ಸಾಂಸ್ಥಿಕ ಪ್ರಜ್ಞೆ
ಸಮಿತಿ ಹಾಗೂ ಪ್ರತಿಷ್ಠಾನಗಳು:
"ಕವಿಯಾಗಿ ಹುಟ್ಟುವುದು ಮುಖ್ಯ್ ಕವಿಯಾಗಿ ಬೆಳೆಯುವುದು ಕವಿಗೆ 'ಅಭಿವ್ಯಕ್ತಿ ಸ್ವಾತಂತ್ರ್ಯ' ಅಗತ್ಯ ಆದರೆ 'ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ' ಎಂಬಂತೆ ಜೀವನದ ಸತ್ಯಗಳಿಗೆ ಕೇಡು ಬಗೆಯದೆ ಕವಿಯು ತನ್ನ ಬರವಣಿಗೆಯನ್ನು ಮುಕ್ತರೀತಿಯಲ್ಲಿ ಮುಂದುವರಿಸಬೇಕು. ಒಂದು ಕವನ ಸಂಕಲನದ ಶ್ರೇಯಸ್ಸು ನಿಂತಿರುವುದು ಕವಿ ಏನು ಹೇಳಿದ್ದಾನೆ ? ಹೇಗೆ ಹೇಳಿದ್ದಾನೆ ? ಎಂಬುದರಮೇಲೆ."
ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ, ಧಾರವಾಡ:
ಕನ್ನಡ ನಾಡಿನ ಸಾಂಸ್ಕೃತಿಕ ಆಸ್ತಿಯಾಗಿರುವ ಕವಿ 'ಅಂಬಿಕಾತನಯದತ್ತ'ರ ಹೆಸರಿನಲ್ಲಿ ಕರ್ನಾಟಕ ಸರಕಾರ ' ದ. ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್'ನ್ನು ೧೯೯೩ ರಲ್ಲಿ ಅಸ್ತಿತ್ವಕ್ಕೆ ತಂದಿತು. ಡಾ ಎಂ. ಎಂ. ಕಲಬುರ್ಗಿಯವರು ೨೦೦೬ ರಿಂದ ೨೦೦೯ರ ವರೆಗೆ ಇದರ ಅಧ್ಯಕ್ಷರಾಗಿದ್ದು, ಇದನ್ನು ರಾಜ್ಯ - ರಾಷ್ಟ್ರವ್ಯಾಪಿಯಾಗಿ ಬೆಳೆಸಿದರು. ಈ ಟ್ರಸ್ಟ್ ವತಿಯಿಂದ ಅವರು ವರ್ಷದುದ್ದಕ್ಕೂ ಸಾಹಿತ್ಯಿಕ - ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗಿಸಿ ಬೇಂದ್ರೆ ಸಾಹಿತ್ಯದ ಸರ್ವಮುಖಿ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು . ಇವರ ಆಡಳಿತಾವಧಿಯಲ್ಲಿ ಪ್ರತಿವರ್ಷ 'ಬೆಳದಿಂಗಳ ನೋಡ' ಹೆಸರಿನ ಬೇಂದ್ರೆ ಗೀತಗಾಯನದ ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸುತ್ತಿದ್ದರು. 'ಕುಣಿಯೋಣ ಬಾರ' ಹೆಸರಿನ ಬೇಂದ್ರೆ ಗೀತನೃತ್ಯ ತಂಡವನ್ನು ಅಸ್ತಿತ್ವಕ್ಕೆ ತಂದು, ಇದು ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶನಗೊಳ್ಳುವಂತೆ ನೋಡಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳಿಗೆ ಬೇಂದ್ರೆ ಕಾರ್ಯಕ್ರಮಗಳನ್ನು ಜರುಗಿಸುವದಕ್ಕಾಗಿ ಪ್ರತಿವರ್ಷ ಸಹಾಯಧನ ನೀಡುತ್ತಬಂದರು. ಇದಲ್ಲದೆ ಇವರು ಪ್ರಸಾರಂಗವನ್ನು ಸ್ಥಾಪಿಸಿ ಅದರ ಮೂಲಕ ಪುಸ್ತಕಗಳನ್ನು ಪ್ರಕಟಿಸಿದರು. ಈ ಟ್ರಸ್ಟ್ ನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಲಗ್ನಗೂಳಿಸಿ, ವಿದ್ಯಾರ್ಥಿಗಳಿಗೆ ಪಿಎಚ್. ಡಿ. ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಟ್ಟರು. ಪ್ರತಿವರ್ಷ ಬೇಂದ್ರೆ ಅವರ ಜನ್ಮ ದಿನದಂದು ೫೦ ಸಾವಿರ ಮೌಲ್ಯದ 'ಅಂಬಿಕಾತನಯದತ್ತ ಪ್ರಶಸ್ತಿ' ಯನ್ನು ಒಂದುವರ್ಷ ಸಾಹಿತಿಗೆ, ಇನ್ನೂಂದುವರ್ಷ ಕನ್ನಡ ಸಂಘಕ್ಕೆ ನೀಡುವ ಪರಿಪಾಠ ಹಾಕಿದರು. ಜೊತೆಗೆ ೮ ಸಾಹಿತ್ಯ ಪ್ರಕಾರಗಳ ಗ್ರಂಥಗಳಿಗೆ ತಲಾ ೫ ಸಾವಿರದಂತೆ 'ಬೇಂದ್ರೆ ಗ್ರಂಥಬಹುಮಾನ' ವನ್ನು ಪ್ರತಿ ವರ್ಷ ಕವಿಯ ಪುಣ್ಯತಿಥಿ ದಿವಸ ಕೊಡುವ ಏರ್ಪಾಟುಮಾಡಿದರು. ಇವರ ಕಾಲಾವಧಿಯಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸಹಾಯದಿಂದ ಸರ್ವಸಮೃದ್ಧವೂ, ಕ್ರಿಯಾಶೀಲವೂ ಆಗಿರುವ 'ಬೇಂದ್ರೆ ಭವನ'ದ ಎದುರಿನ ಜಾಗದಲ್ಲಿ 'ಬಾರೋ ಸಾಧನಕೇರಿಗೆ' ಹೆಸರಿನ ಪ್ರವಾಸಿಕೇಂದ್ರವನ್ನು ನಿರ್ಮಿಸುವಂತೆ ನೊಡಿಕೊಂಡರು. ಇಲ್ಲಿ ಕೆರೆ ದೋಣಿವಿಹಾರ, ಬಯಲು ರಂಗಮಂದಿರ, ಉದ್ಯಾನ, ಕಾರಂಜಿ, ವಾಯವಿಹಾರದ ಕಾಲುದಾರಿಗಳು ಸುಸಜ್ಜಿತವಾಗಿ ವಿನ್ಯಾಸಗೊಳ್ಳುವಂತೆ ಆಸಕ್ತಿವಹಿಸಿದರು. ಒಟ್ಟಾರೆ ಇವರ ಈ ಕಾರ್ಯಗಳು ಸಾಂಸ್ಕೃತಿಕ ರಾಜಧಾನಿ ಧಾರವಾಡಕ್ಕೆ ಒಂದು ವಿಶೇಷ ಮೆರುಗನ್ನು ನೀಡಿವೆ .
ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಬೆಳಗಾವಿ:
ಪ್ರಗತಿಪರ ವಿಚಾರಗಳ ಚಿಂತಕ ಡಾ. ಬಸವರಾಜ ಕಟ್ಟೀಮನಿಯವರ ಸ್ಮರಣೆಗಾಗಿ ಬೆಳಗಾವಿಯಲ್ಲಿ ಪ್ರತಿಷ್ಠಾನ ಸ್ಥಾಪಿಸಲು ಕರ್ನಾಟಕ ಸರಕಾರಕ್ಕೆ ಒತ್ತಾಯಿಸಿ ಅದು ಅಸ್ತಿತ್ವಕ್ಕೆ ಬರುವಂತೆ ಮಾಡಿದವರು ಡಾ. ಕಲಬುರ್ಗಿಯವರು. ಇದರ ಪ್ರಥಮ ಅಧ್ಯಕ್ಷರಾಗಿ ಮೂರು ವರ್ಷಗಳ ತಮ್ಮ ಅಧಿಕಾರದ ಅವಧಿಯಲ್ಲಿ ಅದನ್ನು ಒಂದು ಪ್ರಾತಿನಿಧಿಕ ಸಂಸ್ಥೆಯನ್ನಾಗಿ ರೂಪಿಸಿದರು. ಕಟ್ಟೀಮನಿಯವರ ಸಮಗ್ರ ಸಾಹಿತ್ಯವನ್ನು ೧೫ ಸಂಪುಟಗಳಲ್ಲಿ ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದು ಒಂದು ಇತಿಹಾಸ. ಕಟ್ಟೀಮನಿಯವರ ಬದುಕು - ಬರಹಗಳನ್ನು ಪ್ರಚಾರಗೊಳಿಸಬೇಕೆಂಬ ಉದ್ದೇಶದಿಂದ ಟ್ರಷ್ಟು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳಿಗೆ ತಲಾ 5 ಸಾವಿರ ರೂಪಾಯಿ ಅನುದಾನ ನೀಡಿ ಪ್ರತಿವರ್ಷ ೧೫ ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯಕ್ರಮ ಏರ್ಪಡುವಂತೆ ನೋಡಿಕೊಂಡರು. ಇದಲ್ಲದೆ ಕಟ್ಟೀಮನಿಯವರ ವಸ್ತುಸಂಗ್ರಹಾಲಯ, ಗ್ರಂಥಾಲಯ, ಸಭಾಭವನವನ್ನು ಅಸ್ತಿತ್ವಕ್ಕೆ ತಂದು ಅವುಗಳನ್ನು ಅಚ್ಚುಕಟ್ಟಾಗಿ ರೂಪಿಸಿದವರು ಡಾ. ಕಲಬುರ್ಗಿಯವರು. ಕಟ್ಟೀಮನಿಯವರ ಜನ್ಮಸ್ಥಳ (ಗೋಕಾಕ ತಾಲೂಕಿನ) ಮಲಾಮರಡಿಯಲ್ಲಿ ಒಂದು ಸಭಾಭವನ, ಊರಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಮತ್ತು ಅಲ್ಲಿ ಪ್ರತಿವರ್ಷ ಕಟ್ಟೀಮನಿಯವರ ಪುಣ್ಯತಿಥಿಯನ್ನು ಜರುಗಿಸುವುದು ಇವೆಲ್ಲವನ್ನು ಕಲಬುರ್ಗಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಾರಗೊಳಿಸಿದರು. ಪ್ರತಿವರ್ಷ ಶ್ರೀ ಕಟ್ಟೀಮನಿಯವರ ಜನ್ಮದಿನದಂದು 'ಬಸವರಾಜ ಕಟ್ಟೀಮನಿ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ' ಯನ್ನು ತಲಾ 50 ಸಾವಿರ ರೂಪಾಯಿ ಗಳಂತೆ ಇಬ್ಬರಿಗೆ ನೀಡುವ ಏರ್ಪಾಟು ಮಾಡಿದರು. ಅಂತೆಯೇ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಯುವ ಸಾಹಿತ್ಯ ಪುರಸ್ಕಾರ'ವನ್ನು 10 ಯುವ ಸಾಹಿತಿಗಳ ಉತ್ತಮ ಪುಸ್ತಕಗಳಿಗೆ ತಲಾ ಹತ್ತು ಸಾವಿರ ರೂಪಾಯಿ ಬಹುಮಾನ ನೀಡಲು ಯೋಜಿಸಿದರು. ಕಲಬುರ್ಗಿಯವರು ಯಾವುದೇ ಸಂಸ್ಥೆಯ ಅಧಿಕಾರವನ್ನು ವಹಿಸಿಕೊಳ್ಳಲಿ ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಿದ್ದರು. ದುಡಿಮೆ-ದೂರದೃಷ್ಟಿ, ಪ್ರಾಮಾಣಿಕತೆಗಳಿಂದ ಅದನ್ನು ಬೆಳೆಸಿ, ತಮ್ಮ ಪ್ರತಿಭೆ, ಸೃಜನಶೀಲತೆ ಮತ್ತು ಕ್ರಿಯಾಯೋಜನೆಗಳಿಂದ ಅದಕ್ಕೊಂದು ನೂತನ ಸ್ವರೂಪ ಕೊಟ್ಟು , ಆ ಮೂಲಕ ಅದನ್ನು ಒಂದು ಮಾದರಿ ಸಂಸ್ಥೆಯಾಗಿ ರೂಪಿಸುತ್ತಿದ್ದರು.
ಬಸವ ಸಮಿತಿ, ಬೆಂಗಳೂರು:
ಬೆಂಗಳೂರಿನ 'ಬಸವ ಸಮಿತಿ'ಯನ್ನು ಬಹುಮುಖಿಯಾಗಿ, ಬಹುಭಾಷಿಯಾಗಿ ಬೆಳೆಸುತ್ತಲಿರುವ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿಯವರ ಹಲವು ಕನಸು, ಕಾರ್ಯಗಳಲ್ಲಿ " ವಚನ ಸಾಹಿತ್ಯದ ಬಹುಭಾಷಾ ಯೋಜನೆ "ಯೂ ಒಂದು. ಶರಣ ಸಿದ್ಧಾಂತವನ್ನು ರಾಷ್ಟ್ರೀಯ - ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕೆಂಬ ಹಂಬಲದಿಂದ ಕರ್ನಾಟಕ ಸರಕಾರದ ಅನುದಾನದಲ್ಲಿ ಅಸ್ತಿತ್ವಕ್ಕೆ ಬಂದ ಈ ಯೋಜನೆಯ ನಿರ್ದೇಶಕರು ಡಾ. ಎಂ. ಎಂ. ಕಲಬುರ್ಗಿಯವರು. ಇವರ ಪ್ರಧಾನ ಸಂಪಾದಕತ್ವದಲ್ಲಿ ಕರ್ನಾಟಕ ಸರಕಾರ ಪ್ರಕಟಿಸಿರುವ ' ಸಮಗ್ರ ವಚನ ಸಂಪುಟಗಳ' ಮೂಲಕ ಎಲ್ಲ ಶರಣರ ಎಲ್ಲ ವಚನಗಳು ಬೆಳಕಿಗೆ ಬಂದಿದ್ದು ಇವುಗಳಿಂದ ೨೫00 ವಚನಗಳನ್ನು ಆಯ್ದು, ಅವುಗಳನ್ನು ಭಾರತ ಸರಕಾರ ಮನ್ನಿಸಿರುವ "೨೩ ಭಾಷೆಗಳಲ್ಲಿ ವಚನ" ಎಂಬ ಶೀರ್ಷಿಕೆಯ ಅಡಿಯಲ್ಲಿ ಅನುವಾದಗೊಂಡುದು ಒಂದು ಚಾರಿತ್ರಿಕ ಸಾಧನೆಯೆಂದೇ ಹೇಳಬೇಕು. ಈ ಮೇರೆಗೆ ಬಸವಯುಗ, ಬಸವೋತ್ತರ ಯುಗದ ೧೨೯ ಶರಣರ, ೩೧ ಶರಣೆಯರ, ೧೩ ಅಜ್ಞಾತ ಶರಣರ - ಹೀಗೆ ೧೭೩ ಶರಣ ಮತ್ತು ಶರಣೆಯರ ವಚನಗಳು ಪ್ರಕಟಗೊಂಡಿವೆ. ಪ್ರತಿಯೊಂದು ಗ್ರಂಥದ ಆರಂಭದಲ್ಲಿ ಅಭ್ಯಾಸಪೂರ್ಣ ಪ್ರಸ್ತಾವನೆ, ಅಂತ್ಯದಲ್ಲಿ ಎಲ್ಲ ವಚನಕಾರರ ಚರಿತ್ರೆ, ವಚನಗಳ ಅಕಾರಾದಿ, ಕಠಿಣ ಪದಕೋಶ, ಪಾರಿಭಾಷಿಕ ಪದಕೋಶ, ಅಂಕಿತಗಳ ಅಕಾರಾದಿ ಇತ್ಯಾದಿ ಸಂಗತಿಗಳನ್ನು ಒದಗಿಸಲಾಗಿದೆ. ಡಾ. ಎಂ. ಎಂ. ಕಲಬುರ್ಗಿ ಅವರ ಸಂಪಾದಕತ್ವದಲ್ಲಿ ಶರಣರ ೨೫00 ವಚನಗಳು ಹಲವು ಭಾಷೆಗಳಿಗೆ ಅನುವಾದಗೊಂಡು 'ವಚನ' ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್,ಮರಾಠಿ, ತೆಲುಗು, ತಮಿಳು, ಪಂಜಾಬಿ, ಬಂಗಾಲಿ, ಉರ್ದು, ಸಂಸ್ಕೃತ, ರಾಜಸ್ತಾನಿ, ಆಸಾಮಿ, ತುಳು, ಜೋಧಪುರಿ, ಸಿಂಧಿ, ಗುಜರಾತಿ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ , ಕೊಡವ, ಓರಿಯಾ ಮತ್ತು ಸಂತಾಲಿ ೨೩ ಭಾಷೆಗಳಲ್ಲಿ ಲಭಿಸುವಂತಾಗಿದೆ. ಮೊದಲಿನ ೧0 ಸಂಪುಟಗಳು ಡಾ. ಬಿ. ಡಿ. ಜತ್ತಿಯವರ ಜನ್ಮಶತಮಾನೋತ್ಸವ ವರ್ಷದಲ್ಲಿ ಬಿಡುಗಡೆಯಾದರೆ. ಉಳಿದ ೧೩ ಸಂಪುಟಗಳು ಬಸವ ಸಮಿತಿಯ ಸುವರ್ಣಮಹೋತ್ಸವ ವರ್ಷದಲ್ಲಿ ಬಿಡುಗಡೆಗೊಳ್ಳುತ್ತಿರುವುದು ಸಂತಸದ ವಿಚಾರ.
"ಶರಣರು ಕಟ್ಟಬಯಸಿದುದ ಸ್ಥಾವರ ಸಮಾಜಕ್ಕೆ ಬದಲು ಜಂಗಮ ಸಮಾಜವನ್ನು ಕಟ್ಟಿಕೊಂಡದ್ದು ಸ್ಥಾವರ ವ್ಯಕ್ತಿತ್ವಕ್ಕೆ ಬದಲು ಜಂಗಮ ವ್ಯಕ್ತಿತ್ವವನ್ನು. ಹೀಗಾಗಿ ಇಂಥ ಸಮಾಜದ, ಇಂಥ ವ್ಯಕ್ತಿತ್ವದ ಭಾಷಿಕ ಅಭಿವ್ಯಕ್ತಿಯಾದ ವಚನ ಸಾಹಿತ್ಯ ವಸ್ತು (Cuntent), ರೂಪ,(Form)ಗಳಲ್ಲಿಯೂ ಜಂಗಮತ್ವವನ್ನು ಆಹ್ವಾನಿಸಿಕೊಳ್ಳುತ್ತ ಮುಕ್ತಛಂಧ, ಸರಳ ರಚನೆ ಜನಪದ ಭಾಷೆ-ಈ ಲಕ್ಷಣಗಳನ್ನು ಕಟ್ಟಿಕೊಂಡೇ ಅಣ್ಣು ತೆರೆಯಿತು." ..."ಶೃಜನದಲ್ಲಿ ಮುತ್ತಾಗಬಲ್ಲ, ಸಂಯೋಜನೆಯಲ್ಲಿ ಮುತ್ತಿನಹಾರವಾಗಬಲ್ಲ ಉಭಯ ಗುಣ ವಚನದ ಮುಖ್ಯ ಲಕ್ಷಣವಾಗಿದೆ"..."ವಚನಗಳ ಸಂಯೋಜನೆ ಸಂಗ್ರಹದಿಂದ ಸಂಕಲನದತ್ತ, ಸಂಕಲನದಿಂದ ಸಂಪಾದನೆಯತ್ತ ಮೂಂದುವರೆದಿದೆ. ಸಂಗ್ರಹಕ್ಕೆ ಪ್ರಯತ್ನ ಸಾಕು, ಸಂಕಲನಕ್ಕೆ ಪಾಂಡಿತ್ಯವೂ ಬೇಕು. ಸಂಪಾದನೆಗೆ ಹೆಚ್ಚಿನದಾಗಿ ಪ್ರತಿಭೆಯೂ ಬೇಕು."