ನಾನು ಕಲಬುರ್ಗಿ

ನಾನು ಕಲಬುರ್ಗಿ-ಡಾ.ಎಂ.ಎಂ.ಕಲಬುರ್ಗಿ ಬರಹಗಳ ವಾಚಿಕೆ:

naanu kalaburgi

ಇಲ್ಲಿಯ ವಾಚಿಕೆಗಳನ್ನು ಆಯ್ದು ಸಂಪಾದಿಸಿದವರು ನಮ್ಮ ಸಂದರ್ಭದ ಹಿರಿಯ ಚಿಂತಕರಾದ ಡಾ.ರಾಜೇಂದ್ರ ಚನ್ನಿ, ಡಾ. ರಹಮತ್ ತರೀಕೆರೆ ಹಾಗೂ ಡಾ. ಮೀನಾಕ್ಷಿ ಬಾಳಿ. ಇವರು ಈ ಕೃತಿ ನಿರ್ಮಿತಿಯ ಉದ್ದೇಶವನ್ನು ಸ್ಪಷ್ಟ್ಪಡಿಸುತ್ತ "...ಕಲಬುರ್ಗಿಯವರ ಬರಹವನ್ನು ಈ ವರೆಗೆ ಓದದೇ ಇರುವ, ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಯುವ ಬರಹಗಾರರಿಗೆ ಹಾಗೂ ಸಂಶೋಧಕರಿಗೆ ಅವರ ಬರಹದ ಕೆಲವು ಮುಖಗಳನ್ನು ಪರಿಚಯಿಸಬಹುದು ಹಾಗೂ ಆ ಮೂಲಕ ಅವರ ಸಂಶೋಧನಾ ಮಾದರಿಯನ್ನು, ಈ ಬಗೆಯ ಸಂಶೋಧನೆಯಿಂದ ಅವರು ಕಂಡುಕೊಂಡ ಸಂಗತಿಗಳನ್ನು ಪರಿಚಯಿಸುವುದು. ಈ ಬಗೆಯ ಓದಿನಿಂದ ಓದುವವರಿಗೆ ಅವರ ಸಂಶೋಧನೆಯ ಗಾಂಭೀರ್ಯ, ವಿಸ್ತಾರ ಹಾಗೂ ಸಾಂಸ್ಕೃತಿಕ ಮಹತ್ವವು ಅರಿವಿಗೆ ಬರುತ್ತದೆಯೆಂದು ನಿರಿಕ್ಷಿಸಲಾಗಿದೆ" ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬುರ್ಗಿಯವರ ಮಾರ್ಗಸಂಪುಟಗಳಿಂದ ಅವರ ಸಂಶೋಧನೆ ಮತ್ತು ಚಿಂತನಾಕ್ರಮವನ್ನು ಪ್ರತಿನಿಧಿಸುವ ೧೫ ಲೇಖನಗಳನ್ನು ಆಯ್ದುಕೊಂಡು ಅವುಗಳಿಗೆ ಪೂರಕವಾದ ಉಲ್ಲೇಖನೀಯ ಹೇಳಿಕೆ ಹಾಗೂ ಅವರನ್ನು ಪ್ರಭಾವಿಸಿದ ವ್ಯಕ್ತಿ-ಘಟನೆಗಳನ್ನು ಸಂಗಡಿಸಿ ಪ್ರಕಟಿಸಿದ ಕೃತಿ ಇದಾಗಿದೆ. (ಪ್ರ. ಲಡಾಯಿ ಪ್ರಕಾಶನ, ಗದಗ-೨೦೧೬)

ಡಾ.ಎಂ.ಎಂ.ಕಲಬುರ್ಗಿ ಸಂಶೋಧನ ಸಾಹಿತ್ಯ:

Dr mmk samshodhana sahitya

ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆ ಜಾಗತಿಕ ಮಟ್ಟದಲ್ಲಿ ತಲ್ಲಣವನ್ನುಂಟು ಮಾಡಿತು. ಈ ಆಘಾತವನ್ನು ಭರಿಸಲಾಗದ ಸೂಕ್ಷ್ಮ ಮನಸ್ಸುಗಳು ಅವರ ಸಾಹಿತ್ಯ-ಸಂಶೋಧನ ಕುರಿತು ಕೃತಿ ರಚನೆ, ವಿಚಾರ ಸಂಕಿರಣ, ಹತ್ಯಾವಿರೋಧಿ ಹೋರಾಟಗಳ ಮೂಲಕ ಅವರಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದವು. ಈ ನಿಟ್ಟಿನಲ್ಲಿ ಕಲಬುರ್ಗಿಯ ಬಸವ ಸಮಿತಿಯ ಡಾ. ಬಿ.ಡಿ.ಜತ್ತಿ ವಚನಾಧ್ಯಯನ ಮತ್ತು ಸಂಶೋಧನ ಕೇಂದ್ರವು ಡಾ.ಎಂ.ಎಂ.ಕಲಬುರ್ಗಿಯವರ ಸಂಶೋಧನ ಸಾಹಿತ್ಯ ಕುರಿತು (ದಿನಾಂಕ ೧೩,೧೪ ನವೆಂಬರ್ ೨೦೧೫) ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ವಿಚಾರ ಸಂಕಿರಣದಲ್ಲಿ ಒಟ್ಟು ೧೮ ಪ್ರಬಂಧಗಳು ಮಂಡಿತವಾದವು. ಅವುಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುವಾಗ 'ವಿಚಾರಸಂಕಿರಣ'ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೂವರ ಮಾತುಗಳನ್ನೂ ಸೇರಿಸಿಕೊಂಡು ಈ ಕೃತಿಯನ್ನು ಪ್ರಕಟಿಸಲಾಗಿದೆ. ಇದನ್ನು ಸಂಪಾದಿಸಿದವರು ನಮ್ಮ ನಾಡಿನ ವಿದ್ವಾಂಸರಲ್ಲೊಬ್ಬರಾದ ಡಾ. ವೀರಣ್ಣ ದಂಡೆ ಅವರು. ಅನುಬಂಧಗಳನ್ನೂ ಒಳಗೊಂಡಂತೆ ಡಾ. ಎಂ.ಎಂ.ಕಲಬುರ್ಗಿ: ಬದುಕು -ಸೇವೆ, ಅವರ ಶರಣ ಶಾಸ್ತ್ರಸಾಹಿತ್ಯ ಸಂಶೋಧನೆ, ಅವರ ಸಾಹಿತ್ಯ ಸಂಶೋಧನೆ, ಅವರ ಶರಣ ಅಧ್ಯಯನಗಳು ಹೀಗೆ ವಿಷಯ ವಿಂಗಡಿತ ಕ್ರಮದಲ್ಲಿ ಈ ಕೃತಿಯನ್ನು ಸಂಪಾದಿಸಿ ಪ್ರಕಟಿಸಲಾಗಿದೆ. ಕಲಬುರ್ಗಿಯವರ ಮರಣಾನಂತರ ಅವರ ಬದುಕು ಮತ್ತು ವಿದ್ವತ್ತು ಕುರಿತು ಪ್ರಕಟವಾಗಿರುವ ಎಲ್ಲ ಕೃತಿಗಳಿಗಿಂತ ಭಿನ್ನವಾಗಿ ಅಷ್ಟೇ ಗಂಭೀರವಾಗಿ ಚಿಂತಿಸಿದ ಕೃತಿ ಇದಾಗಿದೆ. (ಪ್ರ. ಡಾ. ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಅನುಭವ ಮಂಟಪ, ಬಸವ ಸಮಿತಿ, ಕಲಬುರ್ಗಿ-೨೦೧೬).

ಡಾ. ಎಂ.ಎಂ.ಕಲಬುರ್ಗಿ ಹತ್ಯೆ - ಪ್ರತಿಕ್ರಿಯೆಗಳು:

mmk hatye pratikriye

ಈ ಕೃತಿಯ ಸಂಪಾದಕರು ಕೂಡ ಡಾ. ವೀರಣ್ಣ ದಂಡೆಯವರು. ಈ ಕುರಿತು ಅವರು ಆಡಿದ ಕೆಲ ಮಾತುಗಳು ಕೃತಿಯ ಉದ್ದೇಶವನ್ನು ಅದರ ಒಳತಿರುಳನ್ನು ಸ್ಪಷ್ಟಪಡಿಸುವುದರಿಂದ ಅವುದಳನ್ನೇ ಇಲ್ಲಿ ಉಲ್ಲೇಖಿಸಲಾಗಿದೆ. "ಡಾ. ಎಂ.ಎಂ. ಕಲಬುರ್ಗಿಯವರಂತಹ ಧೀಮಂತ ಕನ್ನಡಿಗನ ಅತ್ಯಂತ ದಾರೂಣಮಾಯವಾದ , ಹಿಂಸ್ರಕ ಕೊನೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾದರೂ ಅಗತ್ಯವಾಗಿ ದಾಖಲಾಗಬೇಕಾದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಮುದ್ರಣ ಮಾದ್ಯಮಗಳಲ್ಲಿ ದಾಖಲಾದ ಸುದ್ದಿಗಳನ್ನು, ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ, ಸಂಯೋಜಿಸಿ, ಸಂಪಾದಿಸಿ ಇಂತಹ ಒಂದು ದಾಖಲೆ ಸಾಹಿತ್ಯವನ್ನು ಹಿಡಿದಿಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಈ ಕೃತಿಯ ಗರ್ಭದಲ್ಲಿ ದುರ್ಘಟನೆಯೊಂದು ಅಡಗಿದ್ದರೂ ಅದು ಕನ್ನಡ ಸಂಸ್ಕೃತಿಯ ಸ್ಮೃತಿಯಲ್ಲಿ ಉಳಿಯಬೇಕಾದುದು ತೀರ ಅವಶ್ಯವೆನಿಸುತ್ತದೆ. ನಾಡಿನ ಸಾವಿರಾರು ಜನ ಹಿರಿಯರ, ಕಿರಿಯರ ಪ್ರತಿಕ್ರಿಯೆಗಳ ಹುಚ್ಚವೇ ಈ ಕೃತಿ. ಇದು ಡಾ. ಎಂ.ಎಂ.ಕಲಬುರ್ಗಿ ಅವರಿಗೆ ಕರ್ನಾಟಕದ ಭಾವನೆಗಳು ಅರ್ಪಿಸುತ್ತಿರುವ ಶ್ರದ್ಧಾಂಜಲಿ ಎಂದೇ ನಾನು ಭಾವಿಸುತ್ತೆನೆ. ಮುಂದೆ ಎಂದೂ ಇಂತಹ ಕರಾಳ ಘಟನೆ ಕರ್ನಾಟಕದಲ್ಲಿ ಪುನರಾವರ್ತನೆಯಾಗದಿರಲಿ ಎಂದು ಭಾವನೆ ಈ ಕೃತಿ ಪ್ರಕಟನೆಯ ಹಿಂದಿದೆ..." ಎಂದಿದ್ದಾರೆ. ಇಲ್ಲಿಯ ಒಟ್ಟು ಪ್ರತಿಕ್ರಿಯೆಗಳನ್ನು ನಾಲ್ಕು ಭಾಗಗಳಲ್ಲಿ ವಿಭಜಿಸಿಕೊಳ್ಳಲಾಗಿದ್ದು, ಆಯಾ ವಿಭಾಗಗಳ ಮುಖ್ಯ ಶೀರ್ಷಿಕೆಗಳ ಅಡಿಯಲ್ಲಿ ಪುನಃ ಕೆಲವು ಉಪಶೀರ್ಷಿಕೆಗಳನ್ನು ಸೃಷ್ಟಿಸಿಕೊಳ್ಳಲಾಗಿದೆ. ಭಾಗ-೧ ಡಾ.ಎಂ.ಎಂ.ಕಲಬುರ್ಗಿ ಹತ್ಯೆ/ಪ್ರತಿಭಟನೆಗಳು. ಭಾಗ ೨ ಲಬುರ್ಗಿಯವರ ಹತ್ಯೆಃ ಲೇಖನ ರೂಪದ ಪ್ರತಿಕ್ರಿಯೆಗಳು. ಭಾಗ-೩ ಮರಾಠಿ ಭಾಷಿಕರ ಬರಹಗಳು. ಭಾಗ-೪ ಕವಿಮಾರ್ಗ. ಇವುಗಳ ಅಡಿಯಲ್ಲಿ ಇಡಿಯಾಗಿ ಡಾ. ಕಲಬುರ್ಗಿಯವರ ಹತ್ಯೆಗೆ ತೋರಿದ ಪ್ರತಿಭಟನೆ-ಪ್ರತಿಕ್ರಿಯೆಗಳನ್ನು ಕಟ್ಟಿಕೊಡುವ ನೆವದಲ್ಲಿ ಸಾಂಸ್ಕೃತಿಕ ಜಗತ್ತಿನ ಪ್ರಜ್ಞಾವಂತರು ಏನೇನು ಯೋಚಿಸಿದರು, ಹೇಗೆ ಯೋಚಿಸಿದರು ಎನ್ನುವುದನ್ನು ಚಾರಿತ್ರಿಕಗೊಳಿಸಿದ ಕೃತಿಯಿದು. (ಪ್ರ. ಕವಿಮಾರ್ಗ ಪ್ರಕಾಶನ ತೇಜಸ್ವಿನಿ, ಸರಸ್ವತಿಪುರ, ಕಲಬುರಗಿ-೨೦೧೬).