ಶಾಸ್ತ್ರ ಸಾಹಿತ್ಯ:
ಪಾಶ್ಚಿಮಾತ್ಯರ ಪ್ರಭಾವದಿಂದ ಕಳೆದ ಶತಮಾನದಲ್ಲಿ ಗ್ರಂಥಸಂಪಾದನೆ ಇತ್ಯಾದಿ ಹೊಸ ಹೊಸ ಅಧ್ಯಯನಕ್ಷೇತ್ರಗಳು ಕನ್ನಡದಲ್ಲಿ ತೆರೆದುಕೊಂಡವು. ಆಗ ಇವುಗಳನ್ನು ಕುರಿತು ಕನ್ನಡನಿಷ್ಠ ಶಾಸ್ತ್ರಕೃತಿ ಬರೆಯುವುದು ಅಗತ್ಯವೆನಿಸಿತು. ಈ ದೃಷ್ಟಿಯಿಂದ ಬರೆದ 'ಕನ್ನಡ ಹಸ್ತಪ್ರತಿಶಾಸ್ತ್ರ', 'ಕನ್ನಡ ಗ್ರಂಥಸಂಪಾದನಾಶಾಸ್ತ್ರ', 'ಕನ್ನಡ ಸಂಶೋಧನಾಶಾಸ್ತ್ರ', 'ಕನ್ನಡ ನಾಮವಿಜ್ಞಾನ'- ಈ ನಾಲ್ಕು ಗ್ರಂಥಗಳನ್ನು ಕಲಬುರ್ಗಿಯವರು ಪ್ರಕಟಿಸಿ ಆಯಾ ಕ್ಷೇತ್ರಗಳ ಕೊರತೆಯನ್ನು ತುಂಬಿಕೊಟ್ಟರು. ಇವರ ಅಧ್ಯಯನ, ಅಧ್ಯಾಪನಗಳನ್ನೇ ಮೂಲಧನವನ್ನಾಗಿಸಿಕೊಂಡು ರಚೆನೆಗೊಂಡ ಇವು, ಅನುವಾದ ಇಲ್ಲವೆ ಅನುಸರಣೆಗಳೆನಿಸದೆ ಸ್ವತಂತ್ರ ರಚನೆಗಳೆನಿಸಿದವು. ಇವುಗಳಲ್ಲಿ 'ಕನ್ನಡ ಗ್ರಂಥಸಂಪಾದನಾಶಾಸ್ತ್ರ'ವನ್ನು ಕುರಿತು ಡಾ|| ಹಾ.ಮಾ. ನಾಯಕರು ವ್ಯಕ್ತಪಡಿಸಿದ "ವಿದ್ವತ್ತು, ಪಾಂಡಿತ್ಯ ಇವು ನಮ್ಮೊಂದಿಗೆ ಕೊನೆಗಾಣುತ್ತವೆಂದು ಭಾವಿಸಿರುವ ಜನ ಇನ್ನೂ ಇರುವಾಗಲೇ ನೀವು ಇಂಥ ಪುಸ್ತಕವನ್ನು ಪ್ರಕಟಿಸಿರುವುದು ಅಭಿಮಾನದ ಮಾತು" ಎಂಬ ಅಭಿಪ್ರಾಯ ನಿಜವಾಗಿದೆ. ನಾಮವಿಜ್ಞಾನ ಕ್ಷೇತ್ರದ ಗಣ್ಯ ಸಾಧನೆಗಾಗಿ, ತಂಜಾವೂರಿನಲ್ಲಿ ಜರುಗಿದ 'ಆಲ್ ಇಂಡಿಯಾ ಪ್ಲೇಸನೇಮ ಕಾನ್ಫೆರೆನ್ಸ' ಅಧ್ಯಕ್ಷ ಗೌರವ ಡಾ. ಎಂ.ಎಂ.ಕಲಬುರ್ಗಿಯವರಿಗೆ ಸಂದಿತು. ಪೂರಕವಾಗಿ ಈ ವಿಷಯಗಳಿಗೆ ಸಂಬಂಧಪಟ್ಟಂತೆ ಹಲವಾರು ಲೇಖನಗಳನ್ನು ಇವರು ರಚಿಸಿದರು. ಪ್ರಾಚೀನ ಶಾಸ್ತ್ರಕ್ಕೆ ಸಂಬಂಧಪಟ್ಟಂತೆ 'ಶಬ್ದಮಣಿದಪ೯ಣ ಸಂಗ್ರಹ' ಕೃತಿಯನ್ನು ಇಲ್ಲಿ ಹೆಸರಿಸಬಹುದು. ಸೂತ್ರ ಮತ್ತು ವೃತ್ತಿಗೆ ತಕ್ಕಷ್ಟು ಹೊಸಗನ್ನಡದಲ್ಲಿ ಪ್ರಯೋಗಗಳನ್ನು ಆಯ್ದುಕೊಡುವ ಮೂಲಕ ಸೂತ್ರ-ವೃತ್ತಿ-ಪ್ರಯೋಗಗಳಲ್ಲಿ ಸಮನ್ವಯತೆಯನ್ನು ಇಲ್ಲಿ ಸಾಧಿಸಲಾಗಿದೆ.
ಸೂ: ಈ ಕೃತಿಗಳ ಹೆಚ್ಚಿನ ವಿವರಗಳಿಗಾಗಿ ಕೃತಿಗಳ ಹೆಸರಿನಮೇಲೆ ಕ್ಲಿಕ್ಕಿಸಿರಿ.
- ಕನ್ನಡ ಗ್ರಂಥಸಂಪಾದನ ಶಾಸ್ತ್ರ
- ಶಬ್ದಮಣಿದಪ೯ಣ ಸಂಗ್ರಹ
- ಪ್ರತಿಬಿಂಬ
- ಕನ್ನಡ ಸಂಶೋಧನಶಾಸ್ತ್ರ
- ಕನ್ನಡ ನಾಮವಿಜ್ಞಾನ
- ಕನ್ನಡ ಹಸ್ತಪ್ರತಿಶಾಸ್ತ್ರ
- ವಚನ
"ಹಸ್ತಪ್ರತಿಶಾಸ್ತ್ರ (Manuscriptology)ಮತ್ತು ಗ್ರಂಥಸಂಪಾದನ ಶಾಸ್ತ್ರ (Textualcriticism)ಗಳು ಒಂದೇ ಭೂಮಿಕೆಯಲ್ಲಿ ಕವಲೊಡೆಯುವ ಜ್ಞಾನ ಶಾಖೆಗಳು. ಕೆಲವು ಅಂಶಗಳಲ್ಲಿ ಈ ಎರಡೂ ಸಮಾನವಾಗಿವೆ. ಹೀಗಾಗಿ ಇಗಾಗಲೇ ಶಾಸ್ತ್ರರೂಪ ಧರಿಸಿ ನಿಂತಿರುವ ಗ್ರಂಥ ಸಂಪಾದನ ಶಾಸ್ತ್ರದಿಂದ, ಇನ್ನುಮೇಲೆ ರೂಪಗೊಳ್ಳಬೇಕಾಗಿರುವ ಹಸ್ತಪ್ರತಿಶಾಸ್ತ್ರಕ್ಕೆ ಕೆಲಮಟ್ಟಿಗೆ ಸಹಾಯವಾಗಬಹುದಾದರೂ ಅದರ ನೆರವು ದಾಳಿಯಾಗದಂತೆ ನೋಡಿಕೊಳ್ಳುವುದು ಅವಶ್ಯವಿದೆ"