ಕಿತ್ತೂರು ಸಂಸ್ಠಾನ ಸಾಹಿತ್ಯ-೧

ಗ್ರಂಥಸಂಪಾದನೆ :

ಕಿತ್ತೂರು ಸಂಸ್ಠಾನ ಸಾಹಿತ್ಯ -ಭಾಗ ೧:

kitturu samstana sahity1

ಶಿಷ್ಟ ಹಾಗೂ ಜಾನಪದ ಕವಿಗಳು ಕಿತ್ತೂರು ಸಂಸ್ಥಾನದ ಚರಿತ್ರೆಯನ್ನು ದಾಖಲೆ, ಐತಿಹ್ಯ, ಕಲ್ಪನೆಗಳ ಬಲದಿಂದ ಅಲ್ಲಿಷ್ಟು ಇಲ್ಲಿಷ್ಟು ಪ್ರಕಟಿಸಿದ್ದು, ಚದುರಿದಂತಿದ್ದ ಈ ಸಾಹಿತ್ಯವು ಜನರ ಕಣ್ಣಿಗೆ ಬಿದ್ದುದು ತೀರ ಕಡಿಮೆ. ಇದನ್ನು ಗಮನಿಸಿದ್ದ ಡಾ. ಕಲಬುರ್ಗಿಯವರು ಹೀಗೆ ಅಜ್ಞಾತವಾಗಿ ಉಳಿದಿದ್ದ ಪ್ರಕಟಿತ ಸಾಹಿತ್ಯದ ಜೊತೆಗೆ ಇನ್ನೂ ಅಪ್ರಕಟಿತವಾಗಿದ್ದ ಸಾಹಿತ್ಯವನ್ನೂ ಸೇರಿಸಿ 'ಕಿತ್ತೂರು ಸಂಸ್ಥಾನ ಸಾಹಿತ್ಯ'ವನ್ನು ತುಂಬಾ ವ್ಯವಸ್ಥಿತವಾಗಿ ಮೂರು ಭಾಗಗಳಲ್ಲಿ ವಿಂಗಡಿಸಿ (ಭಾಗ ೧) ಕೃತಿಗಳಲ್ಲಿ ಪ್ರಕಟಿಸಿ ಕಿತ್ತೂರು ಸಂಸ್ಥಾನ ಚರಿತ್ರೆಯ ಮೇಲೆ ಇನ್ನಿಷ್ಟು ಬೆಳಕು ಚೆಲ್ಲಲು ಶ್ರಮಿಸಿದ್ದಾರೆ. ಮೊದಲಿನ ಎರಡು ಕೃತಿಗಳನ್ನು ಇತರರೊಂದಿಗೆ ಸಂಪಾದಿಸಿದ ಕಲಬುರ್ಗಿಯವರು, ಮೂರನೆಯದನ್ನು ತಾವೊಬ್ಬರೇ ಸಂಪಾದಿಸಿದ್ದಾರೆ. ಇವೆಲ್ಲಕ್ಕೂ ಅತ್ಯಂತ ಮೌಲಿಕವಾದ 'ಪ್ರಸ್ತಾವನೆ'ಬರೆದಿದ್ದಾರೆ. ಸಂಸ್ಥಾನದ ಪ್ರಮುಖ ರಾಜ-ರಾಣಿಯರ ಚರಿತ್ರೆ, ಯುದ್ಧಸನ್ನಿವೇಶ, ಪದಸಾಹಿತ್ಯ, ಪುರಾಣ, ಉತ್ಸವ, ಸರ್ ವಾಲ್ಟರ್ ಎಲಿಯಟ್ ರಚಿಸಿದ 'ಮಿಸಲೆನಿಯಸ್ ಆಫ್ ಸರ್ ವಾಲ್ಟರ್ ಎಲಿಯಟ್' ಕೃತಿಯ ಆಯ್ದ ಇಂಗ್ಲೀಷ ಲೇಖನಗಳ ಕನ್ನಡ ಅನುವಾದ ಮೊದಲಾದ ಮಹತ್ವದ ಸಂಗತಿಗಳನ್ನು ಒಳಗೊಂಡಿರುವ ಪ್ರಸ್ತುತ ಕೃತಿಗಳು ಕಿತ್ತೂರು ನಾಡಿನ ಸಾಹಿತ್ಯ-ಸಂಸ್ಕೃತಿಯ ಅಭ್ಯಾಸಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸುವಂತಿವೆ. (ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆಃ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಗದಗ-೧೯೯೯,೨೦೦೫,೨೦೧೫)

ವಚನ :

vachanaಡಾ.ಎಂ.ಎಂ.ಕಲಬುರ್ಗಿಯವರ ಪ್ರಯತ್ನ ಮತ್ತು ಪ್ರಧಾನ ಸಂಪಾದಕತ್ವದ ಪರಿಶ್ರಮದಿಂದಾಗಿ 'ಸಮಗ್ರ ವಚನ ಸಾಹಿತ್ಯ ಪ್ರಕಟಣ' ಯೋಜನೆ ಸಿದ್ಧಗೊಂಡು ಅದು ಕರ್ನಾಟಕ ಸರಕಾರದ ಆರ್ಥಿಕ ನೆರವಿನೊಂದಿಗೆ ಕಾರ್ಯಗತಗೊಂಡಿತು. ಇದರಿಂದಾಗಿ "ಎಲ್ಲ ಶರಣರ ಎಲ್ಲ ವಚನಗಳು" ಓದುಗರ ಕೈಸೇರಲು ಸಾಧ್ಯವಾಯಿತು. ಹೀಗೆ ಸಮಗ್ರೀಕೃತಗೊಂಡ ವಚನಸಾಹಿತ್ಯವನ್ನು  "ಬೈಬಲ್ ಮೊದಲಾದವುಗಳಂತೆ.... ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಬೇಕೆಂಬ ಧೃಡನಿಶ್ಚಯ ಮಾಡಿದ ಡಾ. ಕಲಬುರ್ಗಿಯವರು, ಆ ತಮ್ಮ ಯೋಜನೆಯನ್ನು ಬೆಂಗಳೂರಿನ ಬಸವ ಸಮೀತಿಗೆ ಮನವರಿಕೆ ಮಾಡಿ ಕೊಟ್ಟರು  'ಯೋಜನೆ'ಯನ್ನು  'ಸಮೀತಿ' ಒಪ್ಪಿಕೊಂಡ ಹಿನ್ನೆಲೆಯಲ್ಲಿ  ವಚನ ಸಾಹಿತ್ಯ: 'ಬಹುಭಾಷಾ ಅನುವಾದ ಯೋಜನೆ' ರೂಪಗೊಂಡಿತು."ಈ ಯೋಜನೆಗೆ 'ಮೂಲಪಠ್ಯ'ದ ಅಗತ್ಯವಿತ್ತು. ಈ ಸನ್ನಿವೇಶದಲ್ಲಿ ಈ "ವಚನ" ಸಂಪುಟವನ್ನು ಡಾ. ಕಲಬುರ್ಗಿಯವರು ಸಂಪಾದಿಸಿದ್ದಾರೆ. "೧೨ನೆಯ ಶತಮಾನದಿಂದ ೧೮ ಶತಮಾನದವರೆಗೆ ಸೃಷ್ಟಿಯಾಗುತ್ತ ಬಂದ ಒಟ್ಟು ೨೧ ಸಾವಿರ ವಚನ ನಿಧಿಯಿಂದ "ವಿಶ್ವಮಾನ್ಯ ವಚನಗಳನ್ನು" ಆಯ್ದುಕೊಳ್ಳುವುದೇ ಒಂದು ಸವಾಲಿನ ಕೆಲಸ. ಈ ಸವಾಲನ್ನು ಎದುರಿಸಬೇಕಾದಾಗ ಸಂಪಾದಕರು ಮೊದಲು ೩೦೦೦ ಸಾವಿರ ವಚನಗಳನ್ನು ಆಯ್ಕೆ ಮಾಡಿಕೊಂಡರೂ ತದನಂತರ "ವಿಷಯದ ಅಸ್ಪಷ್ಟತೆ ಮತ್ತು ಅನುವಾದಕ್ಕೆ ಜಟಿಲವೆನಿಸುವ ವಚನ -ವಚನಕಾರರನ್ನು ಕೈಬಿಟ್ಟು ೧೨೯ ಜನ ಶರಣರ, ೩೧ ಜನ ಶರಣೆಯರ, ೧೩ ಜನ ಅಜ್ಞಾತ ಶರಣರ- ಹೀಗೆ ಒಟ್ಟು ೧೭೩ ಜನ ವಚನಕಾರರ  ೨೫೦೦ ವಚನಗಳನ್ನು ಆಯ್ದುಕೊಂಡಿರುವುದಾಗಿ ಅವರು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ "ಒಂದಿಷ್ಟು ಲಿಂಗಾಯತ ಸಿದ್ಧಾಂತಮುಖಿ ವಚಗಳೊಂದಿಗೆ.... ಲೋಕನೀತಿಮುಖಿ, ಸಮಸಮಾಜಮುಖಿ, ಸಮೃದ್ಧಸಮಾಜಮುಖಿ ವಚನಗಳನ್ನು ಆಯ್ದುಕೊಡಿದ್ದು, ಅವೆಲ್ಲ.... ಸಾಹಿತ್ಯಮುಖಿಯಾಗಿರಬೆಕೆಂಬ ಮಾನದಂಡವನ್ನು ಇಟ್ಟುಕೊಂಡಿದ್ದೇನೆ." ಎಂದು (ಮಾಣಿಕ್ಯದೀಪ್ತಿ) ಹೇಳಿದ್ದಾರೆ. ಬಸವಯುಗ, ಬಸವೋತ್ತರ ಯುಗ ಎನ್ನುವ ಎರೆಡು ಭಾಗಗಳಲ್ಲಿ ಇಲ್ಲಿಯ ವಚನಗಳನ್ನು ಸಂಪಾದಿಸಲಾಗಿದೆ. (ಪ್ರ. ಬಸವ ಸಮಿತಿ, ಬೆಂಗಳೂರು-೨೦೧೨).

ಬಸವಸ್ತೋತ್ರದ  ವಚನಗಳು:

basava stotra vachanagalu

ಡಾ.ಎಂ.ಎಸ್. ಸುಂಕಾಪುರ ಅವರ ಪ್ರಧಾನ ಸಂಪಾದಕತ್ವ ಹಾಗೂ ಡಾ.ಎಂ.ಎಂ.ಕಲಬುರ್ಗಿಯವರ ಸಂಪಾದಕತ್ವದಲ್ಲಿ ಈ ಕೃತಿ ಪ್ರಕಟವಾಗಿದೆ. ಸಂಪಾದಕರು(ಪ್ರಸ್ತಾವನೆ XIX)ವಿವರಿಸುವಂತೆ "ವೀರಶೈವ ನಿರ್ಣಯ ಪರಮಾವತಾರ ಎನಿಸಿದ ಬಸವಣ್ಣನವರು ವೀರಶೈವದ ಉಸಿರು...ಈತನ ನಾಮ ವೀರಶೈವರಿಗೆ ಮಂತ್ರಸ್ವರೂಪ ...ಹೀಗೆ ತಮ್ಮ ಅಂತರಂಗ ಬಹಿರಂಗಗಳಲ್ಲಿ ತುಂಬಿ ತುಳುಕುತ್ತಿರುವ ಈ ವೀಭೂತಿ ವ್ಯಕ್ತಿತ್ವವನ್ನು ಕಂಡು ಮಂತ್ರಮುಗ್ಧರಾದ ಶಿವಶರಣರು, ಶಿವಕವಿಗಳು ಮನದಣಿ ಹೊಗಳಿದ್ದಾರೆ. ಯಾವ ಶರಣನ ವಿಷಯವಾಗಿಯೂ ಇಲ್ಲದಷ್ಟು ಸ್ತುತಿರೂಪದ ಅನೇಕ ವಚನಗಳು ಚರಿತ್ರೆ, ಪುರಾಣ ರೂಪದ ಅನೇಕ ಕಾವ್ಯಗಳೂ ಬಸವಣ್ಣನವರ ಬಗೆಗೆ ಕನ್ನಡದಲ್ಲಿ ಕಣ್ಣು ತೆರೆದಿವೆ...". ಇದನ್ನು ಶರಣಸಾಹಿತ್ಯ ಅಭ್ಯಾಸಿಗಳೂ ತಿಳಿಯಬೇಕೆಂಬ ಅಭಿಲಾಷೆಯಿಂದ  ಸಂಪಾದಕರು ಪ್ರಸ್ತುತ 'ಬಸವಸ್ತೋತ್ರದ ವಚನ'ಗಳನ್ನು ಸಂಪಾದಿಸಿದ್ದಾರೆ. ಪ್ರಭುದೇವ ಮೊದಲುಮಾಡಿ ಪ್ರತಿಯೊಬ್ಬ ಶರಣನು ಬಸವಣ್ಣನವರನ್ನು ಕುರಿತು ವ್ಯಕ್ತಪಡಿಸಿದ ವಿಭಿನ್ನ ಭಾವದ ಶಬ್ದಚಿತ್ರಗಳು ಈ ಕೃತಿಯಲ್ಲಿ ಅರಳಿ ನಿಂತಿವೆ. ಚೆನ್ನಂಜೇದೇವರು ಮತ್ತು ಜೋಳಬಸವರಾಜದೇವರು ಸಂಪಾದಿಸಿದ್ದ (೧೪೨+೧೨೪-ಪ್ರಕ್ಷಿಪ್ತ ೧೮)=೨೪೮ ವಚನಗಳು ಪರಿಷ್ಕರಣಗೊಂಡು ಇಲ್ಲಿ ಮರುಸಂಪಾದನೆಗೊಂಡಿವೆ.(ಪ್ರ. ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೧೯೭೬).