ಗ್ರಂಥಸಂಪಾದನೆ :
ಕೊಂಡಗುಳಿ ಕೇಶಿರಾಜನ ಕೃತಿಗಳು :
ವಿದ್ಯಾಪ್ರಸಾರ ಕೇಂದ್ರವೆನಿಸಿದ್ದ ಸಿಂದಗಿ ತಾಲೂಕಿನ ಕೊಂಡಗುಳಿ (ಡೋಣಿ) ಧಾರ್ಮಿಕವಾಗಿಯೂ ಶೈಕ್ಷಣಿಕವಾಗಿಯೂ ಪ್ರಸಿದ್ಧಿಪಡೆದಿದ್ದ ಅಗ್ರಹಾರ. ಇಂಥ ಗ್ರಾಮಪರಿಸರದಲ್ಲಿ ಹುಟ್ಟಿದ್ದ ಕೇಶಿರಾಜನ ಕೌಟುಂಬಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಬದುಕಿನ ವಿವರಗಳನ್ನು ಸಂಪಾದಕ ಡಾ.ಕಲಬುರ್ಗಿಯವರು ವೀರಶೈವ ಕೃತಿಗಳು, ಶಾಸನಗಳು ಮತ್ತು ಆತನ ಚರಿತ್ರೆಯನ್ನು ಆಧರಿಸಿ ಬರೆದ ತಮ್ಮ 'ಪ್ರಸ್ತಾವನೆ'ಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅಲ್ಲದೆ ಅವನ (೧) ಮಂತ್ರಮಹತ್ವದ ಕಂದ (೨) ಲಿಂಗಸ್ತ್ರೋತ್ರದ ಕಂದ-೧(೩) ಲಿಂಗಸ್ತ್ರೋತ್ರದ ಕಂದ-೨ (೪) ಕೇಶಿರಾಜ ಡಣಾಯಕರ ಕಂದ (೫) ಶೀಲಮಹತ್ವದ ಕಂದ (೬) ನವರತ್ನಮಾಲಾ (೭) ಅಳಲಾಷ್ಟಕ. ಈ ಏಳು ಕೃತಿಗಳನ್ನು ಪರಿಷ್ಕರಿಸಿ ಅವುಗಳ ಸಂಕ್ಷಿಪ್ತ ಪರಿಚಯದೊಂದಿಗೆ ಸಂಪಾದಕರು ಒದಗಿಸಿದ್ದಾರೆ. ಈ ಮೂಲಕ ಬಸವಪೂರ್ವಯುಗದ ಪ್ರಭುತ್ವವನ್ನು ತಿರಸ್ಕರಿಸಿ ಹೊರಬಂದು ಪವಾಡಗಳನ್ನು ಮೆರೆದ ಈ ಶಿವಭಕ್ತನ ಅಧ್ಯಯನ ಬಹಳ ಮುಖ್ಯವೆನಿಸುತ್ತದೆ. (ಪ್ರ. ವೀರಶೈವ ಅಧ್ಯಯನ ಸಂಸ್ಥೆ, ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ -ಗದಗ-೧೯೯೯.)
ಗುಂಡಬಸವೇಶ್ವರ ಚರಿತ್ರೆ/ ಕೊಡೆಕಲ್ ವಚನ ವಚನವಾಕ್ಯ (ಸಂಪುಟ-೪):
ಅಪ್ರಕಟಿತ ಸಾಹಿತ್ಯ ಯೋಜನೆಯ ಅಡಿಯಲ್ಲಿ ಈ ಎರಡೂ ಕೃತಿಗಳನ್ನು ಡಾ. ಎಂ.ಎಂ. ಕಲಬುರ್ಗಿ ಮತ್ತು ಸಂಗಪ್ಪಯ್ಯಸ್ವಾಮಿ ಸೇರಿ ಸಂಪಾದಿಸಿದ್ದಾರೆ. ಇಲ್ಲಿಯ ಮೊದಲ (ಗುಂಡ...) ಕೃತಿ 'ಪ್ರಸ್ತಾವನೆ'ಯಲ್ಲಿ ಡಾ. ಕಲಬುರ್ಗಿಯವರು "ಗುಂಡ ಬಸವೇಶ್ವರ ಚರಿತ್ರೆ ಪ್ರಾದೇಶಿಕ ಧರ್ಮಸಂಪ್ರದಾಯವೊಂದನ್ನು, ಈ ಸಂಪ್ರದಾಯದ ಮುಖ್ಯ ವ್ಯಕ್ತಿಯೊಬ್ಬನ ಚರಿತ್ರೆಯನ್ನು ಸಂಕಥಿಸುವ ಸಾಂಗತ್ಯ ಕೃತಿಯಾಗಿದೆ" ಎಂದಿದ್ದಾರೆ. ಆ ಮುಖ್ಯವ್ಯಕ್ತಿ ಗುಂಡ ಬಸವೇಶ್ವರರಾಗಿದ್ದು, ಕೃತಿಯ ಕಥಾನಾಯಕನೂ ಆವನೇ ಆಗಿದ್ದಾನೆ. ಭಾರತದ ಪ್ರಾಚೀನತಮ ಧಾರ್ಮಿಕ ಸಂಪ್ರದಾಯ ಸಿದ್ಧಪಂಥ ಮತ್ಸೇಂದ್ರನಾಥ, ಗೋರಖನಾಥರೆಂಬ ಯೋಗನಿಷ್ಠ ಬೈರಾಗಿಗಳಿಂದಾಗಿ 'ನಾಥಪಂಥ' ಜನ್ಮತಾಳಿ, ಭಾರತದ ಬೇರೆ ಬೇರೆ ಭಾಗಗಳಲ್ಲಿ ರೂಪಾಂತರ ಹೊಂದಿ ನಿಂತಿತು. ಕರ್ನಾಟಕದಲ್ಲಿ ಕಲ್ಯಾಣ ಬಸವಣ್ಣನ ಪ್ರಭಾವ ಕಾರಣವಾಗಿ ಈ ಪಂಥ ಒಂದಿಷ್ಟು ಬದಲಾದ ಸ್ಥಿತಿಯಲ್ಲಿ 'ಆರೂಢಪಂಥ'ವಾಗಿ ಬೆಳೆಯಿತು. ಮೊದಲು ಅಸ್ಪಷ್ಟ ರೂಪದಲ್ಲಿ ತಲೆಯೆತ್ತಿದ್ದ ಈ ಸಂಪ್ರದಾಯಕ್ಕೆ ಒಂದು ಸ್ಪಷ್ಟತೆ ಒದಗಿಸಿದವನು ಕೊಡೆಕಲ್ ಬಸವಣ್ಣ. ಇದರಿಂದಾಗಿ ಅಧ್ಯಯನಗಳು ಇವನ ಕಡೆಗೇ ಹೆಚ್ಚು ಗಮನ ಹರಿಸಿದವು. ಪರಿಣಾಮವಾಗಿ ಗುಂಡ ಬಸವಣ್ಣ ಅಲಕ್ಷಿತನಾಗಿ ಉಳಿದುಬಿಟ್ಟ. ಇನ್ನೂ ವಿಪರೀತವೆಂದರೆ ಇವರಿಬ್ಬರೂ ಬೇರೆ ಬೇರೆಯಲ್ಲ ಎನ್ನುವ ಅಭಿಪ್ರಾಯ ಮೂಡಿತು. ಆದರೆ ವಸ್ತುಸ್ಠಿತಿ ಹಾಗಿರದೆ ಕೊಡೆಕಲ್ಲ ಬಸವಣ್ಣನಿಗಿಂತ, ಗುಂಡಬಸವಣ್ಣ ಹಿರಿಯ. ಇವನಿಗಿಂತ ದಿಗ್ಗಿ ಸಂಗಮನಾಥ ಇನ್ನೂ ಹಿರಿಯ ಎಂಬುದನ್ನು ಈ ಕೃತಿಯ ಮೂಲಕ ಸಂಪಾದಕರು ಸಾಬೀತುಪಡಿಸಿದ್ದಾರೆ. ಇಲ್ಲಿ ವ್ಯಕ್ತವಾಗಿರುವ ಇನ್ನೊಂದು ಮಹತ್ವದ ವಿಚಾರವೆಂದರೆ ದಿಗ್ಗಿ ಸಂಗಮನಾಥನಿಂದಾಗಿ ಮೊದಲು ಅಸ್ತಿತ್ವಕ್ಕೆ ಬಂದುದು ದಿಗ್ಗಿ ಪ್ರದೇಶದ 'ಅಮರ ಕಲ್ಯಾಣ'. ನಂತರ ಗುಂಡ ಬಸವೇಶ್ವರನಿಂದಾಗಿ ನಾಗಾವಿ ಪ್ರದೇಶದ ಧರ್ಮ ಕಲ್ಯಾಣ, ಕೊಡೆಕಲ ಬಸವಣ್ಣನಿಂದಾಗಿ 'ಕಡೆಯ ಕಲ್ಯಾಣ' ಮತ್ತು ಈ ಮೂರೂ ಕಲ್ಯಾಣಗಳಿಗೆ 'ಆದರ್ಶವಾದುದು 'ಬಸವ ಕಲ್ಯಾಣ. ಹೀಗಾಗಿ "ಕಲ್ಯಾಣ ನಾಲ್ಕರೊಳಗೆ ಬಂದ ಶರಣರ ಸೊಲ್ಲ ಕೇಳದಾಯಿತು ಲೋಕ" (೭-೩೩) ಎಂಬ ಪದ್ಯ ನಾಲ್ಕು ಕಲ್ಯಾಣಗಳನ್ನು ಪ್ರಸ್ತಾಪಿಸುತ್ತದೆ. ಗುಂಡ ಬಸವೇಶ್ವರ -ಶಿವಸನ್ನಿಧಿ ಕಥನ, ಗ್ರಾಮಕಥನ, ಅವತಾರ ಕಥನ, ಸಂಸಾರ ಕಥನ, ಲೀಲಾ ಕಥನ, ಐಕ್ಯ ಕಥನವೆಂಬ ಒಟ್ಟು ಏಳು ಕಥನಗಳಲ್ಲಿ ಈತನ ಚರಿತ್ರೆ ಬಿಚ್ಚಿಕೊಂಡಿದೆ (ಪ್ರ. ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ಬೆಂಗಳೂರು-೨೦೦೭).
ಇನ್ನೊಂದು ಕೃತಿ (ಕೊಡೆಕಲ್ ವಚನವಾಕ್ಯ...) ಹೆಸರೇ ಸೂಚಿಸುವಂತೆ 'ಕಡೆಯ ಕಲ್ಯಾಣ' ಸ್ಥಾಪನೆ ಸಂದರ್ಭದಲ್ಲಿ ರಚನೆಗೊಂಡ ಸ್ವರವಚನ-ವಚನಗಳ ಸಂಕಲನವಾಗಿದೆ. ಗುಂಡಬಸವನ ಮಕ್ಕಳಲ್ಲಿ ಅಥವಾ ಶಿಷ್ಯರಲ್ಲಿ ಯಾರಾದರೊಬ್ಬರು ಬರೆದಿರಬಹುದಾದ ಈ ಕೃತಿಯನ್ನು ಕನ್ನಡ ಅಧ್ಯಯನ ಪೀಠ ಹಸ್ತಪ್ರತಿಯ ಸ್ವರವಚನಗಳು ಮತ್ತು ಶಹಾಪೂರ ಹಸ್ತಪ್ರತಿಯ ಸ್ವರವಚನಗಳು ಎಂದು ಎರೆಡು ಭಾಗಗಳಲ್ಲಿ ಸಂಪಾದಿಸಲಾಗಿದೆ. ಮೊದಲ ೬೩ ಸ್ವರವಚನಗಳನ್ನು, (ಅರವತ್ತೇಳು ಸ್ವರವಚನಗಳನ್ನು ಒಳಗೊಂಡಿದ್ದ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಸಿಗದ ಕಾರಣವಾಗಿ) ಬಸವ ಪಥದ ಸಂಚಿಕೆಗಳನ್ನು ಆಧರಿಸಿ, ಪರಿಷ್ಕರಿಸಿ ಪ್ರಕಟಿಸಲಾಗಿದೆ. ಎರಡನೆಯ ಭಾಗದಲ್ಲಿರುವ ಸ್ವರವಚನ - ವಚನಗಳು ಶಹಾಪೂರದ ಶ್ರೀ ಗದ್ದಿಗಿರಾಯ ಒಡೆಯರ್ ಅವರ ಮನೆಯಲ್ಲಿ ಲಭ್ಯವಾದ ಕಾಗದ ಹಸ್ತಪ್ರತಿಯಿಂದ ಸಂಪಾದಿಸಿದವುಗಳಾಗಿವೆ; ಇವುಗಳ ಸಂಖ್ಯೆ ೬೨. "ಈ ಕಲ್ಯಾಣ ಪರಂಪರೆಯವರು ಸೃಷ್ಟಿಸಿದ ವಚನಗಳಲ್ಲಿ ತತ್ವ, ನೀತಿ, ಕಾಲಜ್ಞಾನ ವಿಷಯಗಳ ಜೊತೆ ಇವರಿಗೆ ಸಂಬಧಪಟ್ಟ ಚಾರಿತ್ರಿಕ ಅಂಶಗಳೂ ಇವೆ". (ಪ್ರ. ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ಬೆಂಗಳೂರು-೨೦೧೧)