ಗ್ರಂಥಸಂಪಾದನ ಶಾಸ್ತ್ರ:
ವಚನ ಸಂಕಲನ ಸಂಪುಟ -೪:
ಹರಿಹರ ವಿರಚಿತ ಕನ್ನಡ ಶರಣರ ಕಥೆಗಳು:
ಈ ಕೃತಿಯ ಗೌರವ ಸಂಪಾದಕರು ಮತ್ತು ಸಂಪಾದಕರು ಡಾ ಕಲಬುರ್ಗಿಯವರು. ಈ ಮೊದಲು ತಾವು ಸಂಪಾದಿಸಿದ್ದ 'ಹರಿಹರನ ರಗಳೆಗಳು' ಕೃತಿಯ ಎರಡನೆಯ ಕಾಂಡದಲ್ಲಿ 'ಕನ್ನಡ ನಾಡಿನ ಶರಣರ ರಗಳೆಗಳು' ಎಂದು ವಿಂಗಡಿಸಿ ೨೨ ರಗಳೆಗಳನ್ನು ಪ್ರಕಟಿಸಿದ್ದರು. ಅವುಗಳಲ್ಲಿ ೧೦ ರಗಳೆಗಳನ್ನು ಆಯ್ದು ಈ ಕೃತಿಯನ್ನು ಸಂಪಾದಿಸಿದ್ದಾರೆ. ಪ್ರಾಚಿನ ಗದ್ಯ ಸಾಹಿತ್ಯ ಮಾಲೆಯ ೫ನೆಯ ಕೃತಿ ಇದು. ಗೌರವ ಸಂಪಾದಕತ್ವದ ತಮ್ಮ ಮಾತುಗಳಲ್ಲಿ ಡಾ. ಕಲಬುರ್ಗಿಯವರು- "ಕನ್ನಡ ಶರಣರ ಕಥೆಗಳು; ಹೆಸರೇ ಸುಚಿಸುವಂತೆ' ಕರ್ನಾಟಕಕ್ಕೆ ಸಂಬಂಧಿಸಿದ, ಗದ್ಯ-ಪದ್ಯ ಮಿಶ್ರಿತ ರೂಪದ ರಗಳೆಗಳಿಗೆ ವಸ್ತುವಾಗಿರುವ, ಶರಣರ ಕೃತಿಗಳನ್ನೊಳಗೊಂಡಿದೆ. ಶರಣರ ವಚನಗಳ ಗದ್ಯವನ್ನು ಶುದ್ಧಸಾಹಿತ್ಯಕ್ಕೆ ಅಳವಡಿಸಿದ ನಡುಗನ್ನಡ ಸಾಹಿತ್ಯದ ಆದಿಕವಿಯಾಗಿದ್ದಾನೆ ಹರಿಹರ.... ಭಕ್ತಿ ಕೇಂದ್ರಿತ ಆಶಯ, ಸ್ಥಳಿಯ ಶರಣರ ಚರಿತ್ರೆನಿಷ್ಠ ವಸ್ತು, ರಗಳೆ ಸಾಹಿತ್ಯ ಪ್ರಕರ, ನಡುಗನ್ನಡ ಭಾಷೆ ಇತ್ಯಾದಿ ಹೊಸ ಉಪಕರಣಗಳನ್ನು ಶೋಧಿಸಿ, ಶೃಜನ ಶೀಲತೆಯಲ್ಲಿ ಎರಕಹೊಯ್ದವನೀತ. ಭಾಷೆಯ ಲಾಲಿತ್ಯ, ಶೈಲಿಯ ಉತ್ಸಾಹ, ಲಯಬದ್ಧವಾಕ್ಯ, ವೈವಿಧ್ಯಪೂರ್ಣ ಕಲ್ಪನೆ ಮೊದಲಾದವುಗಳಿಂದಾಗಿ ಇವನ ಗದ್ಯಕ್ಕೆ ಈ ಮೊದಲು ಕನ್ನಡದಲ್ಲಿಲ್ಲದ ಹೊಸ ಸೊಬಗು ಪ್ರಾಪ್ತವಾಗಿದೆ. ವಡ್ಡಾರಾಧನೆಯನ್ನು ಬಿಟ್ಟರೆ ಕನ್ನಡ ಗದ್ಯವನ್ನು ಹೊಸಬಗೆಯಲ್ಲಿ ಹದಗೊಳಿಸಿದ ಕೀರ್ತಿ ಹರಿಹರನಿಗೆ ಸಲ್ಲುತ್ತದೆ" ಎಂದು ಹೇಳಿ ಕೃತಿ ಮತ್ತು ಕೃತಿಕಾರನನ್ನು ಪರಿಚಯಿಸಿದ್ದಾರೆ. (ಪ್ರ್ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೨೦೧೨).