ಸಂಶೋಧನೆ:
"ವ್ಯಕ್ತಿ ಕೇಂದ್ರಿತ ಬದುಕಿಗಿಂತ ಸಮಾಜಕೇಂದ್ರಿತ ಬದುಕು ಹೆಚ್ಚು ದುಃಖಮಯವಾಗುವುದು."
ಕವಿರಾಜಮಾಗ೯ ಪರಿಸರದ ಕನ್ನಡ ಸಾಹಿತ್ಯ :
ಇದು ಡಾ. ಕಲಬುರ್ಗಿಯವರು ತಮ್ಮ ಪಿಎಚ್.ಡಿ. ಪದವಿಗಾಗಿ ರಚಿಸಿದ ಕೃತಿ. ಕನ್ನಡದ ಮೊದಲ ಶಾಸ್ತ್ರಗ್ರಂಥವೆಂದು ಗುರುತಿಸಲ್ಪಟ್ಟಿರುವ ಈ ಕೃತಿಯು, ಕನ್ನಡ ನಾಡಿನ ಭೌಗೋಳಿಕ ವಿಸ್ತಾರ, ಸಾಂಸ್ಕೃತಿಕ ಅಸ್ಮಿತೆ, ಭಾಷಿಕ ಅಸ್ತಿತ್ವ ಮುಂತಾದ ಮಹತ್ವದ ಸಂಗತಿಗಳನ್ನು ಮೊದಲಬಾರಿಗೆ ಕಟ್ಟಿಕೊಡುವ ಹಿನ್ನೆಲೆಯಿಂದಾಗಿ ಮತ್ತೆ ಮತ್ತೆ ಚರ್ಚೆಗಿಡಾಗುತ್ತಲೇ ಇದೆ. ಬಹುಶ್ರುತ ಪಾಂಡಿತ್ಯವನ್ನು ಬಯಸುತ್ತಿದ್ದ ಈ ಕೃತಿಯನ್ನು ಒಂದು ಆವ್ಹಾನವೆಂಬಂತೆ ಅಧ್ಯಯನಕ್ಕೆ ಎತ್ತಿಕೊಂಡು ಅದರ ಕರ್ತೃ, ಪಾಠವ್ಯತ್ಯಾಸ, ವಿಷಯ ನಿರೂಪಣದ ಅವ್ಯವಸ್ಥೆ, ಪರಿಷ್ಕರಣದ ಅಗತ್ಯ, ನಾಡು-ನಾಡವರು, ಜನಪದ, ಕಾವ್ಯಪ್ರಕಾರಗಳು, ಕವಿಗಳು, ಶಾಸ್ತ್ರವಿಚಾರ, ಶಾಸನ ಶಾಹಿತ್ಯ, ಕವಿರಾಜಮಾರ್ಗ ಮತ್ತು ಪಂಪನ ಮಧ್ಯದ ಕಾಲ, ಶಾಸನ ಕವಿಗಳು, ಪ್ರಮುಖ ಕವಿಗಳು, ಇತರ ಸಾಹಿತ್ಯ - ಎನ್ನುವ ಅಧ್ಯಯನ ಶಿಸ್ತಿನಲ್ಲಿ ಡಾ. ಕಲಬುರ್ಗಿಯವರು 'ಕವಿರಾಜಮಾರ್ಗ'ದ ನಿಜಸ್ವರೂಪವನ್ನು ತೆರೆದಿಟ್ಟಿರುವುದರಿಂದ ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಇದೊಂದು ಆಕರಗ್ರಂಥವೆನಿಸಿದೆ. (ಪ್ರ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಮೊದಲ ಆವೃತ್ತಿ-೧೯೭೩, ಪರಿಷ್ಕೃತ ದ್ವಿತೀಯ ಆವೃತ್ತಿ-ಸಪ್ನ ಬುಕ್ ಹೌಸ್ ಬೆಂಗಳೂರು -೨೦೦೪.)
ಶುದ್ಧಶೈವ ಮತ್ತು ಗೋಳಕಿಮಠ ಸಂಪ್ರದಾಯ:
ಈ ಕೃತಿಯ ಸಂಪಾದಕರು ಡಾ. ಕಲಬುರ್ಗಿಯವರು. ಕೃತಿ ಶೀರ್ಷಿಕೆಯ ಲೇಖನ ಅವರದೆ. ಇನ್ನೆರೆಡು ಲೇಖನಗಳು ಇಲ್ಲಿವೆ (೧) ತಮಿಳುನಾಡಿನಲ್ಲಿ ಶೈವಧರ್ಮದ ಗೊಳಕಿ ಪಂಥ (ಅನುಃ ಡಾ. ಸಿ.ಆರ್. ಎರವಿನತೆಲಿಮಠ) (೨) ಆಂದ್ರಪ್ರದೇಶದ ಗೊಳಕಿಮಠ ಶಾಸನಗಳುಃ ಒಂದು ಅಧ್ಯಯನ (ಅನುಃ ಪ್ರೊ. ಸದಾನಂದ ಕನವಳ್ಳಿ) ಬಸವಪೂರ್ವದ ನಾಲ್ಕು ಶೈವಗಳಲ್ಲಿ ಪಾಶುಪತ (ಸಿಂಹಪರ್ಷೆ), ನಕುಲೀಶ (ಶಕ್ತಿಪರ್ಷೆ, ಕಾಳಾಮುಖ), ಮಹಾವ್ರತ (ಸೋಮ, ಕಾಪಾಲಿಕ)- ಈ ಮೂರನ್ನು ಡಾ. ಡೆವಿಡ್ ಲೊರೆಂಜಿನ್ ಮೊದಲಾದ ವಿದ್ವಾಂಸರು ಸರಿಯಾಗಿ ಅಭ್ಯಸಿಸಿದರಾದರೂ ಇವುಗಳಿಗಿಂತ ಪ್ರಮೂಖವಾದ ಶುದ್ಢಶೈವದ ಅಭ್ಯಾಸವನ್ನು ಅವರು ನಿರ್ಲಕ್ಷಿಸಿದರು. ಇದನ್ನು ಗಮನಿಸಿದ ಡಾ ಕಲಬುರ್ಗಿಯವರಿಗೆ ಆ ಉಪೇಕ್ಷಿತ ಸಾಹಿತ್ಯದತ್ತ ಸಹಜ ಕುತೂಹಲ ಮೂಡಿಸಿತು. ಆಗ ಅವರು ಶುದ್ಢಶೈವ ನಮ್ಮ ನಾಡಿನಲ್ಲಿ ಹರಡಿದ್ದ ಜಾಡು ಹಿಡಿದು ಶಾಸನ-ಕಾವ್ಯ ಅವಶೇಷಗಳನ್ನು ಅಭ್ಯಸಿಸಿದಾಗ ಅದು ತಮಿಳುನಾಡಿನ ಅರುವತ್ಮೂರು ಪುರಾತನರ ಶೈವಸಂಪ್ರದಾಯವನ್ನು ತನ್ನಂತೆ ಪರಿವರ್ತಿಸಿಕೊಂಡ ರೀತಿಯಲ್ಲಿಯೇ ೧೫ನೆಯ ಶತಮಾನದಲ್ಲಿ ಕರ್ನಾಟಕದ ಶರಣ ಸಂಪ್ರದಾಯವನ್ನು ಅದು ಕ್ರಮೇಣ (ವೀರ)ಶೈವೀಕರಿಸಿಕೊಂಡುದನ್ನು ಅದರ ಫಲವಾಗಿ ಶುದ್ಢಶೈವ ಬ್ರಾಹ್ಮಣರೂ ಇವರ ಪ್ರಭಾವದಿಂದ ಮಿಕ್ಕ ಮೂರು ಶಾಖೆಗಳ ಶಿವಬ್ರಾಹ್ಮಣರೂ ಜಂಗಮರಾಗಿ ಬೆಳೆದುದನ್ನು ಶೋಧಿಸಿಕೊಡುವುದು ಅವರಿಗೆ ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿಯೇ ಚತುರಾಚಾರ್ಯರ ಪೀಠ, ತರುವಾಯ ಪಂಚಾಚಾರ್ಯರ ಪೀಠವ್ಯವಸ್ಠೆ ಬೆಳೆದು ಸಿದ್ಧಾಂತಶೈವ ರೂಪಗೊಂಡಿದ್ದರಿಂದ ಅದನ್ನು ಗಟ್ಟಿಗೊಳಿಸಲು 'ಸಿದ್ದಾಂತ ಶಿಖಾಮಣಿ' ಗ್ರಂಥ ರಚನೆಯಾಯಿತೆಂದು ಅವರಿಗೆ ಸ್ಪಷ್ಟವಾಗಿ ಹೇಳಲು ಸಾದ್ಯವಾಯಿತು. ಈ ಕಾರಣಕ್ಕಾಗಿ ಶುದ್ಧಶೈವದ ಶೋಧ ತುಂಬಾ ಮಹತ್ವದ್ದಾಗಿದ್ದು; ಸಂಪಾದಕರು ಹೇಳುವಂತೆ "ಆವರೆಗೆ ಮುಚ್ಚಿಹೋಗಿದ್ದ ಒಂದು ಮುಖ್ಯ ಬಾಗಿಲು ತೆರೆದುಕೊಳ್ಳುವಂತಾಯಿತು". (ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ-೨೦೦೫)