ಬಸವಣ್ಣನವರ ಟೀಕಿನ ವಚನಗಳು

ಗ್ರಂಥಸಂಪಾದನೆ :

"ಒಬ್ಬ ವ್ಯಕ್ತಿಯ ವಿಷಯದಲ್ಲಿ ಗೌರವ, ಭಕ್ತಿ ಅಧಿಕವಾದಂತೆ ಅವನ ಆಚರಣೆಯ ಅಣುಗಳೆಲ್ಲ ಅದ್ರಿಯಾಗಿ ಕಾಣುತ್ತವೆ. ಆಗ ಚರಿತ್ರೆ ಪವಾಡದ ಸೋಗು ಹಾಕುತ್ತದೆ. ಇದು ಭಾರತೀಯ ವಿಭೂತಿಪುರುಷರ ಚರಿತ್ರೆಗೆ ಅಂಟಿದ ದೊಡ್ಡ ದೋಷ".

ಬಸವಣ್ಣನವರ ಟೀಕಿನ ವಚನಗಳು:

ಬಸವಣ್ಣನವರ ಟೀಕಿನ ವಚನಗಳು (ಸಂಪುಟ ೧, ೨) ಹೆಸರೇ ಸೂಚಿಸುವಂತೆ ಬಸವಣ್ಣನವರ ವಚನಗಳಿಗೆ ಬರೆದ ಟೀಕೆಗಳಾಗಿವೆ. ವೀರಶೈವ ಟೀಕಾಸಾಹಿತ್ಯವನ್ನು ವಚನಟೀಕೆ, ಕಾವ್ಯಶಾಸ್ತ್ರಟೀಕೆಯೆಂದು ವರ್ಗೀಕರಿಸಬಹುದಾಗಿದೆ. ಹಲವಾರು ವಚನಗಳಿಗೆ ಬರೆದ ಸಮೃದ್ಧ ಟೀಕಾಸಾಹಿತ್ಯ ಲಭ್ಯವಿದ್ದು, ಬಸವಣ್ಣನವರನ್ನು ಕುರಿತ ವಚನ ಸಂಪುಟಕ್ಕೆ ಬರೆದಿರುವಷ್ಟು ಟೀಕಾಕೃತಿಗಳು ಬೇರೆ ಶರಣರನ್ನು ಕುರಿತು ರಚನೆಯಾಗದಿರುವುದಕ್ಕೆ ಅವರ ಜನಪ್ರೀಯತೆಯೆ ಕಾರಣವೆಂಬುದು ಸ್ಪಷ್ಟವಿದೆ. ಬಸವಣ್ಣನವರ ಷಟ್ಸ್ಥಲದ ವಚನಗಳು ಆಯ್ದ ೯೫೯ ವಚನಗಳನ್ನೊಳಗೊಂಡಿರುವ ಒಂದು ಮಹತ್ವದ ಕೃತಿ. ಬಸವಣ್ಣನವರ ವಚನಗಳ ಈ ಟೀಕಾಸಂಪುಟಗಳನ್ನು ೧ನೇ ಟೀಕೆ ('ಶ್ರೀಗುರು ಬಸವರಾಜದೇವರು ನಿರೂಪಿಸಿದ ಷ್ಟಟ್ಸ್ಥಲದ ವಚನವ್ಯಾಖ್ಯಾನ'(ಕರ್ತೃ?). ೨ನೆಯ ಟೀಕೆ (ಟೀಕೆ, ಟೀಕಾಕಾರನ ಹೆಸರು?) ೩ನೆಯ ಟೀಕೆ (ಬಸವರಾಜ ದೇವರ ಷಟ್ಸ್ಥಲದ ಬೆಡಗಿನ ಟೀಕು; ಕರ್ತೃ: ಸೋಮಶೇಖರ ಶಿವಯೋಗಿ), ೪ನೆಯ ಟೀಕು('ಬಸವ ವಚನ ಸಾರಾಮೃತ; (ಕರ್ತೃ: ಗುರುಬಸವರಾಜದೇವ), ೫ನೆಯ ಟೀಕು ('ಬಸವೇಶ್ವರ ದೇವರ ವಚನ ಸಾರಾರ್ಥ' ಕರ್ತೃ: ಪರ್ವತ ಶಿವಯೋಗಿ). ಬಸವಣ್ಣನವರ ವಚನಗಳಿಗೆ ಈ ಟೀಕೆಗಳು ಹುಟ್ಟಿದ್ದು, ವಚನಗಳನ್ನು ತಾತ್ವಿಕ ನೆಲೆಯಲ್ಲಿ ಗ್ರಹಿಸುತ್ತಿದ್ದ ಕಾಲದಲ್ಲಿ. ಹೀಗಾಗಿ ಈ ಟೀಕೆಗಳನ್ನು ಸಾಹಿತ್ಯಿಕ, ಸಾಮಾಜಿಕ ನೆಲೆಗಳಿಂದ ನೋಡದೆ ಇವು ವಚನೋಕ್ತ ಶಬ್ದಗಳಿಗೆ ಅರ್ಥವನ್ನು ಹೇಳುತ್ತ ಬರೆದ ತಾತ್ವಿಕ ವಿವರಣೆ-ವಿಮರ್ಶೆಗಳಾಗಿವೆ ಎಂದು ಭಾವಿಸಬೇಕು. ವಚನಸಾಹಿತ್ಯವನ್ನು ಅಭ್ಯಸಿಸಲು ಈ ಟೀಕೆಗಳು ನೆರವಿನ ಹಸ್ತಚಾಚಿ ಮುನ್ನಡೆಸುತ್ತವೆ.
ಪ್ರ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ - ೧೯೭೮

ಹರಿಹರನ ರಗಳೆಗಳು:

ಪ್ರಸ್ತುತ ಕೃತಿಯಲ್ಲಿ ರಗಳೆಗಳನ್ನು ಕ್ರಮವಾಗಿ ಮೂರು ಕಾಂಡಗಳಲ್ಲಿ ವಿಂಗಡಿಸಿ ಡಾ ಕಲಬುರ್ಗಿಯವರು ಸಂಪಾದಿಸಿದ್ದಾರೆ. ಮೊದಲ ಕಾಂಡದಲ್ಲಿ ತಮಿಳುನಾಡಿನ ಪುರಾತನರ ೬೦ ರಗಳೆಗಳನ್ನು ಎರಡನೆಯ ಕಾಂಡದಲ್ಲಿ ಕನ್ನಡ ನಾಡಿನ ಶರಣರ ೨೨ ರಗಳೆಗಳನ್ನು, ಮೂರನೆಯ ಕಾಂಡದಲ್ಲಿ ೨೬ ಸಂಕೀರ್ಣ ರಗಳೆಗಳನ್ನು ಅಳವಡಿಸಿಕೊಂಡಿದ್ದಾರೆ. hariharana ragalegaluಈ ಹಿಂದೆ ಫ.ಗು. ಹಳಕಟ್ಟಿಯವರು ೧೭ ರಗಳೆಗಳನ್ನು, ಡಾ. ಆರ್. ಸಿ. ಹಿರೇಮಠ ಹಾಗೂ ಡಾ. ಎಂ.ಎಸ್. ಸುಂಕಾಪುರ ಕೂಡಿ ೯೪ ರಗಳೆಗಳನ್ನು ಸಂಪಾದಿಸಿದ್ದರು. ಆದರೆ ಇವುಗಳಲ್ಲಿ 'ಹರಿಹರಕೃತವಲ್ಲ'ವೆಂದು ಅನ್ನಿಸಿದವುಗಳನ್ನು ಕೈಬಿಟ್ಟು ಕೇವಲ ೧೦೮ ರಗಳೆಗಳನ್ನು ಡಾ.ಎಂ.ಎಂ. ಕಲಬುರ್ಗಿಯವರು ಇಲ್ಲಿ ಸಂಪಾದಿಸಿರುವುದು ವಿಶೇಷವಾಗಿದೆ. ಈ ಕೃತಿಗೆ ಸಂಪಾದಕರು ಬರೆದ 'ಪೀಠಿಕೆ' ಅತ್ಯಂತ ಮೌಲಿಕವಾಗಿದೆ. ಇದು ಹರಿಹರನನ್ನು ಇಲ್ಲಿಯವರೆಗೆ ಅಭ್ಯಸಿಸುತ್ತ ಬಂದ ಕ್ರಮ, ಅವನ ಜೀವನ ಮತ್ತು ಸಾಹಿತ್ಯ ಧೋರಣೆ, ಪ್ರೇರಣೆ ಮುಂತಾದ ಬಹುಮುಖ್ಯ ಸಂಗತಿಗಳನ್ನು ಚರ್ಚಿಸುತ್ತದೆ. ಪೀಠಿಕೆಯಲ್ಲಿ ಅವರು... ಅನೇಕ ಕಡೆಗಳಲ್ಲಿ ಪಾಠ ಸರಿಪಡಿಸಲಾಗಿದೆ. ರಗಳೆ ಕೇವಲ ಭಾಷಿಕ ಸೃಷ್ಟಿಯಲ್ಲ, ಸಾಂಸ್ಕೃತಿಕ ಸೃಷ್ಟಿ. ಇದನ್ನು ಸಂಸ್ಕರಿಸುವಾಗ ಆ ಕಾಲದ ಭಾಷೆಯ ಜೊತೆ ಅಂದಿನ ಸಂಸ್ಕೃತಿಯ ತಿಳುವಳಿಕೆಯೂ ಸಂಪಾದಕನಿಗೆ ಅಗತ್ಯವೆಂದು ಹೇಳಿರುವುದನ್ನು ಗಮನಿಸಬೇಕು. ಇಲ್ಲಿಯೇ ಹರಿಹರನ ಜೀವನ ಚರಿತ್ರೆ, ಅವನು ಹೊಸ ಯುಗಕ್ಕೆ ಹೇಗೆ ಆದ್ಯಪ್ರವರ್ತಕನೆನಿಸಿದ, ರಗಳೆಗಳನ್ನು ಅವನು ಯಾವ ಕ್ರಮದಲ್ಲಿ ರಚಿಸಿದ ? ಕೃತಿಸಂಪಾದನೆ ಸಂದರ್ಭದಲ್ಲಿ ಅನುಸರಿಸಿದ ಕ್ರಮ, ಸ್ವತಃ ಹರಿಹರ ಕವಿ ರಗಳೆಗಳನ್ನು ರಚಿಸಲು ಬಳಸಿಕೊಂಡಿರುವ ಮೂಲ ಆಕರ, ಆತನ ರಗಳೆಗಳಲ್ಲಿ ಕಂಡುಬರುವ ಸಾಹಿತ್ಯಿಕ ಮೌಲ್ಯ ಈ ಎಲ್ಲ ಸಂಗತಿಗಳನ್ನು ಸಂಪಾದಕ ಕಲಬುರ್ಗಿಯವರು ತುಂಬಾ ಶ್ರದ್ಧೆಯಿಂದ ವಿಶ್ಲೇಷಿಸಿದ್ದಾರೆ. ( ಹಂಪಿ ಉತ್ಸವದ ಅಂಗವಾಗಿ ಕರ್ನಾಟಕ ಸರಕಾರ ನೀಡಿದ ಆರ್ಥಿಕ ನೆರವು ಪಡೆದು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಈ ಕೃತಿಯನ್ನು ಪ್ರಕಟಿಸಿದೆ-೧೯೯೯).

  ಆದಯ್ಯನ ಲಘು ಕೃತಿಗಳು:

adhyayanada laghu krtigalu

ಆದಯ್ಯ ರಚಿಸಿದ ಸಾಹಿತ್ಯ ವಚನ, ಸ್ವರವಚನ ಮತ್ತು ಇತರ ಎಂದು ವಿಂಗಡಿಸಿ ಪ್ರಕಟಿಸುವ ಅವಕಾಶವಿದ್ದರೂ ಆತನ ವಚನ ಸಾಹಿತ್ಯ ಮಾತ್ರ ಪ್ರಕಟಗೊಂಡು ಸ್ವರವಚನ ಹಾಗೂ ಇತರ ಸಾಹಿತ್ಯ ಅಪ್ರಕಟಿತವಾಗಿಯೇ ಉಳಿದಿದ್ದನ್ನು ಗಮನಿಸಿದ ಡಾ. ಕಲಬುರ್ಗಿಯವರು, ಆತನ ವಚನೇತರ ಸಾಹಿತ್ಯವನ್ನು "ಲಘುಸಾಹಿತ್ಯ"ಎನ್ನುವ ಹೆಸರಿನಲ್ಲಿ ಮೊದಲಬಾರಿಗೆ (ಪರಿಷ್ಕರಿಸಿ) ಪಾಠಶುದ್ಧಿಯೊಂದಿಗೆ ಈ ಕೃತಿಯಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಕನ್ನಡ ಸಂಶೋಧನ ಸಂಸ್ಥೆಯ ೬೬೩ನೆಯ ನಂಬರಿನ ತಾಳೆಗರಿಕಟ್ಟು ಈ 'ಕೃತಿ'ಗೆ ಮೂಲ ಮಾತೃಕೆ. ಕನ್ನಡ ಅಧ್ಯಯನ ಪೀಠಕ್ಕೆ ಸಂಬಂಧಿಸಿದ ಇನ್ನೊಂದು ಪ್ರತಿ (ನಂ.೭೯೧)ಯನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಆದಯ್ಯಗಳ ಕಂದ, ಸ್ವರವಚನ, ಉಯ್ಯಲಪದ, ಮುಕ್ತಿಕ್ಷೇತ್ರ ಎಂಬ ನಾಲ್ಕು ಶೀರ್ಷಿಕೆಗಳ ಪಠ್ಯ ಮತ್ತು ಕೊನೆಯಲ್ಲಿ ಶಬ್ದಕೋಶ-ಟಿಪ್ಪಣಿಯನ್ನು ಈ ಕೃತಿ ಒಳಗೊಂಡಿದೆ. (ಪ್ರ. ವೀರಶೈವ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ,೧೯೮೦)

 

 

"ಈ ಟೀಕೆಗಳು ಹುಟ್ಟಿದುದು ವೀರಶೈವ ಧರ್ಮದ ತಿಳಿವಿನ ಪ್ರವಾಹಘಟ್ಟಗಳನ್ನು ದಾಟಿ, ಒಂದು ವ್ಯವಸ್ಥೆಗೆ ಒಳಪಟ್ಟ ಮತೀಯ ತಟಾಕವಾಗಿದ್ದ ಮತ್ತು ಅದನ್ನೂ ದಾಟಿ ಜಾತಿಕೂಪವಾಗಿದ್ದ ಕಾಲದಲ್ಲಿ, ಪಾರಿಭಾಷಿಕ ಪದಗಳು ವಾಚಾರ್ಥಕ್ಕೆ ಇಳಿಯುತ್ತಿದ್ದ ಕಾಲದಲ್ಲಿ. ಹೀಗಾಗಿ ಇವುಗಳಲ್ಲಿ ಶಕ್ತಿ ವಿಶಿಷ್ಟಾದ್ವೈತದ ಶುದ್ಧ ತಾತ್ವಿಕ ವಿವರಣೆ ಕೆಲವುಸಲ ಕಂಡುಬರುವುದಿಲ್ಲ. ಅಂದರೆ ಆ ಕಾಲದಲ್ಲಿ ವಚನಗಳಿಗೆ ಹೇಳುತ್ತಿದ್ದ ಸಾಂಪ್ರದಾಯಿಕ ಅರ್ಥ ಮತ್ತು ಟೀಕಾಕಾರನ ವ್ಯಕ್ತಿಗತ ಪರಿಮಿತಿಗಳ ಹಿನ್ನೆಲೆಯಲ್ಲಿ ಈ ಟೀಕೆಗಳು ಹುಟ್ಟಿಕೊಂಡಿವೆ."