ಹಸ್ತಪ್ರತಿಸೂಚಿ ಸಂಪುಟ

ಕನ್ನಡ ಅಧ್ಯಯನಪೀಠದ ಹಸ್ತಪ್ರತಿಸೂಚಿಗಳು (ಸಂಪುಟ ೬ ರಿಂದ ೧೦):

hasta prati suchi kannada adyayana pitha

ಕನ್ನಡ ಸಂಸ್ಕೃತಿಯ ನಿಧಿಯೂ ಪ್ರತಿನಿಧಿಯೂ ಆಗಿರುವ ಹಸ್ತಪ್ರತಿಗಳನ್ನು ಸಂಗ್ರಹಿಸುವುದೂ, ಸಂಕ್ಷಿಸುವುದೂ, ವ್ಯವಸ್ಥಿತವಾಗಿ ಹೊಂದಿಸುವುದೂ, ಓದಿ ಪಠ್ಯಕ್ಕೆ ನ್ಯಾಯವದಗಿಸುವುದೂ ಶ್ರಮ ಮತ್ತು ಶ್ರದ್ಧೆಯನ್ನು ಬಯಸುವ ಕಾರ್ಯ. ಈ ರೀತಿಯ ಕೆಲಸಕ್ಕೊಂದು ಮಾದರಿಯೆಂಬಂತೆ ಪ್ರಸ್ತುತ ಹಸ್ತಪ್ರತಿ ಸೂಚಿಯ ಆರು ಸಂಪುಟಗಳನ್ನು ಸಂಪಾದಿಸುವ ಹೊಣೆಹೊತ್ತ ಡಾ. ಎಂ.ಎಂ.ಕಲಬುರ್ಗಿಯವರು ತಾವೇ ಪ್ರಧಾನ ಸಂಪಾದಕರಾಗಿ  ಮತ್ತು ವೀರಣ್ಣ ರಾಜೂರ ಅವರನ್ನು ಜೊತೆಗೂಡಿಸಿಕೊಂಡು  ಸಿದ್ಧಪಡಿಸಿದ್ದಾರೆ. ೧೯೬೨ರಲ್ಲಿಯೇ ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ನೆರವಿನಿಂದ ಆರಂಭಗೊಂಡ ಹಸ್ತಪ್ರತಿ ಸಂಗ್ರಹ ಕಾರ್ಯ, ಕಾಲಕ್ರಮದಲ್ಲಿ ಒಂದು ಶ್ರೀಮಂತ ಹಸ್ತಪ್ರತಿ ಭಂಡಾರವಾಗಿ ಬೆಳೆದದ್ದನ್ನು ಗಮನಿಸಿದ ಹಿರಿಯರು 'ಹಸ್ತಪ್ರತಿಸೂಚಿ' ಅಗತ್ಯವನ್ನು ಮನಗಂಡು ತುಂಬ ವೈಜ್ಞಾನಿಕವಾದ ವಿನ್ಯಾಸವನ್ನು ರೂಪಿಸಿಕೊಂಡು ಅವುಗಳ ರಚನಾಕಾರ್ಯವನ್ನು ಆರಂಭಿಸಿದ್ದರು. ಆದರೆ ಕಾಲಾಂತರದ ಕಾರಣಗಳಿಂದಾಗಿ ಆ ಕಾರ್ಯವು ನಿರೀಕ್ಷಿಸಿದ ವೇಗದಲ್ಲಿ ಸಾಗದಿದ್ದುದನ್ನು ಗಮನಿಸಿದ ಡಾ.ಎಂ.ಎಂ.ಕಲಬುರ್ಗಿಯವರು, ೧೯೮೩ರಲ್ಲಿ ಆ ಯೋಜನೆಗೆ "ಒಂದು ಯೋಗ್ಯ ಸ್ವರೂಪವನ್ನು, ನಿಯತ ಗತಿಯನ್ನು ನಿರ್ದಿಷ್ಟ ಗುರಿಯನ್ನು ಒದಗಿಸಿದರು". ಈ ಹಿನ್ನೆಲೆಯೊಂದಿಗೆ "೧೦೦ ಕಟ್ಟುಗಳ ಒಂದು ಸಂಪುಟದಂತೆ ೧೦೦೦ ಕಟ್ಟುಗಳ ೧೦ ಸಂಪುಟಗಳನ್ನು ಸಿದ್ಧಪಡಿಸುವ ಕಾರ್ಯವನ್ನು ಒಂದು ಸಾಂಘಿಕ ಯೋಜನೆಯಾಗಿ ಕೈಗೆತ್ತಿಕೊಳ್ಳಲಾಯಿತು". ಆದರೆ ಈ ಸಾವಿರ ಕಟ್ಟುಗಳಲ್ಲಿ ಸೇರಿಕೊಂಡಿದ್ದ ಸಂಸ್ಕೃತ ಹಸ್ತಪ್ರತಿ ಕೃತಿಗಳನ್ನು ಕೈಬಿಟ್ಟು" 'ಕನ್ನಡ ಹಸ್ತಪ್ರತಿ' ಕೃತಿಗಳ ಸೂಚಿ ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಲು ಯೋಚಿಸಲಾಯಿತು. ಅದರ ಫಲವಾಗಿ ಈ ಐದು (೬ ರಿಂದ ೧೦) ಸೂಚೀ ಸಂಪುಟಗಳು ಬೆಳಕುಕಂಡವು. ಹಸ್ತಪ್ರತಿಗಳ ಅಭ್ಯಾಸಿಗಳಿಗೆ ಈ ಸಂಪುಟಗಳು ಬಹುದೊಡ್ಡ ಆಕರಗಳನ್ನೊದಗಿಸುತ್ತವೆ. (ಪ್ರ. ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೧೯೯೨).

ಸಾಹಿತ್ಯ ಸಂಪಾದನೆ :

sahitya sampadane

'ವಿಶ್ವವಿದ್ಯಾಲಯ ಧನಸಹಾಯ ಆಯೋಗ' ರಾಷ್ಟ್ರೀಯ ಉಪನ್ಯಾಸಕರೆಂದು ಪರಿಗಣಿಸಿದವರನ್ನು ಬೇರೆ ಬೇರೆ ವಿದ್ಯಾಸಂಸ್ಥೆಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡುವ ಅವಕಾಶ ಒದಗಿಸುತ್ತದೆ. ಈ ಅವಕಾಶದ ಮೇರೆಗೆ ಡಾ. ಎಂ.ಎಂ.ಕಲಬುರ್ಗಿಯವರು ೧೯೭೭-೭೮ನೆಯ ವರ್ಷದಲ್ಲಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ೧೯,೨೦,೨೧ ಜನೇವರಿ ೧೯೭೮ರಂದು ನೀಡಿದ ೧. ಗ್ರಂಥ ಸಾಹಿತ್ಯ ಸಂಪಾದನೆ ೨. ಶಾಸನ ಸಾಹಿತ್ಯ ಸಂಪಾದನೆ ೩, ಜಾನಪದ ಸಾಹಿತ್ಯ ಸಂಪಾದನೆ- ಹೀಗೆ ಮೂರು ವಿಷಯಗಳನ್ನು ಕುರಿತು ಉಪನ್ಯಾಸ ನೀಡುತ್ತಾರೆ. ಈ ಉಪನ್ಯಾಸಗಳ ಲಿಖಿತ ರೂಪವೆ ಪ್ರಸ್ತುತ ಕೃತಿ. ಇದನ್ನು ಮದ್ರಾಸ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅಂದು ಮುಖ್ಯಸ್ಥರಾಗಿದ್ದ ಡಾ. ಕೆ.ಕುಶಾಲಪ್ಪ ಗೌಡ ಸಂಪಾದಿಸಿ ಪ್ರಕಟಿಸಿದ್ದಾರೆ. ಮೂರು ಕ್ಷೇತ್ರಗಳ ಸಂಪಾದನೆ ಶಿಸ್ತನ್ನು ನಿರೂಪಿಸುವುದು ಇಲ್ಲಿಯ ಮುಖ್ಯ ಉದ್ದೇಶವಾಗಿದೆ. (ಪ್ರ. ಮದರಾಸು ವಿಶ್ವವಿದ್ಯಾಲಯ, ಮದರಾಸ್-೧೯೭೯).