"ಕವಿಗೆ 'ಅಭಿವ್ಯಕ್ತಿ ಸ್ವಾತಂತ್ರ್ಯ' ಆದರೆ 'ನಿನಗೆ ಕೇಡಿಲ್ಲವಾಗಿ ಆನು ವಲಿದಂತೆ ಹಾಡುವೆ' ಎಂಬಂತೆ ಜೀವನದ ಸತ್ಯಗಳಿಗೆ ಕೇಡುಬಗೆಯದೆ ಕವಿಯು ತನ್ನ ಬರವಣಿಗೆಯನ್ನು ಮುಕ್ತರೀತಿಯಲ್ಲಿ ಮುಂದುವರಿಸಬೇಕು. ಒಂದು ಕವನ ಸಂಕಲನದ ಶ್ರೇಯಸ್ಸು ನಿಂತಿರುವುದು ಕವಿ ಏನು ಹೆಳಿದ್ದಾನೆ ? ಹೇಗೆ ಹೇಳಿದ್ದಾನೆ? ಎಂಬುದರ ಮೇಲೆ. "
ಸೃಜನ ಸಾಹಿತ್ಯ:
ಸೃಜನಶೀಲತೆ ಎನ್ನುವುದು ಇಂಗ್ಲೀಷನ Creativity ಶಬ್ದಕ್ಕೆ ಸಂವಾದಿಯಾಗಿ ಬಳಕೆಯಲ್ಲಿರುವ ಕನ್ನಡ ಪದ. ಆದರಿದು ಸಾಹಿತ್ಯಕ್ಷೇತ್ರಕ್ಕೆ ಮಾತ್ರ ಸೀಮಿತವಾದುದಲ್ಲ. ಎಲ್ಲಕಾಲದ, ಎಲ್ಲದೇಶದ ಜೀವಜಗತ್ತಿನ ಭಾವಪ್ರಪಂಚದ ಸಂವೇದನೆಗಳಿಗೆ ಅಭಿವ್ಯಕ್ತಿ ಸಾಧನವಾಗಿ ಇದು ಆವಿರ್ಭವಿಸುತ್ತದೆ. ಭಾಷೆಯೆ ಗೊತ್ತಿರದ ಆದಿಮಕಾಲದಲ್ಲಿ ಕೂಡ ತನ್ನ ಬೇಟೆಯ ಅನುಭವಗಳನ್ನು ಆಂಗಿಕ ಅಭಿನಯ, ಸಂಜ್ಞ್ಯೆ, ಶಿಲಾಬಂಡೆಗಳ ಮೇಲೆ ಚಿತ್ರಬರೆಯುವ ಮೂಲಕ ತನ್ನದೇಆದ ಸೃಜನಶೀಲತೆಯನ್ನು ವ್ಯಕ್ತಪಡಿಸುತ್ತಿದ್ದ. ಹಕ್ಕಿಗಳು ಗೂಡುಕಟ್ಟಿಕೊಳ್ಳುವಲ್ಲಿ ಬಳಸುವ ವಿಭಿನ್ನ ವಿನ್ಯಾಸಗಳೂ ಅವುಗಳ ಸೃಜನಶೀಲತೆಯನ್ನು ಸಾಕ್ಷೀಕರಿಸುತ್ತವೆ. ಇಂಜಿನೀಯರ್ ಕಟ್ಟಡಗಳ ನಕ್ಷೆ ಬರೆಯುವಲ್ಲಿ, ಬಡಿಗ ಕೆತ್ತನೆಯ ಕೆಲಸದಲ್ಲಿ, ಕಂಬಾರ, ಕುಂಬಾರರು ಸಾಧನಗಳಿಗೆ ಆಕಾರ ಕೊಡುವಲ್ಲಿ, ಅಕ್ಕಸಾಲಿಗ ಆಭರಣಗಳನ್ನು ರೂಪಿಸುವಲ್ಲಿ, ಚಿತ್ರಗಾರ ಚಿತ್ರಿಸುವಲ್ಲಿ, ಛಾಯಾಚಿತ್ರಕಾರ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ, ರಂಗ-ಚಲನಚಿತ್ರ ನಿರ್ದೇಶಕರು ದೃಶ್ಯಗಳನ್ನು ಸಂಯೋಜಿಸುವಲ್ಲಿ, ಸಂಗೀತಗಾರರು ರಾಗಾಲಾಪನೆಯಲ್ಲಿ, ಶಿಲ್ಪಿ ಶಿಲೆಗಳನ್ನು ಕೆತ್ತುವಲ್ಲಿ, ನಟರು ನಟಿಸುವಲ್ಲಿ, ನೃತ್ಯಕಲಾವಿದರು ಲಾಸ್ಯದಲ್ಲಿ, ಗೃಹಿಣಿ ಮನೆಗೆಲಸದಲ್ಲಿ ಸೃಜನಶೀಲರಾಗಿದ್ದರೆ ಮಾತ್ರ ಅವರವರ ಕೃತಿಗಳಿಗೆ ಬೆಲೆ. ಅಂತೆಯೆ ಬರಹಗಾರನಿಗೆ ಸೃಜನಶೀಲತೆಯೆನ್ನುವುದು ಅವನ ಬರಹಗಳ ಜೀವಶಕ್ತಿ. ಇದಿಲ್ಲದೆ ಸೃಷ್ಟಿಯಾದ ಬರಹಗಳು ಬದುಕಲಾರವು. ಸಾಹಿತ್ಯ ಸಂದರ್ಭದಲ್ಲಿ ಸೃಜನ, ಸೃಜನೇತರ ಎನ್ನುವ ವಿಭೇದ ಪರಿಕಲ್ಪನೆ ಇದೆಯಾದರೂ ಈಗ ಕಾವ್ಯ, ನಾಟಕ, ಕತೆ, ಕಾದಂಬರಿ ಮುಂತಾದ ಸಾಹಿತ್ಯೇತರ ಪ್ರಕಾರಗಳಿಗೂ ಶೃಜನಶೀಲತೆ ಅವಶ್ಯವೆನ್ನುವುದು ಈಗ ಸಾಬೀತಾಗಿದೆ.
ಸೂ: ಈ ಕೃತಿಗಳ ಹೆಚ್ಚಿನ ವಿವರಗಳಿಗಾಗಿ ಕೃತಿಗಳ ಹೆಸರಿನಮೇಲೆ ಕ್ಲಿಕ್ಕಿಸಿರಿ.
"ಸಾಹಿತ್ಯದಲ್ಲಿ ಸಂವೇದನೆಯ ಮುಂದಿನಹೆಜ್ಜೆ 'ಅಭಿವ್ಯಕ್ತಿ', ಅದರ ಮುಂದಿನ ಹೆಜ್ಜೆ 'ಸಂಹಹನಶೀಲತೆ'. ತಾನು ಅನುಭವಿಸಿದ ಸಂವೇದನೆಗಳನ್ನು ಕವಿ ಪೂರ್ಣ ಪ್ರಮಾಣದಲ್ಲಿ ಅಭಿವ್ಯಕ್ತಿಸಬೇಕು; ಅದು ಪೂರ್ಣಪ್ರಮಾಣದಿಂದ ಜನಸಮೂಹದಲ್ಲಿ ಸಂವಹನಗೊಳ್ಳಬೇಕು."