ಸಂಪಾದನ ಶಾಸ್ತ್ರ:
ಪ್ರಾಚೀನ ಕನಾ೯ಟಕ ಆಡಳಿತ ವಿಭಾಗಗಳು ಭಾಗ-೧:
ಈ ಕೃತಿಯನ್ನು ಡಾ.ಎಂ.ಎಂ.ಕಲಬುರ್ಗಿಯವರು ಸಂಪಾದಿಸಿದ್ದು, ಇದು ಪ್ರಾಚೀನ ಕರ್ನಾಟಕದಲ್ಲಿ ೨೪ ಆಡಳಿತ ವಿಭಾಗಗಳ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚರಿತ್ರೆಗಳನ್ನು ದಾಖಲಿಸಿದ ಮಹತ್ವದ ಕೃತಿಯಾಗಿದೆ. ಅನುಬಂಧವೂ ಇನ್ನೂ ನಾಲ್ಕು ವಿಭಾಗಗಳ ವಿಶೇಷತೆಗಳನ್ನು ಒಳಗೊಂಡಿದೆ. "ಕಾಲ ಮತ್ತು ದೇಶಗಳು ಛೇದಿಸುವಲ್ಲಿ ಪರಿಸರ ನಿರ್ಮಾಣವಾಗುತ್ತದೆ." ಇದೇ ಹಿನ್ನೆಲೆಯಿಂದಾಗಿ ನೈಸರ್ಗಿಕ , ಚಾರಿತ್ರಿಕ, ಭೌಗೋಳಿಕ ಮತ್ತು ಆಡಲಿತಾತ್ಮಕ ವಿಭಾಗಗಳು ಅಸ್ತಿತ್ವಕ್ಕೆ ಬಂದು ಅವು "ಅಲ್ಲಿಯ ಸಮಾಜ ಜೀವನದ ಸಂಕೋಚ, ವಿಸ್ತಾರಗಳಿಗೆ, ಬದಲಾವಣೆಗಳಿಗೆ ಕಾರಣೀಭೂತ"ವಾಗುವ ಅನೇಕ ನಿದರ್ಶನಗಳಿವೆ. "ಕರ್ನಾಟಕದ ಪ್ರಾಚೀನ ವಿಭಾಗಗಳನ್ನು ರಾಷ್ಟ್ರ, ವಿಷಯ, ನಾಡು, ದೇಶ, ಮಂಡಲ-ಇವುಗಳಲ್ಲಿ ಯಾವುದಾದರೂ ಒಂದು ಪದದಿಂದ ಕರೆಯಲಾಗಿದೆ. ವಿಭಾಗ ದೊಡ್ಡದಿದ್ದರೆ ಅದರಲ್ಲಿ ಉಪ ವಿಭಾಗ ಮಾಡಲಾಗುತ್ತಿತ್ತು. ಈ ಉಪವಿಭಾಗವನ್ನು ಮಾತ್ರ ತಪ್ಪದೇ ಕಂಪಣವೆಂದು ಒಂದು ಕಾಲಘಟ್ಟದಲ್ಲಿ ಕರೆಯಲಾಗಿದೆ. ಕರ್ನಾಟಕದ ಆಡಳಿತ ವಿಭಾಗಗಳ ಸೂಚನೆಗಾಗಿ ತೀರ ಪ್ರಾಚೀನ ಕಾಲದಲ್ಲಿ ಅಂದರೆ, ಶಾತವಾಹನರ ಕಾಲದಲ್ಲಿ ಭುಕ್ತಿ, ರಟ್ಟ ಎಂಬ ಉತ್ತರ ಪದಗಳನ್ನು ಬಳಸಲಾಗಿದೆ. ಕದಂಬರ ಕಾಲದಲ್ಲಿ ವಿಷಯ, ಮಂಡಲ, ರಾಷ್ಟ್ರ ಎಂಬವು ಉತ್ತರ ಪದಗಳು, ಬಾದಾಮಿ ಚಲುಕ್ಯರ ಕಾಲದಲ್ಲಿ ವಿಷಯ, ಆಹಾರ, ಭೋಗ, ರಾಷ್ಟ್ರ ಎಂಬ ಉತ್ತರ ಪದಗಳು ಕಾಣುತ್ತವೆ. ರಾಷ್ಟ್ರಕೂಟ ಕಾಲದಿಂದ ನಾಡು, ನಾಟ್ಟು, ಪಾಡಿ, ಮಂಡಲ, ವಿಷಯ, ಜನಪದ, ಭೋಗ ಪದಗಳು ಬಳಕೆಗೊಂಡಿವೆ. ಇದು ಕಲ್ಯಾಣ ಚಲುಕ್ಯ, ಕಲಚುರಿ, ಯಾದವ ಮತ್ತು ಹೊಯ್ಯಸಳರ ವರೆಗೆ ಮುಂದುವರಿದು ವಿಜಯನಗರ ಕಾಲಕ್ಕೆ ಒಮ್ಮೆಲೇ ರಾಜ್ಯ, ವೇಂಠೆ, ವೇಂಠಕ, ವಳಿತ, ಚಾವಡಿ, ಮಾಗಣಿ ಸೀಮೆ ಪದಗಳು ಕಾಣಿಸಿಕೊಳ್ಳುತ್ತವೆ. ಮರಾಠರ ಕಾಲದಲ್ಲಿ ಮಹಲು ಇತ್ಯಾದಿ ಪದಗಳು ಬಳಕೆಯಾಗಿವೆ" ಎಂದು ಆಡಲಿತ ವಿಭಾಗಗಳ ಪದಸೂಚಿ ಪಟ್ಟಿಯನ್ನೇ ಕೊಟ್ಟಿರುವುದು ವಿಶೇಷವಾಗಿದೆ. (ಪ್ರ. ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ-೧೯೯೯).
ವಚನಸಾಹಿತ್ಯದ ಪ್ರಕಟಣೆಯ ಇತಿಹಾಸ:
"ವಚನಸಾಹಿತ್ಯದ ಸಂಗ್ರಹ ಮೌಲ್ಯವನ್ನು ಸಂಪಾದನಾ ಮೌಲ್ಯಕ್ಕೆ ಎತ್ತರಿಸಿದ ಪ್ರಥಮ ಕೀರ್ತಿ ಶಿ.ಶಿ.ಬಸವನಾಳರಿಗೆ ಸಲ್ಲುತ್ತದೆ" ಈ ಮಾತಿಗೆ ಸಾಕ್ಷಿಎಂಬಂತೆ ಅವರು ಸಂಪಾದಿಸಿದ (೧೮೮೯)'ಬಸವಣ್ಣನವರ ಷಟಸ್ಥಲ ವಚನಗಳು 'ಕೃತಿ ಇದೆ. ಈ ಕೃತಿ ಪ್ರಕಟವಾಗಿ ನೂರುವರ್ಷ ತುಂಬಿದ ಸಂದರ್ಭದಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಮಂಡಿತವಾದ ನಾಲ್ವರು ವಿದ್ವಾಂಸರ ಪ್ರಬಂಧಗಳು ಮತ್ತು ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನುವಹಿಸಿದ್ದ ಡಾ.ಕಲಬುರ್ಗಿಯವರ ಭಾಷಣ ಪ್ರಸ್ತುತ ಕೃತಿಯಲ್ಲಿ ಸಂಪಾದನೆಗೊಂಡಿವೆ. ಇದನ್ನು ಡಾ.ಕಲಬುರ್ಗಿಯವರೇ ಸಂಪಾದಿಸಿದ್ದಾರೆ. "ವಚನಸಾಹಿತ್ಯದ ಪ್ರಕಟಣೆಯ ಪ್ರಕಟನೆಯ ಇತಿಹಾಸವನ್ನು ಕಟ್ಟಿಕೊಡುವ ಉದ್ದೇಶದ ಇಲ್ಲಿಯ ಪ್ರಬಂಧಗಳದ್ದು. ೧. ಪ್ರಾರಂಭದ ಪ್ರಯತ್ನಗಳ ಪ್ರಥಮ ಘಟ್ಟ ೨. ವಿಜಾಪುರದ ಶಿವಾನುಭವ ಗ್ರಂಥಮಾಲೆಯ ದ್ವಿತೀಯ ಘಟ್ಟ ೩. ಧಾರವಾಡ ಕನ್ನಡ ಅಧ್ಯಯನ ಪೀಠದ ತೃತೀಯ ಘಟ್ಟ ೪. ಗದುಗಿನ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಚತುರ್ಥಘಟ್ಟ ಎಂದು ಒಟ್ಟು ನಾಲ್ಕು ಘಟ್ಟಗಳ ಇತಿಹಾಸವನ್ನು ಇಲ್ಲಿ ವಿವರಿಸಿರುವುದರ ಜೊತೆಗೆ ಆಯಾ ಕಾಲದ ಸಂಪಾದನಾ ಕಾರ್ಯದ ಮಿತಿ ಮತ್ತು ಗತಿಗಳ ಕಡೆಗೂ ಗಮನ ಹರಿಸುತ್ತವೆ. (ಪ್ರ. ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ- ಡಂಬಳ, ಗದಗ-೧೯೯೦)
ಬಿಳಗಿ ಅರಸುಮನೆತನ:
ಬೆಳಗಾವಿಯ ಶ್ರೀ ನಾಗನೂರು ರುದ್ರಾಕ್ಷಿಮಠವು ೧೯೯೪ ಡಿಸೆಂಬರ ೨೪, ೨೫ ರಂದು "ಬಿಳಗಿ ಅರಸು ಮನೆತನ" ಎನ್ನುವ ವಿಷಯ ಕುರಿತು ಧಾರವಾಡದಲ್ಲಿ ವಿಚಾರಸಂಕೀರ್ಣವನ್ನು ಆಯೋಜಿಸಿತ್ತು. ಇದರ ನೇತೃತ್ವವನ್ನು ಡಾ.ಎಂ.ಎಂ.ಕಲಬುರ್ಗಿ ಹಾಗೂ ಡಾ. ಎಚ್.ಆರ್. ರಘುನಾಥ ಭಟ್ ವಹಿಸಿಕೊಂಡಿದ್ದರು. ಈ ವಿಚಾರ ಸಂಕಿರಣದಲ್ಲಿ ರಘುನಾಥ ಭಟ್ ಅವರನ್ನು ಒಳಗೊಂಡಂತೆ ೧೪ ಜನ ವಿದ್ವಾಂಸರು ಪ್ರಸ್ತುತ ಅರಸು ಮನೆತನಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳ ಮೇಲೆ ವಿದ್ವತ್ ಪ್ರಬಂಧಗಳನ್ನು ಮಂಡಿಸಿದರು. ಈ ಪ್ರಬಂಧಗಳನ್ನು ವಿಚಾರ ಸಂಕಿರಣದ ನೇತೃತ್ವವಹಿಸಿದ್ದ ವಿದ್ವಾಂಸರೇ "ಬಿಳಗಿ ಅರಸು ಮನೆತನ" ಎಂಬ ಶಿರ್ಷಿಕೆ ಅಡಿಯಲ್ಲಿ ತುಂಬಾ ವ್ಯವಸ್ಥಿತವಾಗಿ ಸಂಪಾದಿಸಿದರು. ಅದನ್ನು ಪ್ರಸ್ತುತ ಮಠದ 'ವೀರಶೈವ ಅಧ್ಯಯನ ಅಕಾಡಮಿ' ಪ್ರಕಟಿಸಿತು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪೂರ ತಾಲೂಕಿನಲ್ಲಿ ಪ್ರಸಿದ್ಧಿಗೆ ಬಂದ ಈ ಅರಸು ಮನೆತನದ ಮೂಲ ರಾಜಧಾನಿ ಐಸೂರು (ಐಶ್ವರ್ಯಪುರ)ಆಗಿದ್ದು, ಸುಮಾರು ೧೪೯೦ರಲ್ಲಿ ಬಿಳಗಿಗೆ ಸ್ಥಲಾಂತರಗೊಂಡು ತನ್ನ ಮೇಲ್ಮೆಯನ್ನು ಸಾಧಿಸಿದಂತೆ ದಾಖಲೆಗಳು ತಿಳಿಸುತ್ತವೆ. ಅಲ್ಲದೆ ಮೂಲತಃ ಜೈನ ಮತಸ್ಥರಾಗಿದ್ದ ಇವರು, ಕಾಲಾಂತರದಲ್ಲಿ ನಿರ್ದಿಷ್ಟ ಮತದ ಕಟ್ಟಿಗೆ ಒಳಪಡದೆ ಶೈವ, ವೀರಶೈವ ಮತಾವಲಂಬಿಗಳಗಿ ವ್ಯವಹರಿಸಿದ್ದುದನ್ನು ರಂಗಪ್ಪರಾಜೊಡೆಯ (ಅಥವಾ ನರಸಿಂಹ) ಜೈನಗುರು ಭಟ್ಟಾಕಳಂಕನ ಇಚ್ಚೆಯಂತೆ ಕಟ್ಟಿಸಿದ ಬಸದಿ, ಈತನ ತಾಯಿ ವೀರಾಂಬಿಕೆ ಕಟ್ಟಿಸಿದ ವಿರೂಪಾಕ್ಷ ದೇವಾಲಯ, ಭೈರವ, ಅಭಿನವ ಭೈರವ, ನರಸಿಂಹ, ಪಾರ್ಶ್ವನಾಥ ಮುಂತಾದ ಈ ಮನೆತನದ ಅರಸರ ಹೆಸರುಗಳು ಸ್ಪಷ್ಟಪಡಿಸುತ್ತವೆ. ಅಲ್ಲದೆ ಈ ಅರಸು ಮನೆತನ ಸಾಹಿತ್ಯ, ವ್ಯವಸಾಯ, ವಾಣಿಜ್ಯ, ಧರ್ಮ ವಾಸ್ತು-ಶಿಲ್ಪಕಲೆ ಮುಂತಾದ ಕ್ಷೇತ್ರಗಳಿಗೆ (ಸುಮಾರು ೩೫೦ ವರ್ಷಗಳ ಕಾಲಾವಧಿಯಲ್ಲಿ) ನೀಡಿದ ಅನನ್ಯ ಕೊಡುಗೆಯ ಬಗ್ಗೆ ಈ ಕೃತಿಯ ಲೇಖನಗಳು ಬೆಳಕು ಚೆಲ್ಲಿವೆ. (ಪ್ರ. ವೀರಶೈವ ಅದ್ಯಯನ ಅಕಾಡಮಿ. ಶ್ರೀ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ- ೧೯೯೫).