ಸಮಗ್ರ ಸಂಶೋಧಕ ಎಂ.ಎಂ.ಕಲಬುರ್ಗಿ:
ಮೃತ್ಯುಂಜಯ ರುಮಾಲೆ ಬರೆದಿರುವ ಈ ಕೃತಿ ಐದು ಭಾಗಗಳಲ್ಲಿ ಚಾಚಿಕೊಂಡಿದ್ದು; ಕ್ರಮವಾಗಿ ಪ್ರವೇಶ, ನಂತರದ ಮೊದಲ ಭಾಗದಲ್ಲಿ ವ್ಯಕ್ತಿ ಕಲಬುರ್ಗಿ, ಯರಗಲ್ಲು (ಗುಬ್ಬೆವಾಡ) ಸಿಂದಗಿ-ವಿಜಾಪೂರ-ಧಾರವಾಡ-ಹಂಪಿ ಪರಿಸರಗಳಲ್ಲಿ ಸಂಶೋಧಕ ಕಲಬುರ್ಗಿ ಕ್ರಮಿಸಿದ ಇತಿವೃತ್ತ ಮತ್ತು ಮುಂದೆ ಧಾರವಾಡ-ಹಂಪಿ ಪರಿಸರಗಳಲ್ಲಿ ಸಂಶೋಧಕ ಕಲಬುರ್ಗಿ ಕ್ರಮಿಸಿದ ಇತಿವೃತ್ತ ಎಂಬ ಎರಡು ಹಿನ್ನೆಲೆಗಳನ್ನು ವಿವರಿಸಿ ಮುಂದಿನ ಭಾಗಗಳ ವಸ್ತು ನಿರೂಪಣೆಗೆ ಸೂಕ್ತ ವೇದಿಕೆಯೊಂದನ್ನು ಸಜ್ಜುಗೊಳಿಸಿಕೊಳ್ಳಲಾಗಿದೆ. ಈ ನಿಟ್ಟಿನ ಎರಡನೆಯ ಭಾಗದಲ್ಲಿ ಕಲಬುರ್ಗಿಯವರ ಆಕರಮುಖಿ, ವಿಶ್ಲೇಷಣಮುಖಿ, ವ್ಯಾಖ್ಯಾನಮುಖಿ ಮುಂತಾದ ಸಂಶೋಧನೆಯ ವಿವಿಧ ಆಯಾಮಗಳನ್ನು ಕುರಿತು ವಿವೇಚಿಸಲಾಗಿದೆ. ಮೂರನೆಯ ಭಾಗವು ಡಾ. ಕಲಬುರ್ಗಿಯವರಿಗೆ ೨೦೦೬ರಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ತಂದುಕೊಟ್ಟ ಮಾರ್ಗಸಂಪುಟ- ೪ರ ವಿಸ್ತೃತ ಪರಿಚಯಕ್ಕೆ ನಿಷ್ಠವಾಗಿದೆ. ನಾಲ್ಕನೇಯ ಭಾಗದಲ್ಲಿ ಉಪಸಂಹಾರದ ವಿಚಾರಗಳಿವೆ. ಅನುಬಂಧ ಅವರ ಸ್ವವಿವರ ಮತ್ತು ಕೃತಿಪಟ್ಟಿಯನ್ನು ಒಳಗೊಂಡಿದೆ. (ಪ್ರ. ಪಲ್ಲವ ಪ್ರಕಾಶನ, ಚೆನ್ನಪಟ್ಟಣ-೨೦೧೫)
ನಾಡೋಜ ಎಂ.ಎಂ.ಕಲಬುರ್ಗಿ:
ಕಲ್ಯಾಣರಾವ. ಜಿ. ಪಾಟೀಲ ರಚಿಸಿರುವ ಈ ಕೃತಿ, ಡಾ. ಕಲಬುರ್ಗಿಯವರ ಜೀವನ ಮತ್ತು ಸಾಧನೆಗಳನ್ನು ವಿಶ್ಲೇಷಣಾತ್ಮಕವಾಗಿ ಮಂಡಿಸುತ್ತದೆ. ಸಂದರ್ಭಗಳ ಔಚಿತ್ಯ ಹೆಚ್ಚುವಂತೆ ಅಲ್ಲಲ್ಲಿ (ಶಿವಶರಣರ) ವಚನಗಳನ್ನು ಬಳಸಿಕೊಂಡಿರುವುದು, ಕಲಬುರ್ಗಿಯವರ ಹತ್ಯೆಯ ಹಿನ್ನೆಲೆಯಲ್ಲಿ ನಾಡಿನಾದ್ಯಂತ ವಿದ್ವತ್ ಲೋಕ ವ್ಯಕ್ತಪಡಿಸಿದ 'ನುಡಿನಮನ' ರೂಪದ ಪ್ರತಿಕ್ರಿಯೆಗಳನ್ನು ಒಳಗೊಂಡಿರುವುದು ಈ ಕೃತಿಯ ವಿಶೇಷತೆಯಾಗಿದೆ. (ಪ್ರ. ವಿಜಯ ಕಲ್ಯಾಣ ಪ್ರಕಾಶನ, ಕೊಂಡನಾಯಕನಹಳ್ಳಿ, ಹೊಸಪೇಟೆ ತಾಲೂಕು-೨೦೧೫).
ಕಲಬುರ್ಗಿ ನೆನಪು:
ಶಾಮಸುಂದರ ಬಿದರಗುಂದಿಯವರು ಸಂಪಾದಿಸಿದ ಕೃತಿ ಇದು. ೨೦೧೩ರಲ್ಲಿ 'ಧಾರವಾಡ ಸಾಹಿತ್ಯ ಸಂಬ್ರಮ' ಹೆಸರಿನ ಟ್ರಸ್ಟ್ ಅಸ್ತಿತ್ವಕ್ಕೆ ಬಂದು ಅದೇ ವರ್ಷ 'ಸಾಹಿತ್ಯ ಸಂಬ್ರಮ'ವನ್ನು ಆಯೋಜಿಸತೊಡಗಿತು. ಅದು ಅಭೂತಪೂರ್ವ ಯಶಸ್ಸು ಕಂಡದ್ದರಿಂದ ೧೪,೧೫ ನೇ ಸಾಲಿನಲ್ಲಿಯೂ ಅದರ ಆವೃತ್ತಿಗಳು ಜರುಗಿದವು. ಈ ಮೂರು ಆವೃತ್ತಿಗಳ ಯಶಸ್ಸಿಗೆ ಕಾರಣ ಪುರುಷ ಪ್ರಮುಖರಲ್ಲಿ ಒಬ್ಬರಾಗಿದ್ದ ಡಾ. ಎಂ.ಎಂ.ಕಲಬುರ್ಗಿಯವರು ಹತ್ಯೆಗೀಡಾಗಿದ್ದರಿಂದ ನಾಲ್ಕನೆಯ ಆವೃತ್ತಿ ಅವರ ನೆನಪಿಗೆ ಸಮರ್ಪಿತವಾಗಿ ನೆರವೇರಿತು. "ಸಾಹಿತ್ಯ ಸಂಬ್ರಮಕ್ಕೆ ಕಲಬುರ್ಗಿಯವರು ಮಾಡಿದ ಕೆಲಸಗಳನ್ನು ಸ್ಮರಿಸಿಕೊಳ್ಳುವ ನಿಮಿತ್ತ ೨೦೧೫ ಅಕ್ಟೋಬರ ೪ ರಂದು ಒಂದು ದಿನ ವಿಚಾರ ಸಂಕೀರಣ ಹಮ್ಮಿಕೊಳ್ಳಲಾಗಿತ್ತು. ಅಂದು ವಿದ್ವಾಂಸರು ಡಾ. ಕಲಬುರ್ಗಿಯವರ ಬದುಕು-ಬರಹಗಳಿಗೆ ಸಂಬಂಧಿಸಿದಂತೆ ಪ್ರಬಂಧಗಳನ್ನು ಮಂಡಿಸಿದರು. ಆ ಪ್ರಬಂಧಗಳಿಗೆ ಇನ್ನೂ ಕೆಲವನ್ನು ಸೇರಿಸಿ 'ಧಾರವಾಡ ಸಾಹಿತ್ಯ ಸಂಬ್ರಮ ಟ್ರಸ್ಟ್' ಈ ಕೃತಿಯನ್ನು ಪ್ರಕಟಿಸಿದೆ. ಮೊದಲ ಭಾಗದಲ್ಲಿ 'ವ್ಯಕ್ತಿ ಸಾಧನೆ' ಕುರಿತ ೧೪ ಲೇಖನ + ೧ ಕವಿತೆಗಳಿವೆ. 'ಕೃತಿ-ಕಾರ್ಯ-ಸಾಧನೆ' ಕುರಿತ ಎರಡನೆಯ ಭಾಗದಲ್ಲಿ ೧೦ ಲೇಖನಗಳಿವೆ". (ಪ್ರ. ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್, ಧಾರವಾಡ-೨೦೧೬).