ಮಾರ್ಗ ೧-೨-೩

ಮಾರ್ಗ ಸಂಪುಟಗಳು:

ಮಾರ್ಗ ಸಂಪುಟ ೧ :

marga_1ಈ ಸಂಪುಟದಲ್ಲಿ ಸಾಹಿತ್ಯ ಮಾರ್ಗ, ಗ್ರಂಥಸಂಪಾದನಾ ಮಾರ್ಗ ಮತ್ತು ವಿಮರ್ಶಾ ಮಾರ್ಗವೆಂಬ ಮೂರು ಮಾರ್ಗಗಳಿದ್ದು, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಕಾಲದ ಸಾಹಿತ್ಯ ಘಟ್ಟಗಳನ್ನೊಳಗೊಂಡಂತೆ ಕೃತಿ ಶೋಧ, ಚರಿತ್ರಶೋಧ, ಸಂಸ್ಕೃತಿಶೋಧ, ಕ್ಷೇತ್ರಶೋಧ, ವಿಚಾರಶೋಧ, ಕವಿಪರಿಸರಶೋಧ ಎಂಬ ಹಲವು ನೆಲೆಗಳಲ್ಲಿ ಕೈಗೊಂಡ ಅನ್ವೇಷಣೆಯ ವಿಧಾನ, ಮತ್ತು ಫಲಿತಗಳನ್ನು ಗಮನಿಸಬಹುದಾಗಿದೆ. ಈ ಸಂಪುಟವು ಈಗಾಗಲೆ ಮೂರು ಆವೃತ್ತಿಗಳನ್ನು ಕಂಡಿದೆ.
(ಪ್ರ) : ನರೇಶ & ಕಂಪನಿ, ಬೆಂಗಳೂರು - ೧೯೭೯, ಸ್ವಪ್ನ ಬುಕ್ ಹೌಸ್, ಬೆಂಗಳೂರು - ೧೯೯೫, ೨೦೧೦

 

  

ಮಾರ್ಗ ಸಂಪುಟ :

marga_2ಈ ಸಂಪುಟವು ಶಾಸನ ಮಾರ್ಗ, ಜಾನಪದ ಮಾರ್ಗ, ಶಾಸ್ತ್ರಮಾರ್ಗ ಎನ್ನುವ ಮೂರು ಮಾರ್ಗಗಳನ್ನು ಒಳಗೊಂಡಿದ್ದು, ಶಾಸನ ಮಾರ್ಗವು, ಶಾಸನ ಪಠ್ಯಗಳ ಓದು, ಹೊಸಓದು, ಮರುಓದು, ಸರಿಓದು ಕಟ್ಟಿಕೊಡುವ ಹೊಸ ವಿಚಾರ, ಪ್ರಾಚೀನ ಕಾವ್ಯಗಳ ಶಾಸನೋಕ್ತ ಪದ್ಯಗಳ ಚರ್ಚೆ, ಕವಿಗಳು ಪಡೆದ ದತ್ತಿಗ್ರಾಮಗಳ ವಿಚಾರ, ಶಾಸನ ಕವಿಗಳು ಹಾಗೂ ಲಿಪಿಕಾರರು, ಶಾಸನಗಳ ಭಾಷೆ, ಪರಿಭಾಷೆ, ಲಿಪಿ, ಛಂದಸ್ಸು, ಪಾಠಪರಿಷ್ಕರಣ, ಹೊಸ ಶಾಸನಗಳ ಶೋಧ, ವೀರಶೈವ ಪೀಠಪರಂಪರೆ, ಬಾಬಾನಗರ ಹಾಗೂ ವಿಜಾಪುರದಲ್ಲಿ ಕವಿ ನಾಗಚಂದ್ರ ಕಟ್ಟಿಸಿರುವ ಬಸದಿಗಳು ಮುಂತಾದ ಸಂಗತಿಗಳ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. ಇದು ಅಲ್ಲದೆ 'ಜಾನಪದ ಮಾರ್ಗವು' ಕೆಲವು ಜಾನಪದ ಆಚರಣೆ, ಜಾನಪದ ದೇವತೆಗಳು, ಜಾನಪದ ಅದ್ಯಯನ, ಜಾನಪದ ಕ್ರೀಡೆ, ಪ್ರಾಂತಭೇದ, ಜಾನಪದ ಬಯಲಾಟಗಳು, ಜಾನಪದ ಸಾಹಿತ್ಯ ಸಂಪಾದನೆ, ಮಾರ್ಗ ಸಾಹಿತ್ಯ, ಜನಪದ ಸಾಹಿತ್ಯಗಳ ವೈಲಕ್ಷಣ್ಯಗಳ ಕುರಿತ ಶೋಧಗಳನ್ನು ಕಟ್ಟಿಕೊಡುತ್ತದೆ. 'ಶಾಸ್ತ್ರಮಾರ್ಗವು' ಮುಖ್ಯವಾಗಿ ಸ್ಠಳನಾಮ, ಗ್ರಾಮನಾಮ, ಅಡ್ಡಹೆಸರು, ವ್ಯಾಕರಣ, ಛಂದಸ್ಸು, ಹಸ್ತಪ್ರತಿ, ಗ್ರಂಥ ಸಂಪಾದನೆ, ಕ್ಷೇತ್ರಕಾರ್ಯ, ಇಂಗ್ಲೆಂಡದಲ್ಲಿಯ ಕನ್ನಡ ಹಸ್ತಪ್ರತಿ ಮುಂತಾದ ವಿಷಯಗಳನ್ನು ಪ್ರಸ್ತಾಪಿಸುತ್ತದೆ.
 (ಪ್ರ) :ನರೇಶ & ಕಂಪನಿ, ಬೆಂಗಳೂರು - ೧೯೮೮, ಸ್ವಪ್ನ ಬುಕ್ ಹೌಸ್, ಬೆಂಗಳೂರು - ೧೯೯೫, ೨೦೧೦

ಮಾರ್ಗ ಸಂಪುಟ ೩ :

marga_3ಈ ಸಂಪುಟದಲ್ಲಿ ಪ್ರಬಂಧ, ಚಿಂತನ, ನಿರ್ವಚನ, ಪ್ರಸ್ತಾವನೆ ಹೀಗೆ ನಾಲ್ಕು ವಿಭಾಗಗಳಿದ್ದು, ಪ್ರಾಚೀನ ಕನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯ ಎಂಬ ನಾಲ್ಕು ಘಟ್ಟಗಳಲ್ಲಿ ಸಂಭವಿಸಿದ ಚಳುವಳಿ, ಪ್ರತಿಭಟನೆ, ಅಭಿನವ ಪಂಪನ ಅನನ್ಯತೆ, ಜೈನ, ವೀರಶೈವ ಧರ್ಮಗಳ ವಿಲಕ್ಷಣತೆ, ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳ ನಾಶದ ವಿಚಾರ, ಪ್ಲೀಟ ಸಂಗ್ರಹಿಸಿದ ಸ್ವಾತಂತ್ರ್ಯಸಮರದ ಲಾವಣಿ ಸಾಹಿತ್ಯ, ಕೆಳದಿ ಮತ್ತು ಸ್ವಾಧಿ ಸಂಸ್ಥಾನಗಳ ವಿಚಾರ, ನಾಟಕ, ಗೋವಿಂದಪೈ, ಹರ್ಡೇಕರ್ ಮಂಜಪ್ಪ, ಶಾತಿರಾಜ ಶಾಸ್ತ್ರಿಗಳ ಸಂಶೋಧನೆ, ಸಾಹಿತ್ಯಕ್ಕೆ ಸಂಬಂಧಿಸಿದ ಆಲೋಚನೆಗಳು ವ್ಯಕ್ತವಾಗಿವೆ. ಚಿಂತನ ವಿಭಾಗದಲ್ಲಿ ಪಂಪನ ಧರ್ಮ, ಚಂಪೂ, ಪ್ರಬಂಧ ಮತ್ತು ಪ್ರಸಂಗ ಕುರಿತು ಚರ್ಚೆ, ಕೆಲವು ಜನಪದ ಆಚರಣೆಗಳು, ಕಲ್ಯಾಣದ ಕಟ್ಟುವಿಕೆಗೆ ಸಂಬಧಿಸಿದ ವಿಚಾರ, ತೊಳ್ಕಾಪ್ಪಿಯಂ ಹಾಗೂ ಕವಿರಾಜಮಾರ್ಗ ಕೃತಿಗಳ ಸ್ವರೂಪ ಮುಂತಾದ ಸಂಗತಿಗಳ ಅಧ್ಯಯನಗಳಿವೆ. ಮೂರನೆಯ ಅಧ್ಯಯನ ವಿಭಾಗದಲ್ಲಿ ಶರಣರು, ಶರಣ ಸಾಹಿತ್ಯ, ಆ ಸಾಹಿತ್ಯದಲ್ಲಿ ಪ್ರಯೋಗಗೊಂಡಿರುವ ವಿಶಿಷ್ಟ ಪರಿಭಾಷೆ, ಪರಿಕಲ್ಪನೆಗಳ ಚರ್ಚೆ, ವಿವೇಚನೆ, ವಿಶ್ಲೇಷಣೆಗಳಿವೆ. ಪ್ರಸ್ತಾವನೆ ಭಾಗದಲ್ಲಿ ಶರಣರು, ವಚನ ಸಾಹಿತ್ಯ, ವ್ಯಾಕರಣ ಕೃತಿ, ಸಾಂಗತ್ಯ ಕೃತಿ, ಕೈಫಿಯತ್ ಮುಂತಾದ ಸಂಪಾದಿತ ಕೃತಿಗಳಿಗೆ ಬರೆದ ಮೌಲ್ಯಿಕ ಪ್ರಸ್ತಾವನೆಗಳಿವೆ.
(ಪ್ರ) : ಎಸ್ ಬಿ. ಎಸ್ ಪಬ್ಲಿಷರ್, & ಡಿಸ್ಟ್ರಿಬ್ಯೂಟರ್ಸ, ಬೆಂಗಳೂರು – ೧೯೯೭, ಸಪ್ನ ಬುಕ್ ಹೌಸ್, ಬೆಂಗಳೂರು -೨೦೧೦