ಹಾದಿಯ ಹೆಜ್ಜೆಗಳು/ ಡಾ.ಎಂ.ಎಂ.ಕಲಬುರ್ಗಿ ಮಾರ್ಗದ ಮಹಾವಾಕ್ಯಗಳು:
ಇವು ಡಾ.ಎಫ್. ಡಿ.ಹಳ್ಳಿಕೇರಿ ಸಂಪಾದಿಸಿದ ಕೃತಿಗಳು. ಡಾ.ಎಂ.ಎಂ.ಕಲಬುರ್ಗಿ ಅವರು ಬಹುಶ್ರುತ ವಿದ್ವಾಂಸರು. ಸೋಪಜ್ಞತೆ ಅವರ ಬರಹಗಳ ಜೀವಶಕ್ತಿ. ಹತ್ತು ವಾಕ್ಯಗಳಲ್ಲಿ ವಿಸ್ತಾರಗೊಳ್ಳಬಹುದಾದ ವಿಚಾರಗಳನ್ನು ಒಂದೇ ವಾಕ್ಯದಲ್ಲಿ ಹ್ರಸ್ವಗೊಳಿಸಿ ಸೂತ್ರರೂಪದಲ್ಲಿ, ಖಚಿತವಾಗಿ, ಸ್ಪಷ್ಟವಾಗಿ ಹೇಳುವುದರಲ್ಲಿ ಅವರು ನಿಷ್ಣಾತರು. ಅವರ ಉಪನ್ಯಾಸಗಳಲ್ಲಿ ಅದು ಎದ್ದುಕಾಣುತ್ತದೆ. ಓದಿದವರು, ಕೇಳಿದವರು ತಮ್ಮ ಮಾತು, ಬರಹಗಳಲ್ಲಿ ಅವುಗಳನ್ನು ಉಲ್ಲೇಖಿಸುವುದು ಒಂದು ವಾಡಿಕೆಯಾಯಿತು. ಕಲಬುರ್ಗಿಯವರ ಈ ಅನನ್ಯತೆಯನ್ನು ದಾಖಲಿಸುವ ಅಗತ್ಯವನ್ನು ಮನಗಂಡ ಹಳ್ಳಿಕೇರಿಯವರು ೧೯೯೮ರಲ್ಲಿ ಕಲಬುರ್ಗಿಯವರ ಅರವತ್ತನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ 'ಹಾದಿಯ ಹೆಜ್ಜೆಗಳು' ಕೃತಿಯನ್ನು ೨೦೧೨ರಲ್ಲಿ '......ಮಾರ್ಗದ ಮಹಾವಾಕ್ಯಗಳು' ಕೃತಿಯನ್ನು ಸಂಪಾದಿಸಿದರು. ಮೊದಲನೆಯದು ಗಾತ್ರದಲ್ಲಿ ಕಿರಿದಾಗಿದ್ದು, ಎರಡನೆಯದು ಆ ಮುಂಚಿನ ಕೃತಿಯಲ್ಲಿ ಅಳವಡಿಸಿಕೊಂಡಿರುವ ೧೩ ವಿಷಯ ವಿಂಗಡಿತ ಉಪಶೀರ್ಷಿಕೆಗಳ ಅಡಿಯ ಚಿಂತನೆಗಳ ಜೊತೆಗೆ ಇನ್ನೂ ೧೩ ಹೊಸ ವಿಷಯಗಳ ಚಿಂತನೆಗಳನ್ನು ಅಳವಡಿಸಿಕೊಂಡು ಒಟ್ಟು ಅವರ ಉಲ್ಲೇಖನೀಯ, ಸೂತ್ರಪ್ರಾಯ ಚಿಂತನೆಗಳಿಗೆ ಸಮಗ್ರತೆ ಒದಗಿಸಲು ಪ್ರಯತ್ನಿಸಿರುವುದು ಕಲಬುರ್ಗಿಯವರ ಬಹುಮುಖೀಯ ಚಿಂತನೆಗಳನ್ನು ತಿಳಿಯಬೇಕೆನ್ನುವ, ಆ ನಿಟ್ಟಿನ ತಮ್ಮ ಆಲೋಚನೆಗಳಿಗೆ ಬಲ ತುಂಬಿಕೊಳ್ಳಬೇಕೆನ್ನುವ ಅಭ್ಯಾಸಿಗಳಿಗೆ ಸಾಕಷ್ಟು ಅವಕಾಶವನ್ನೊದಗಿಸುವ ಗ್ರಂಥಗಳು ಇವಾಗಿವೆ. ಹಾದಿಯ ಹೆಜ್ಜೆಗಳು ಕೃತಿಗೆ 'ನಲ್ನುಡಿ' ಬರೆದ ಹಾ.ಮಾ.ನಾಯಕ ಅವರು "...ವಚನ ಸಾಹಿತ್ಯ, ಭಾಷೆ-ವ್ಯಾಕರಣ-ಛಂದಸ್ಸು, ಕಲೆ, ರಂಗಭೂಮಿ, ಜಾನಪದ, ವಿಮರ್ಶೆ ಹೀಗೆ ಹತ್ತು ಹಲವು ವಿಚಾರಗಳಿಗೆ ಸಂಬಧಿಸಿದಂತೆ ಡಾ.ಎಂ.ಎಂ.ಕಲಬುರ್ಗಿಯವರು ವಿಚಾರ ಲಹರಿಯನ್ನು ಹರಿಸಿದ್ದಾರೆ". ಎಂದು ಹೇಳಿ, ಸುಮಾರು ಹದಿನೈದು ವಿಂಗಡಣೆಗಳಲ್ಲಿ ಡಾ. ಹಳ್ಳಿಕೇರಿಯವರು ಡಾ. ಕಲಬುರ್ಗಿಯವರ ಚಿಂತನೆಗಳನ್ನು ಕ್ರೋಢೀಕರಿಸಿರುವುದನ್ನು ಗುರು ತಿಸಿದ್ದಾರೆ.(ಪ್ರ. ನೆಲೆ ಪ್ರಕಾಶನ, ಸಿಂದಗಿ-೧೯೯೮/ವಿಕಾಸ ಪ್ರಕಾಶನ ಹೊಸಪೇಟೆ-೨೦೧೨).
ಪಂಪ ಪ್ರಶಸ್ತಿ ವಿಜೇತ ಡಾ.ಎಂ.ಎಂ.ಕಲಬುರ್ಗಿ:
ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಕರ್ನಾಟಕ ಸರಕಾರ ೧೯೯೬ರಲ್ಲಿ ಪಂಪ ಪ್ರಶಸ್ತಿ ನೀಡಿತು. ಈ ಸಂದರ್ಭದಲ್ಲಿ ಡಾ. ಜಿ.ವಿ.ಕುಲಕರ್ಣಿಯವರು ಕಲಬುರ್ಗಿಯವರನ್ನು ಕುರಿತು ಪರಿಚಯಾತ್ಮಕವಾದ ಈ ಪುಸ್ತಿಕೆಯನ್ನು ಬರೆದಿದ್ದಾರೆ. ಈ ಪುಸ್ತಕ ಸಹಜವಾಗಿಯೇ ಕಲಬುರ್ಗಿಯವರ ಜೀವನ, ಸಾಧನೆ, ವ್ಯಕ್ತಿತ್ವ, ವಿದ್ವತ್ತು, ಎದುರಿಸಿದ ವಿರೋಧ ಇತ್ಯಾದಿ ಸಂಗತಿಗಳನ್ನು ತುಂಬಾ ಆಪ್ತವಾಗಿ ಕ್ರೋಢಿಕರಿಸಿಕೊಡುವ ಉದ್ದೇಶದಿಂದ ರೂಪಿತವಾಗಿದೆ. ಹಾಗೆಂದೇ ಕುಲಕರ್ಣಿಯವರು ಈ ಕೃತಿ ಕುರಿತು "ಒಂದು ಕಿರು ಪರಿಚಯ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. (ಪ್ರ. ಪುರೋಗಾಮಿ ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ-೧೯೯೬).
ಮಹಾಮಾರ್ಗ:
ಡಾ.ಎಂ.ಎಂ.ಕಲಬುರ್ಗಿಯವರ ೬೦ನೆಯ ಹುಟ್ಟುಹಬ್ಬದಂದು ಅವರಿಗೆ ಅರ್ಪಿಸುದ ೯೨೫ ಪುಟಗಳ ಬ್ರಹದ್ಗ್ರಂಥವಿದು. ವಿಶೇಷವಾಗಿ ಸಂಶೋಧನೆಯ ಮಾರ್ಗದಲ್ಲಿ ಕ್ರಮಿಸಿ ಆ ಕ್ಷೇತ್ರದಲ್ಲಿ ಒಂದು 'ಮಹಾಮಾರ್ಗ'ವನ್ನೇ ನಿರ್ಮಿಸಿದ ಕಲಬುರ್ಗಿಯವರ ಆಸಕ್ತಿಯನ್ನು ನಿದರ್ಶಿಸುವ ಈ ಗ್ರಂಥದ ಸಂಪಾದಕರು ಸದಾನಂದ ಕನವಳ್ಳಿ ಹಾಗೂ ವೀರಣ್ಣ ರಾಜೂರ ಅವರು. ಈ ಗ್ರಂಥವನ್ನು ೧. ಸಂಶೋಧನ ವಿಧಾನ ೨. ಸಂಶೋಧನ ಪರಂಪರೆ ೩. ಎಂ.ಎಂ.ಕಲಬುರ್ಗಿ ಕೊಡುಗೆ ೪. ಎಂ.ಎಂ.ಕಲಬುರ್ಗಿ ಕೃತಿಗಳು ೫. ಎಂ.ಎಂ.ಕಲಬುರ್ಗಿ ಹೆಜ್ಜೆಗುರುತುಗಳು ೬. ಪಿಏಚ್.ಡಿ. ಪ್ರಬಂಧಸೂಚಿ ೭. ವಿಳಾಸಗಳು ಎಂಬ ಉಪಶೀರ್ಷಿಕೆಗಳಲ್ಲಿ ಸಂಯೋಜಿಸಿಕೊಳ್ಳಲಾಗಿದೆ. ವಿಧಾನ ಎನ್ನುವ ಮೊದಲ ಭಾಗವು ಸಂಶೋಧನೆಯ ಸ್ವರೂಪ, ಸಂಶೋಧನೆಯ ಪರಿಕಲ್ಪನೆ ಆದಿಯಾಗಿ ಆ ಕ್ಷೇತ್ರದ ಬಹುಮುಖಿ ಅಧ್ಯಯನಕ್ಕೆ ದಿಕ್ಸೂಚಿಯಾಗಬಲ್ಲ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟಿಕೊಡುವ ಒಟ್ಟು ೨೨ ವಿಷಯಗಳಿಗೆ ಸಂಬಧಿಸಿದ ವಿದ್ವತ್ ಬರಹಗಳನ್ನು ಒಳಗೊಂಡಿದೆ. ಪರಂಪರೆ ಎಂಬ ಎರೆಡನೆಯ ಭಾಗವು ಕರ್ನಲ್ ಮೆಕೆಂಝಿ ಒಳಗೊಂಡಂತೆ ಎಸ್. ಶಿವಣ್ಣನವರ ವರೆಗಿನ ೬೧ ಸಂಶೋಧಕರ ಕುರಿತು ತುಂಬಾ ಅಪರೂಪದ ಮಾಹಿತಿಯುಳ್ಳ ಲೇಖನಗಳನ್ನು ಒಳಗೊಂಡಿದೆ. ನಂತರದ ವಿಭಾಗಗಳು ಕಲಬುರ್ಗಿಯವರ ಸಂಶೋಧನೆ, ಸೃಜನಶೀಲತೆ, ಕೃತಿವಿಶ್ಲೇಷಣೆ, ಕೌಟುಂಬಿಕ , ಶೈಕ್ಷಣಿಕ ಐತಿಹಾಸಿಕ ಹೀಗೆ ಹಲವು ಆಯಾಮಗಳಿಂದ ಗುರುತಿಸುವ ಆಸಕ್ತಿ ತೋರಿವೆ. (ಪ್ರ. ವೀರಶೈವ ಅಧ್ಯಯನ ಸಂಸ್ಥೆ , ಶ್ರೀ ಜಗದ್ಗುರು ತೋಂಟದಾರ್ಯಮಠ ಗದಗ, ವೀರಶೈವ ಅಧ್ಯಯನ ಅಕಾಡಮಿ, ಶ್ರೀ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ-೧೯೯೮).
ಕಲಬುರ್ಗಿ ೬೦ಃ
ಡಾ. ಎಂ.ಎಂ.ಕಲಬುರ್ಗಿಯವರ ೬೦ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಕಟವಾಗಿರುವ ಗ್ರಂಥವಿದು. ಆರಂಭದಲ್ಲಿ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಬರೆದಿರುವ 'ಕಣ್ಣಮುಂದಿನ ಬೆಳಕು', ಮತ್ತು ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಬರೆದಿರುವ 'ಹೊಸಮಾರ್ಗದ ಹರಿಕಾರ' ಎನ್ನುವ ಲೇಖನಗಳಿದ್ದು; ಇವೆರಡೂ ಕಲಬುರ್ಗಿಯವರನ್ನು ಕುರಿತು ಶುಭಶಂಸನಾಪರ ಲೇಖನಗಳಗಿವೆ. ಉಳಿದಂತೆ ಹಿರಿಯ ವಿದ್ವಾಂಸರು, ಆತ್ಮೀಯರು, ನಿಕಟ ಒಡನಾಡಿಗಳು, ಗೆಳೆಯರು, ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ಪಿ.ಎಚ್. ಡಿ. ಮಾಡಿದವರು, ಅವರ ಶಿಷ್ಯಂದಿರು, ಅಭಿಮಾನಿಗಳು ಬರೆದ ೭೫ ಲೇಖನ ಹಾಗೂ ಎರೆಡು ಸಂದರ್ಶನಗಳನ್ನು ಈ ಕೃತಿ ಒಳಗೊಂಡಿದೆ. ಇದನ್ನು ಸಂಪಾದಿಸಿದವರು ಡಾ. ಜಿ.ಎಂ.ಹೆಗಡೆ ಮತ್ತು ಡಾ. ಬಾಳಣ್ಣ ಶೀಗೀಹಳ್ಳಿ.(ಪ್ರ. ಶಿವಚಂದ್ರ ಪ್ರಕಾಶನ ಸಂಸ್ಥೆ, ಹುಬ್ಬಳ್ಳಿ ೧೯೯೮).