಷವೆಂದರೆ, ಈ ಶಾಸನಗಳನ್ನು ಅರಸರ, ಮಾಂಡಲೀಕರ, ಗಾವುಂಡರ ಆಡಳಿತ-ಅಧಿಕಾರದ ಹಿನ್ನೆಲೆಯಲ್ಲಿಯೂ ಜೈನ, ಬ್ರಾಹ್ಮಣ, ಶೈವ,ವೀರಶೈವ ಧರ್ಮಗಳ ದೃಷ್ಟಿಯಿಂದಲೂ, ಸಾಹಿತ್ಯ ಮತ್ತು ಸಾಮಾಜಿಕ ಆಶಯಗಳಿಂದಲೂ ಗಮನಿಸಲಾಗಿದೆ.

ಕನ್ನಡ ಶಾಸನ ಸಂಪದ:

ಕರ್ನಾಟಕ ಪ್ರಾಚೀನ ಸಂಸ್ಕೃತಿಯನ್ನು  ಸಾಕ್ಷೀಕರಿಸುವಂತಿರುವ ಪ್ರಾಕೃತ, ಸಂಸ್ಕೃತ, ಕನ್ನಡ, ತೆಲಗು, ಮಲೆಯಾಳ, ಉರ್ದು ಭಾಷೆಗಳಲ್ಲಿ ಈ ವರೆಗೆ ಲಭ್ಯವಾದ ಸುಮಾರು ೨೫೦೦೦ ಶಾಸನಗಳನ್ನು ಪಾಶ್ಚಾತ್ಯ ಹಾಗೂ ಪೌರಾತ್ಯ ವಿದ್ವಾಂಸರು ಸಂಗ್ರಹಿಸಿದ್ದಾರೆ. ಈ ಸಂಗ್ರಹದಲ್ಲಿ ಸೇರಿರುವ ಕನ್ನಡ ಶಾಸನಗಳ ಅಭ್ಯಾಸ, ಕನ್ನಡ ಎಂ.ಎ. ಓದುವ ವಿದ್ಯಾರ್ಥಿಗಳಿಗೆ ಇರಬೇಕೆಂಬ ಉದ್ದೇಶದಿಂದ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಕಾಲಘಟ್ಟ ಮತ್ತು ಜೈನ, ಬ್ರಾಹ್ಮಣ, ವೀರಶೈವ ಧರ್ಮಗಳನ್ನು ಪ್ರತಿನಿಧಿಸುವಂತೆ ಪ್ರಸ್ತುತ ಕೃತಿಯಲ್ಲಿ ೩೨ ಕನ್ನಡ ಶಾಸನಗಳನ್ನು ಸಂಗ್ರಹಿಸಲಾಗಿದೆ. ಅಭ್ಯಾಸಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅನುಬಂಧದಲ್ಲಿ ಶಾಸನಗಳ ಮೂಲಪಠ್ಯ ವಿಷಯವನ್ನು ಹಾಗೂ ವಿವರಣಾತ್ಮಕ ಪದಕೋಶವನ್ನು ಒದಗಿಸಿರುವುದರಿಂದ 'ಉದ್ದೇಶ' ಫಲಿಸುವಂತಾಗಿದೆ. ರನ್ನ, ಜನ್ನ, ಮಧುರ, ಕವಿರಾಜರಾಜ, ಸೇನಬೋವ, ಗುಣವರ್ಮ, ಬೋಕಿಮಯ್ಯ, ಕೇಶಿರಾಜ, ಚಮೂಪ ಮೊದಲಾದ ಕವಿಗಳು ಶಾಸನಗಳನ್ನೂ ಬರೆದು ಶಾಸನ ಕವಿಗಳ ಪಟ್ಟಿಯಲ್ಲಿ ಸೇರಿರುವದನ್ನು ವಿಶೇಷವಾಗಿ ಇಲ್ಲಿ ಎತ್ತಿ ಹೇಳಲಾಗಿದೆ. ಈ ಕೃತಿಯನ್ನು ಕಲಬುರ್ಗಿಯವರು, ಗುರುಗಳಾದ ಡಾ. ಆರ್. ಸಿ. ಹಿರೇಮಠ ಅವರೊಂದಿಗೆ ಸಂಪಾದಿಸಿದ್ದಾರೆ.