ವಚನಸಾಹಿತ್ಯದ ಪ್ರಾಚೀನ ಆಕರಕೋಶ

ವಚನಸಾಹಿತ್ಯದ ಪ್ರಾಚೀನ ಆಕರಕೋಶ:

vachanasahity aakara kosh

ಬಸವಯುಗದ ಶಿವಶರಣ-ಶರಣೆಯರು ಮತ್ತು ಬಸವೋತ್ತರಯುಗದ ಶಿವಶರಣರು, ಅಜ್ಞಾತ ಶಿವಶರಣರು ರಚಿಸಿದ ವಚನಸಾಹಿತ್ಯದ ಪ್ರಮಾಣ ಸಾಕಷ್ಟು ದೊಡ್ಡದಾಗಿದ್ದು, ಆ ರಾಶಿ, ರಾಶಿ ವಚನಗಳ ನಿಜಸ್ವರೂಪವನ್ನು ಗುರುತಿಸುವುದು ಸವಾಲಿನ ಕಾರ್ಯವಾಗಿದೆ. ಬಸವಯುಗದ ೧೨೫ ಶರಣರ ಮತ್ತು ೩೨ ಜನ ಶರಣೆಯರ ಅಂತೆಯೆ, ಬಸವೋತ್ತರ ಯುಗದ ೨೯ ಶಿವಶರಣರ ಪ್ರಕಟಿತ, ಅಪ್ರಕಟಿತ-ಹಸ್ತಪ್ರತಿರೂಪದ ಆಕರಗಳನ್ನು ಅಂಕಿತಗಳ ಸಮೇತ ಹಾಗೂ ೫೩ ಶರಣರ ಕೇವಲ ಅಂಕಿತಗಳ ಮೂಲಕ ಅಜ್ಞಾತರೆಂದು ಗುರುತಿಸಿ ಇವರೆಲ್ಲರ ಪ್ರಕಟಿತ, ಅಪ್ರಕಟಿತ ಆಕರಗಳನ್ನು ಒದಗಿಸಿರುವುದು ಈ ಕೃತಿಯಲ್ಲಿ ಒಡೆದು ಕಾಣುವಂತಿದೆ. ಅನುಬಂಧದಲ್ಲಿ ವಚನಕಾರರು ಮತ್ತು ಅವರ ಅಂಕಿತಗಳನ್ನು ಅಕಾರಾದಿಯಲ್ಲಿ ಸಂಯೋಜಿಸಿರುವುದು ಕೊನೆಯಲ್ಲಿ ಪ್ರಕಟಿತ, ಅಪ್ರಕಟಿತ ಆಕರಗ್ರಂಥಗಳ ಪಟ್ಟಿ ಕೊಟ್ಟಿರುವುದು ಅಭ್ಯಾಸಿಗಳ ದೃಷ್ಟಿಯಿಂದ ಅನುಕೂಲವಾಗಿದೆ. "ವಚನ ಸಾಹಿತ್ಯ ಬಹುಮಟ್ಟಿಗೆ ಇಡಿಯಾಗಿ ಪ್ರಕಟವಾದ ಇಂದಿನ ಸಂದರ್ಭದಲ್ಲಿ  ಯಾವ ಯಾವ ಶರಣರ ವಚನಗಳು ಯಾವ ಯಾವ ಪ್ರಾಚೀನ ಆಕರಗಳಲ್ಲಿ ಸಿಗುವವೆಂಬುದನ್ನು ತೋರಿಸಿಕೊಡುವ ಒಂದು ಸಮಗ್ರ ಸೂಚಿಯ ಅವಶ್ಯಕತೆ ಇದೆ" ಎಂಬುದನ್ನು ಮನಗಂಡ ಸಂಪಾದಕರು, ಆ ಕಾರ್ಯವನ್ನು ಈ ಕೃತಿಯ ಮೂಲಕ ಸಾಧಿಸಿ ತೋರಿಸಿದ್ದಾರೆ. (ಪ್ರ. ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯಮಠ, ಡಂಬಳ-ಗದಗ,೧೯೯೧).