ಮಾರ್ಗ ಸಂಪುಟ ೪-೫-೬

 ಮಾರ್ಗ ಸಂಪುಟಗಳು:

ಮಾರ್ಗ ಸಂಪುಟ ೪ :

marga_4ಈ ಸಂಪುಟದ ಪ್ರಬಂಧಗಳು ಹಿಡಿತಕ್ಕೆ ಸಿಗಲಾರದಷ್ಟು ವಿಷಯ ವೈವಿಧ್ಯತೆಯಿಂದ ಕೂಡಿರುವುದರಿಂದ ವರ್ಗೀಕರಣದ ಉಪಕ್ರಮವನ್ನು ಇಲ್ಲಿ ಕೈಬಿಡಲಾಗಿದೆ. ಆದರೆ ಪ್ರಾಚೀನ ಕನ್ನಡ ಸಾಹಿತ್ಯ, ಧರ್ಮ, ವಚನಸಾಹಿತ್ಯ - ಶರಣ ಧರ್ಮ, ವೀರಶೈವ ಧರ್ಮ ಚತುರಾಚಾರ್ಯರ ಪರಿಕಲ್ಪನೆ ಮತ್ತು ಅವರ ಪೀಠವಿಚಾರ, ಪಂಚಪೀಠಗಳ ಚರ್ಚೆ, ಪಂಚಮಠ, ಪಂಚಮಸಾಲಿ ಪರಿಕಲ್ಪನೆ, ಕುರುಬ-ಲಿಂಗಾಯತ ಸಮಾಜ, ಶೈವರ ದೇವಾಲಯಗಳು, ಕೃಷ್ಣದೇವರಾಯ: ತೆಲಗು ಸಂಸ್ಕೃತಿಯ ಆಕ್ರಮಣ, ವ್ಯಕ್ತಿನಾಮಗಳು, ಗ್ರಾಮನಾಮಗಳು, ವಿಷ್ಣುವರ್ಧನ; ತಮಿಳು ಸಂಸ್ಕೃತಿಯ ಆಗಮನ, ಚಾಮುಂಡರಾಯನ ತಮಿಳು ಪ್ರೀತಿ, ಗಂಗರಾಜನ ಮರಾಠಿ ಪ್ರೀತಿ, ಸಿದ್ಧಾಂತ ಶಿಖಾಮಣಿ: ಸೃಷ್ಟಿಸಂದರ್ಭ, ಅನುಭವ ಮಂಟಪ: ಹುಟ್ಟು-ಮರುಹುಟ್ಟು, ವಿರಕ್ತ ಪರಂಪರೆಯ ಎರಡು ಪ್ರಥಮ ಮಠಗಳು, (ವೀರ) ಶೈವ ಸಿದ್ಧಾಂತದ ಕೇಂದ್ರಗಳು: ದ್ವಾರಸಮುದ್ರ, ಹಂಪಿ, ಶಿವಗಂಗೆ ಮೊದಲಾದ ಇಲ್ಲಿಯ ಪ್ರತಿಯೊಂದೂ ಪ್ರಬಂಧಗಳು ಕನ್ನಡ ಸಂಶೋಧನಾ ಕ್ಷೇತ್ರದ ಅರಿವನ್ನು ವಿಸ್ತರಿಸಿ ಹೊಸ ಚರ್ಚೆಗೆ ಅವಕಾಶ ಒದಗಿಸಬಲ್ಲವು.
(ಪ್ರ) : ಸಪ್ನ ಬುಕ್ ಹೌಸ್, ಬೆಂಗಳೂರು - ೨೦೦೪, ೨೦೦೭, ೨೦೧೦

ಮಾರ್ಗ ಸಂಪುಟ ೫ :

marga_5ಮಾರ್ಗದ ಆರು ಸಂಪುಟಗಳನ್ನು ಏಕಕಾಲಕ್ಕೆ ಪ್ರಕಟಿಸುವ ಯೋಜನೆಯ ಅಂಗವಾಗಿ ಪ್ರಕಟವಾದ ಈ  ಮೊದಲ ಆವೃತ್ತಿ ಪ್ರಸ್ತಾವನೆ, ಅರಿಕೆ, ಸಂಪಾದಕೀಯ ಎಂಬ ಮೂರು ವಿಭಾಗಗಳನ್ನು ಒಳಗೊಂಡಿದೆ. 'ಪ್ರಸ್ತಾವನೆ' ವಿಭಾಗವು ವಿವಿಧ ಕೃತಿಗಳಿಗೆ ಇವರು ಬರೆದು ಮಾರ್ಗಸಂಪುಟ ಮೂರರಲ್ಲಿ ಪ್ರಕಟಿಸಿದ್ದ ೧೫ ಪ್ರಸ್ತಾವನೆಗಳು ಪರಿಷ್ಕೃತಗೊಂಡು ಇಲ್ಲಿ ಮರುಮುದ್ರಣಗೊಂಡಿವೆ. ಜೊತೆಗೆ ಇವರು ಹೊಸದಾಗಿ ಬರೆದಿದ್ದ ೧೪ ಪ್ರಸ್ತಾವನೆಗಳೂ ಇಲ್ಲಿ ಸೇರಿವೆ. ವಚನ, ಕೇಶಿರಾಜ, ಆದಯ್ಯ, ಮಲ್ಲಿನಾಥ ಮೊದಲಾದವರ ಕೃತಿಗಳನ್ನು ಶೋಧಿಸಿ, ಪರಿಷ್ಕರಿಸಿ ಪ್ರಕಟಿಸುವ ಸಂದರ್ಭದಲ್ಲಿ ಬರೆದ ವಿಸ್ತೃತವಾದ ಪ್ರಸ್ತಾವನೆಗಳೂ ಇಲ್ಲಿವೆ. 'ಅರಿಕೆ'ಎಂಬ ಎರಡನೆಯ ಭಾಗದಲ್ಲಿ ಗ್ರಂಥ ಸಂಪಾದನೆ, ಹಸ್ತಪ್ರತಿ, ಸಂಶೋಧನ , ನಾಮವಿಜ್ಞಾನಗಳಂತ ಶಾಸ್ತ್ರಕೃತಿಗಳಿಗೂ ಮತ್ತು ಮಾಹಾರಾಷ್ಟ್ರದ ಕನ್ನಡ ಶಾಸನ ಹಾಗೂ ಸಮಾಧಿ ಬಲಿದಾನ ವೀರಮರಣಗಳಂತಹ ಸ್ಮಾರಕ ಕೃತಿಗಳಿಗೆ ಬರೆದ ನಿವೇದನೆರೂಪದ ಬರಹಗಳೂ ಇಲ್ಲಿವೆ. 'ಸಂಪಾದಕೀಯ' ವಿಭಾಗದಲ್ಲಿ ಬೇರೆಯವರು ರಚಿಸಿದ ಆಧುನಿಕ ಪುಸ್ತಕಗಳಿಗೆ ಇವರು ಬರೆದ ಸಂಪಾದಕೀಯ ಲೇಖನಗಳಿವೆ.
(ಪ್ರ) : ಸಪ್ನ ಬುಕ್ ಹೌಸ್, ಬೆಂಗಳೂರು – ೨೦೧೦

ಮಾರ್ಗ ಸಂಪುಟ ೬ :  

marga_6ಈ ಸಂಪುಟದಲ್ಲಿ ಇವರು ತಮ್ಮ ೫೦, ೬೦ನೆಯ ಹುಟ್ಟುಹಬ್ಬದ ಸಂದರ್ಭ, ಪಂಪಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಮಾಡಿದ ವಿಶೇಷ ಭಾಷಣ, ತಮ್ಮ ಮಾರ್ಗದರ್ಶನದ ಮತ್ತು ಆತ್ಮೀಯರ ಪಿಎಚ್.ಡಿ ಗ್ರಂಥಗಳಿಗೆ ಬರೆದ ಮುನ್ನುಡಿ, ಬೆನ್ನುಡಿಗಳಿವೆ. ಇದಲ್ಲದೆ ಆತ್ಮೀಯರನ್ನು, ಹಿರಿಯರನ್ನು, ಸ್ನೇಹಿತರನ್ನು, ವಿದ್ಯಾರ್ಥಿಗಳನ್ನು ಕುರಿತು ಬರೆದ ವ್ಯಕ್ತಿಚಿತ್ರಣಗಳೂ ಇವೆ.
(ಪ್ರ) : ಸಪ್ನ ಬುಕ್ ಹೌಸ್, ಬೆಂಗಳೂರು – ೨೦೧೦