ದಾಖಲು ಸಾಹಿತ್ಯ:
'Record'ಎನ್ನುವ ಇಂಗ್ಲೀಷ ಶಬ್ದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ 'ದಾಖಲೆ' ಶಬ್ದವು ಬಳಕೆಯಲ್ಲಿದೆ. ದಾಖಲೆ ಮಳೆ, ದಾಖಲೆ ಸೃಷ್ಟಿ, ದಾಖಲೆಮುರಿ, ದಾಖಲೆಗಳ ಕೊಠಡಿ, ಪ್ರಕರಣ ದಾಖಲಿಸು- ಹೀಗೆ ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ಈ ಶಬ್ದ ಉಪಯೋಗಿಸಲ್ಪಡುತ್ತದೆ. ಗ್ರಾಮಲೆಕ್ಕಾಧಿಕಾರಿ ಮೊದಲುಗೊಂಡು ಪ್ರಪಂಚದಾದ್ಯಂತ ಎಲ್ಲ ದೇಶ-ಕಾಲಗಳ ಪ್ರಜ್ಞಾವಂತ ಸಮಾಜ ವಿವಿಧ ಹಂತಗಳಲ್ಲಿ ದಾಖಲೆಗಳನ್ನಿಡುವ, ಸಂಗ್ರಹಿಸುವ, ಸಂರಕ್ಷಿಸುವ ಕಾರ್ಯದಲ್ಲಿ ಆಸಕ್ತಿ ತೋರುತ್ತ ಬಂದಿವೆ. ಇವುಗಳಲ್ಲಿ ಸರಕಾರಿ, ಅರೆಸರಕಾರಿ, ಖಾಸಗಿ, ವೈಯಕ್ತಿಕ ದಾಖಲೆಗಳೆಂದು ವಿಭೇದಗಳನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಇವುಗಳನ್ನು ಸ್ಥೂಲವಾಗಿ ಸಾಹಿತ್ಯ, ಸಾಹಿತ್ಯೇತರ ಎಂದು ಅಭ್ಯಸಿಸಬಹುದಾಗಿದೆ. ಪ್ರಾಚೀನ ಕೃತಿಗಳ ಪ್ರಕಟನಕಾರ್ಯ ನಮ್ಮ ನಾಡಿನಲ್ಲಿ ಸರಕಾರ ಮತ್ತು ಸಾರ್ವಜನಿಕ ಸಂಸ್ಥೆಗಳ ಮೂಲಕ ಕೈಗೂಡುತ್ತ ಬಂದಿದೆ. ೧೮೫೮ರಷ್ಟು ಹಿಂದೆಯೇ ಮದ್ರಾಸ ಸರಕಾರ ಪ್ರಾಚ್ಯಸಂಶೋಧನಾಲಯವನ್ನು ಅಸ್ತಿತ್ವಕ್ಕೆ ತಂದಿತು. ಇಂಥ ಇನ್ನೊಂದು ಸಂಸ್ಥೆ ೧೮೯೪ರಷ್ಟು ಹಿಂದೆ ಮೈಸೂರಿನಲ್ಲಿ ತಲೆಯೆತ್ತಿತು. ಧಾರವಾಡದಲ್ಲಿ ಕನ್ನಡ ಸಂಶೋಧನ ಸಂಸ್ಥೆ ೧೯೩೯ರಲ್ಲಿ ಸ್ಥಾಪನೆಗೊಂಡಿತು. ಬಳಿಕ ಮೈಸೂರು, ಕರ್ನಾಟಕ ಮೊದಲಾದ ವಿಶ್ವವಿದ್ಯಾಲಯಗಳು ಹಸ್ತಪ್ರತಿ ವಿಭಾಗ ಆರಂಭಿಸಿದವು. ಕನ್ನಡ ಸಾಹಿತ್ಯ ಪರಿಷತ್ತು ಈ ದಿಸೆಯಲ್ಲಿ ಒಂದಿಷ್ಟು ಕೆಲಸ ಮಾಡಿತು. ಜೈನ, ಲಿಂಗಾಯತ ಮಠಗಳು ಮತ್ತು ಸಾಮಾಜಿಕ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಿದವು. ಈ ಎಲ್ಲ ಸಂಸ್ಥೆಗಳು ಸಂಸ್ಕೃತಿಯ ರಕ್ಷಣೆ ತಮ್ಮ ಕರ್ತವ್ಯವೆಂಬ ಭಾವನೆಯಿಂದ ಅನೇಕಾನೇಕ ಪ್ರಾಚೀನ ಕೃತಿಗಳನ್ನು ಪ್ರಕಟಿಸಿದವು. ಹೀಗಿದ್ದೂ ಈ ಕ್ಷೇತ್ರದಲ್ಲಿ ಪೂರೈಸಬೇಕಾದ ಕೆಲಸ ಇನ್ನೂ ಬಹಳ ಉಳಿದುಕೊಂಡಿದೆ. ಇದನ್ನು ಮನಗಂಡ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ಈ ಯೋಜನೆಯನ್ನು ಅಸ್ತಿತ್ವಕ್ಕೆ ತಂದಿತು.
ಕರ್ನಾಟಕದ ಕೈಫಿಯತ್ತುಗಳು:
ಈ ಗ್ರಂಥದ ಸಂಪಾದಕರು ಡಾ. ಎಂ.ಎಂ.ಕಲಬುರ್ಗಿಯವರು. ಈ ಕೃತಿಗೆ ಬರೆದ ವಿಸ್ತ್ರುತವಾದ 'ಪ್ರಸ್ತಾವನೆ'ಯಲ್ಲಿ ಅವರು 'ಕೈಫಿಯತ್ತು'ಗಳ ಇತಿಹಾಸವನ್ನೇ ತೆರೆದಿಟ್ಟಿದ್ದಾರೆ. ಇಲ್ಲಿಯೇ ಒಂದಡೆ (XVII) ಅವರು, "ಈ ಕೈಫಿಯತ್ತುಗಳನ್ನು ಅಭ್ಯಾಸದ ಅನುಕುಲಕ್ಕಾಗಿ...." ಮೈಸೂರು ಪ್ರದೇಶದ ಕೈಫಿಯತ್ತುಗಳು(೫೩), ದಕ್ಷಿಣ-ಉತ್ತರ ಕನ್ನಡ ಜಿಲ್ಲೆಗಳ ಕೈಫಿಯತ್ತುಗಳು (೫೪-೧೦೦), ಬಳ್ಳಾರಿ ಪ್ರದೇಶದ ಕೈಫಿಯತ್ತುಗಳು(೧೦೧-೧೧೪), ಇತರ ಕೈಫಿಯತ್ತುಗಳು (೧೧೫-೧೩೪)ಎಂದು ಭೌಗೋಳಿಕವಾಗಿ ವಿಂಗಡಿಸಿದ್ದಾರೆ. ಜೊತೆಗೆ ಇಲ್ಲಿ ಬಳಸಿಕೊಂಡಿರುವ ಆಕರಗಳ ವಿವರ, ಈ ಮುಂಚೆ ಈ ಕ್ಷೇತ್ರದಲ್ಲಿ ನಡೆದ ಅಧ್ಯಯನಗಳ ಮಾಹಿತಿ, ಕೈಫಿಯತ್ತುಗಳು ಚರಿತ್ರೆಯ ಅಧ್ಯಯನಕ್ಕೆ ಒದಗಿಸುವ ಉಪಯುಕ್ತತೆ ಮುಂತಾದ ಸಂಗತಿಗಳನ್ನು ಇಲ್ಲಿ ನೋಡಬಹುದು; ರಾಜಕೀಯ, ಆಡಳಿತ, ಸಾಮಾಜಿಕ ಆಚರಣೆ, ಜಾತಿ, ಧಾರ್ಮಿಕ, ವಾಸ್ತುವಿಶೇಷತೆ, ಪ್ರಾದೇಶಿಕತೆ, ವಾಣಿಜ್ಯ, ಸಾಹಿತ್ಯ, ಬರವಣಿಗೆ-ಭಾಷೆ ಇವೆಲ್ಲವೂ ಸಮಾವಿಷ್ಟಗೊಂಡಿರುವ ಈ ಕೈಫಿಯತ್ತುಗಳ ದಾಖಲೀಕರಣ, ವಿಶೇಷವಾಗಿ ಮಧ್ಯಕಾಲೀನ ಕರ್ನಾಟಕದ ಜನಜೀವನವನ್ನು ಪರಿಚಯಿಸುವ ಬಹುದೊಡ್ಡ ಭಂಡಾರವೆಂಬುದನ್ನು ಪ್ರಸ್ತುತ ಕೃತಿ ಸಾಕ್ಷಿಕರಿಸುತ್ತದೆ (ಪ್ರ. ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ-೧೯೯೪).
ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ದಾಖಲು ಸಾಹಿತ್ಯಃ
೧೬ನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಪೀಠ ಪರಂಪರೆಯ ಮೊದಲ ಗುರುಗಳು ಎಡೆಯೂರು ಶ್ರೀ ಸಿದ್ದಲಿಂಗೇಶ್ವರರು. ಡಂಬಳ, ಗದಗದಲ್ಲಿಯೂ ನೆಲೆಕಂಡುಕೊಂಡ ಈ ಧಾರ್ಮಿಕ ಸಂಸ್ಥೆಯ ೧೯ನೆಯ ಜಗದ್ಗುರುಗಳಾಗಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಈ ನಿರಂಜನ ಪೀಠವನ್ನು ಅಲಂಕರಿಸಿದ್ದಾರೆ. ಈ ಮದ್ಯದ ಕಾಲಾವಧಿಯಲ್ಲಿ ಹಲವು ಯತಿಗಳು ಈ ಪೀಠವನ್ನು ಅಲಂಕರಿಸಿದುದನ್ನು ದಾಖಲೆಗಳು ಹೇಳುತ್ತವೆ. ಕನ್ನಡ ಜಗದ್ಗುರುವೆಂದೇ ಪ್ರಸಿದ್ಧರಾಗಿರುವ ಈಗಿನ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು "ನಾಡಿನ ಮೂಲೆಮೂಲೆಗಳಲ್ಲಿ ಸಂಚರಿಸಿ ಪ್ರಾಚೀನ ಕಾಲದ ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದಾರೆ". ಈಗ ಅದು ಒಂದು ದೊಡ್ಡ ಹಸ್ತಪ್ರತಿ ಬಂಡಾರವಾಗಿ ಬೆಳೆದು ನಿಂತಿದೆ. ಜೊತೆಗೆ ಶ್ರೀ ಮಠದ ಪೂರ್ವದ ಜಗದ್ಗುರುಗಳಿಗೆ ದಾನ-ದತ್ತಿ ಇನಾಮುಗಳ ರೂಪದಲ್ಲಿ ಬಂದ ಕಾಗದ ಪತ್ರಗಳನ್ನು ಸಂರಕ್ಷಿಸುತ್ತ ಬಂದಿದ್ದಾರೆ. ಇವೆಲ್ಲವನ್ನೂ ಡಾ. ಕಲಬುರ್ಗಿಯವರು ಪಿ.ಕೆ.ರಾಠೋಡಾವರ ಸಹಯೋಗದೊಂದಿಗೆ 'ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ತಾನ ಮಠದ ದಾಖಲು ಸಾಹಿತ್ಯ-ಸಂಪುಟ-೧' ಎನ್ನುವ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಶ್ರೀ ಮಠದ ಹಸ್ತಪ್ರತಿ ಭಾಂಡಾರ ಚಾರಿತ್ರಿಕ ದಾಖಲೆಗಳಿಗೆ ಸೀಮಿತವಾಗಿದ್ದು, ಕೆಳದಿ ಶಾಸನ ಪತ್ರಗಳು, ಬೀಳಗಿ ಮತ್ತು ಬಾಗಳಿ ಅರಸರ ಪತ್ರಗಳು, ದೇಸಾಯರ ಪತ್ರಗಳು, ಗೌಡ-ಕುಲಕರ್ಣಿ ಪತ್ರಗಳು, ವಿಶೇಷ ಪತ್ರಗಳು- ಹೀಗೆ ಒಟ್ಟು ೮೯ ಪ್ರಾಚೀನ ಕಾಗದ ಪತ್ರಗಳು ಈ ಕೃತಿಯಲ್ಲಿ ಸೇರಿವೆ. ಇವೆಲ್ಲವುಗಳ ಸಂಕ್ಷಿಪ್ತ ವಿವರಗಳನ್ನು ಸಂಪಾದಕರ 'ಪ್ರಸ್ತಾವನೆ'ಯಲ್ಲಿ ನೋಡಬಹುದು. (ಪ್ರ. ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ಬೆಂಗಳೂರು-೨೦೦೮).