ಜೀವನ

ಜೀವನ:

"...ಬಹುಜನ ಸದಸ್ಯರನ್ನೊಳಗೊಂಡ ನನ್ನ ಕುಟುಂಬದ ಮುಖ್ಯ ಲಕ್ಷಣ ಅವಿಭಕ್ತಪ್ರಜ್ಞೆ ಮತ್ತು ಶ್ರಮಸಂಸ್ಕೃತಿ. ಇವುಗಳನ್ನು ಮೈಗೂಡಿಸಿಕೊಂಡು ಬೆಳೆದ ನಾನು ವೈಯಕ್ತಿಕವಾಗಿ ಪ್ರೀತಿಸುತ್ತ ಬಂದ ವಿಷಯಗಳು ಎರಡು- ಕನ್ನಡ ಮತ್ತು ಬಸವೇಶ್ವರ. ಇವು ನನ್ನ ಸಾಹಿತ್ಯವ್ಯಕ್ತಿತ್ವವನ್ನು ರೂಪಿಸಿವೆ. ಅವಿಭಕ್ತ ಕುಟುಂಬದ ವ್ಯಕ್ತಿಗೆ ಪರಿವಾರ ಮತ್ತು ಪರಂಪರೆಗಳ ಬಗೆಗೆ ಅಗಾಧ ಪ್ರೀತಿ, ಕೌಟುಂಬಿಕ ಪ್ರತಿಷ್ಠೆಯ ಬಗೆಗೆ ಸದಾ ಎಚ್ಚರ. ನನ್ನ ಪರಂಪರೆಯನ್ನು ಹುಡುಕುವ ಸಂಶೋಧಕನಾಗಿ ನಾನು ರೂಪಗೊಂಡೆನೆಂದು ತೋರುತ್ತದೆ".

ಡಾ. ಎಂ. ಎಂ. ಕಲಬುರ್ಗಿ ನಡೆದ ಮಾರ್ಗ

ಪೂರ್ಣ ಹೆಸರು  ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ 
ಸ್ವಗ್ರಾಮ    ಯರಗಲ್ಲ, ತಾ. ಸಿಂದಗಿ, ಜಿ. ವಿಜಯಪುರ (ಕರ್ನಾಟಕ - ಭಾರತ) 
ಜನ್ಮಗ್ರಾಮ        ತಾಯಿಯ ತವರೂರು ಸಿಂದಗಿ ತಾಲೂಕಿನ ಗುಬ್ಬೇವಾಡ 
ಜನ್ಮ ದಿನಾಂಕ - ೨೮ ನವೆಂಬರ್ ೧೯೩೮ 
ತಂದೆ  - ಮಡಿವಾಳಪ್ಪ 
ತಾಯಿ   - ಗುರಮ್ಮ 
ಹೆಂಡತಿ   - ಉಮಾದೇವಿ (ಮದುವೆ ೬ ಫೆಬ್ರವರಿ ೧೯೬೬) 
ಮಕ್ಕಳು  - ಶ್ರೀವಿಜಯ (ಮಗ)  ಪೂರ್ಣಿಮಾ, ಪ್ರತಿಮಾ, ರೂಪದರ್ಶಿ ( ಹೆಣ್ಣುಮಕ್ಕಳು) 
ಸೊಸೆ  - ಶಿಲ್ಪಾ 
ಮೊಮ್ಮಕ್ಕಳು  ಕ್ಷಮಾ, ಶುಭಕೀರ್ತಿ, ಶ್ರೀಚಂದ್ರ, ಅಮೋಘವರ್ಷ, ಅಮೃತವರ್ಷ, ತೇಜಸ್ವಿ, ಮನೋಜ್ಞ. 
ನಿಧನ   - ೩೦ ಅಗಸ್ಟ್  ೨೦೧೫ ( ಧಾರವಾಡದಲ್ಲಿ ಹಂತಕನ ಗುಂಡಿಗೆ ಬಲಿಯಾದರು)
ಶೈಕ್ಷಣಿಕ ಕ್ಷೇತ್ರಗಳ ಹರವು ಕನ್ನಡ ಭಾಷೆ, ಸಾಹಿತ್ಯ, ಸಂಶೋಧನೆ, ವಿಮರ್ಶೆ,  ಜಾನಪದ, ಶಾಸನ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ವ್ಯಾಕರಣ, ಛಂದಸ್ಸು, ನಿಘಂಟು, ನಾಮವಿಜ್ಞಾನ, ಕೈಫಿಯತ್ತು, ಧರ್ಮ, ಇತಿಹಾಸ, ಸಮಾಜ, ಸಂಸ್ಕೃತಿ ಇತ್ಯಾದಿ ಕ್ಷೇತ್ರಗಳ ವಿದ್ವಾಂಸ.

mmk_family_4

"ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ" ಎಂಬ ಬಸವಣ್ಣನವರ ಮಾತು ನಿಜವಾದ ಸಂಶೋಧಕನಿಗೆ ಮಾರ್ಗದರ್ಶಿಯಾಗಿದೆ. ಅಂದರೆ, ಆತ ಸತ್ಯಕ್ಕೆ ಕೇಡು ಒದಗದಂತೆ, ತನ್ನ ಸ್ವಾತಂತ್ರ್ಯಕ್ಕೆ ಭಂಗ ಬರದಂತೆ ಸಂಶೋಧನ ವ್ರತವನ್ನು ಮುಂದುವರಿಸಬೇಕು. ಗತಿಸಿದ ಪರಂಪರೆಯ ಪ್ರಕಟನೆಯ ಹೊರೆ ತನ್ನ ಮೇಲಿದೆ ಎಂಬ ಎಚ್ಚರ ಅವನಲ್ಲಿ ಮನೆಮಾಡಿರಬೇಕು. ಪರಂಪರೆಯನ್ನು ವ್ಯತ್ಯಸ್ತಗೊಳಿಸುವ, ಮುಚ್ಚಿ ಹಾಕುವ ಪಾಪಕಾರ್ಯ ಅವನ ಕೈಯಿಂದ ಜರುಗಬಾರದು. ಆದುದರಿಂದ, ಆತ ಆಕರಸಾಮಗ್ರಿಯನ್ನು ಅವಲಂಬಿಸಿ ಸತ್ಯವನ್ನು, ಅದು ಸಾಧ್ಯವಾಗದಿದ್ದರೆ ಸಂಭಾವ್ಯತೆಯನ್ನು ಸ್ಥಾಪಿಸಬೇಕಾಗುತ್ತದೆ. ಮುಂದಿನವರು ಈ ಸಂಭಾವ್ಯತೆಯನ್ನು ಹೊಸ ಆಕರಗಳಿಂದ ನಿಜಗೊಳಿಸಬಹುದಾಗಿದೆ. ಅದಕ್ಕಾಗಿಯೇ " ಸಂಶೋಧನೆಯೆನ್ನುವುದು ಅಲ್ಪ ವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಕ್ರಿಯೆಯಾಗಿದೆ "  ಎನ್ನುವ ಸಂಶೋಧಕ  ಡಾ || ಎಂ. ಎಂ. ಕಲಬುರ್ಗಿ ಅವರು ಈ ನಾಡು ಕಂಡ ಶ್ರೇಷ್ಠ ಚಿಂತಕರು. ಶ್ರಮ ಸಂಸ್ಕೃತಿಯ ಒಕ್ಕಲುತನ ಮನೆತನ ಮತ್ತು ಮಧ್ಯಮವರ್ಗದ ಸುಸಂಸ್ಕೃತ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಕಲಬುರ್ಗಿಯವರು ಶ್ರಮಮೌಲ್ಯದ ಆರಾಧಕರಾಗಿ ಅನುಷ್ಠಾನನಿಷ್ಠರಾಗಿ ಅರಳಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಯರಗಲ್ಲದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಸಿಂದಗಿಯಲ್ಲಿ ಪೂರೈಸಿದರು.  ವಿಜಯಪುರದ ವಿಜಯ ಕಾಲೇಜಿನಿಂದ ಬಿ. ಎ. ಪದವಿಯನ್ನು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಎಂ. ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪ್ರಶಸ್ತಿಸಹಿತ ಗಳಿಸಿದ ಶ್ರೀಯುತರು " ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ" ಎಂಬ ವಿಷಯದ ಮೇಲೆ ಪಿಎಚ್. ಡಿ ಸಂಪಾದಿಸಿದರು. ತಮ್ಮ ಗುರುಗಳಾದ ಶ್ರೀ ಬಿ. ಟಿ. ಸಾಸನೂರರ ಮತ್ತು ಡಾ || ಆರ್. ಸಿ. ಹಿರೇಮಠರ ನೆರಳಿನಲ್ಲಿ ದೃಢವಾದ ಹೆಜ್ಜೆಯಿಟ್ಟರು. "ದುಡಿಯುವವನ ಮನಸ್ಸು ಸ್ವಚ್ಛವಿರುತ್ತದೆ" ಎಂಬ ಡಾ|| ಫ. ಗು. ಹಳಕಟ್ಟಿಯವರ ವಾಕ್ಯ ಇವರ ಎಳೆಯ ಮನಸ್ಸನ್ನು ಪ್ರಭಾವಿಸಿದ್ದಿತು "ಜನಮೆಚ್ಚಿನಡೆಕೊಂಡರೇನುಂಟು ಲೋಕದಿ ಮನಮೆಚ್ಚಿನಡೆಕೊಂಬುದೇ ಚೆಂದವು" ಎಂದು ಮುನ್ನಡೆದು ಮಹಾಮಾರ್ಗ ಕ್ರಮಿಸಿದ ಕ್ರಿಯಾಶೀಲ ವಿದ್ವಾಂಸರು, ಡಾ. ಕಲಬುರ್ಗಿಯವರು.
ಡಾ. ಎಂ. ಎಂ. ಕಲಬುರ್ಗಿ ಅವರದು ಬಹುಮುಖ ವ್ಯಕ್ತಿತ್ವ ; ಬಹುಮುಖ ಪ್ರತಿಭೆ ; ಬಹುಮುಖ ಕಾರ್ಯಯೋಜನೆ. ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರಾಗಿ, ಉನ್ನತಶ್ರೇಣಿಯ ಸಂಶೋಧಕರಾಗಿ, ಸಮರ್ಥ ಸಂಶೋಧನ ಮಾರ್ಗದರ್ಶಕರಾಗಿ, ವಿಭಾಗದ ದಕ್ಷ ಅಧ್ಯಕ್ಷರಾಗಿ, ಕನ್ನಡ ವಿಶ್ವವಿದ್ಯಾಲಯದ ಮಾದರಿ ಕುಲಪತಿಗಳಾಗಿ, ಅನೇಕ ವಿನೂತನ ಯೋಜನೆಗಳ ಯೋಜಕರಾಗಿ, ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ನಿರ್ದೇಶಕರಾಗಿ ಅವರು ಮಾಡಿದ ಕಾರ್ಯಚಟುವಟಿಕೆಗಳು ಅಚ್ಚರಿ ಮೂಡಿಸುವಂತಿವೆ. ಡಾ || ಕಲಬುರ್ಗಿಯವರದು 'ಸತ್ಯಶೋಧನೆ' ಗೆ ಮತ್ತೊಂದು ಹೆಸರು. "ಭಾರತದ ಭಾವನಿಷ್ಠ ರಾಷ್ಟ್ರದಲ್ಲಿ ಸಂಶೋಧನೆ ಸರಳ ದಾರಿಯಲ್ಲ, ಕಹಿಸತ್ಯ ಹೇಳಬಾರದು" ಎಂಬ ಸಂಪ್ರದಾಯದ ವಾರಸುದಾರರಾದ ಭಾರತೀಯರಿಗೆ ಅಂಥ ಸತ್ಯ ಸಹಜವಾಗಿಯೇ ಸಿಹಿ ಎನಿಸುವುದಿಲ್ಲ. ಹೀಗಾಗಿ ಈ ರಾಷ್ಟ್ರದಲ್ಲಿ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನೇರಬೇಕಾಗುತ್ತದೆ. 'ಮುಗ್ಧ'ರೊಂದಿಗೆ 'ಜಾಣ'ರೂ ಕೆಲವೊಮ್ಮೆ ಕೈಗೂಡಿಸಿ ಸಂಶೋಧಕನನ್ನು ಅಂದರೆ ಸತ್ಯವನ್ನು ಹಿಂಸಿಸುವಲ್ಲಿ ತೃಪ್ತಿಪಡುತ್ತಾರೆ. ಇಂಥ ಪ್ರಸಂಗಗಳಿಂದಾಗಿ ಭಾರತೀಯ ಸಂಶೋಧಕ ಅನೇಕ ಅಗ್ನಿಕುಂಡಗಳನ್ನು ದಾಟಬೇಕಾಗುತ್ತದೆ. ' ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಹುಶಃ ನನ್ನ ತಲೆಮಾರಿನ ಇತರ ಸಂಶೋಧಕರಿಗಿಂತ ಪರಿಸರವು ನನ್ನ ಕಾಲ ಕೆಳಗೆ ತೋಡಿದ ಅಗ್ನಿಕುಂಡಗಳೇ ದೊಡ್ಡವೆಂದು ತೋರುತ್ತದೆ. ಆದರೆ ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದೆಂಬ ನಂಬಿಕೆ ನನ್ನನ್ನು ಈವರೆಗೆ ಉಳಿಸಿದೆ, ಬೆಳೆಸಿದೆಯೆಂದು ನಂಬಿದ್ದೇನೆ' ಇಂಥ ಆತ್ಮವಿಶ್ವಾಸ, ಸತ್ಯನಿಷ್ಠುರ ಪ್ರೀಯರಾದ ಕಲಬುರ್ಗಿಯವರು ಸಂಶೋಧಕರ ಮಿತ್ರ, ಸೌಜನ್ಯದ ಸಾಕಾರಮೂರ್ತಿ, ಶಿಷ್ಯಾನುರಾಗಿ, ಮಾರ್ಗಕಾರ ಪ್ರತಿಭಾ ಸಂಪನ್ನ, ಸಾಹಿತ್ಯ ಸಂಸ್ಕೃತಿಯ ಧ್ವನಿ ಎಂದೆಲ್ಲಾ ಗುರುತಿಸಲ್ಪಟ್ಟಿದ್ದಾರೆ, ಗೌರವಿಸಲ್ಪಟ್ಟಿದ್ದಾರೆ.
ಡಾ || ಎಂ. ಎಂ. ಕಲಬುರ್ಗಿ ಅವರ ಸಂಶೋಧನ ಕ್ಷೇತ್ರಗಳ - ವಿಷಯಗಳ ಹರವು ತುಂಬ ವಿಸ್ತಾರ, ವ್ಯಾಪ್ತಿ ಬಲು ದೊಡ್ಡದು. ಅವರು ನಿರಂತರವಾಗಿ ಕೈಕೊಂಡ ಸಂಶೋಧನೆಯ ಫಲವಾಗಿ ನೂರಕ್ಕೂ ಹೆಚ್ಚು ಕೃತಿಗಳು ಹಾಗೂ 'ಮಾರ್ಗ' ಹೆಸರಿನ ಎಂಟು ಸಂಪುಟಗಳಲ್ಲಿ ಆರುನೂರಕ್ಕೂ ಹೆಚ್ಚು ಸಂಶೋಧನ ಸಂಪ್ರಬಂಧಗಳು ಪ್ರಕಟವಾಗಿವೆ. ಅವರ ಕನ್ನಡ ಸಂಶೋಧನಾ ಶಾಸ್ತ್ರ, ಕನ್ನಡ ನಾಮ ವಿಜ್ಞಾನ, ಕರ್ನಾಟಕದ ಕೈಫಿಯತ್ತುಗಳು, ಇಮ್ಮಡಿ ಚಿಕ್ಕ ಭೊಪಾಲನ ಸಾಂಗತ್ಯ, ಶಾಸನ ವ್ಯಾಸಂಗ ಮೊದಲಾದ ಕೃತಿಗಳು ಆಯಾ ಕ್ಷೇತ್ರಗಳಲ್ಲಿ ಸಂಶೋಧನೆ ಕೈಕೊಳ್ಳುವವರಿಗೆ ಮಾರ್ಗದರ್ಶಿಯಾಗಿವೆ. ಡಾ. ಕಲಬುರ್ಗಿಯವರು ಯೋಜನೆಗಳ ಬಹುದೊಡ್ಡ ನಿಕ್ಷೇಪವಾಗಿದ್ದರು. ಅವರ ತಲೆಯೊಂದು ಯೋಜನೆಗಳ ಭಂಡಾರವಾಗಿತ್ತು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಾಗ ಅವರು ಕೈಕೊಂಡ ವೈಯಕ್ತಿಕ ನೆಲೆಯ ಯುಜಿಸಿ ಅನುದಾನಿತ ಯೋಜನೆಗಳು, ಬಸವಪೀಠದ ಪ್ರಾಧ್ಯಾಪಕರಾಗಿದ್ದಾಗ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಹಾಕಿಕೊಂಡ ಸಾಂಘಿಕ ಯೋಜನೆಗಳು ಅವರ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಂತಿದ್ದರೆ, ಸಮಗ್ರ ವಚನ ಸಾಹಿತ್ಯ ಪ್ರಕಟನ ಯೋಜನೆ, ಸಮಗ್ರ ದಾಸಸಾಹಿತ್ಯ ಪ್ರಕಟನ ಯೋಜನೆ, ಪ್ರಾಚೀನ ಅಪ್ರಕಟಿತ ಕನ್ನಡ ಸಾಹಿತ್ಯ ಪ್ರಕಟನ ಯೋಜನೆ, ಡಾ ಫ. ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಪ್ರಕಟನ ಯೋಜನೆ, ಬಸವರಾಜ ಕಟ್ಟಿಮನಿ ಸಮಗ್ರ ಸಾಹಿತ್ಯ ಪ್ರಕಟನ ಯೋಜನೆ, ಆದಿಲ್ ಶಾಹಿ ಸಾಹಿತ್ಯ ಅನುವಾದ ಯೋಜನೆ, ಬಹುಭಾಷಾ ವಚನ ಅನುವಾದ ಯೋಜನೆ ಮೊದಲಾದವು ಅವರ ಸಾಂಸ್ಕೃತಿಕ, ಸಾರಸ್ವತ ಪ್ರೀತಿಯ ದ್ಯೋತಕವೆನಿಸಿವೆ.
ಕನ್ನಡದ ಕೆಲಸಕ್ಕೆ ಎಷ್ಟು ಸಂಸ್ಥೆಗಳಿದ್ದರೂ ಸಾಲದು ಎನ್ನುತ್ತಿದ್ದ ಕಲಬುರ್ಗಿಯವರು ಜಾತಿ, ಪ್ರದೇಶ ಇತ್ಯಾದಿಗಳನ್ನು ಮೀರಿ ಕನ್ನಡ ಕೆಲಸಕ್ಕೆ ಮುಂದು ಬರುವ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅವುಗಳಲ್ಲಿ ಗದುಗಿನ ತೋಂಟದಾರ್ಯ ಮಠ, ಮೈಸೂರಿನ ಸುತ್ತೂರು ಮಠ, ವಿಜಯಪುರದ ಬಿ. ಎಲ್. ಡಿ. ಇ ಸಂಸ್ಥೆ, ಬೆಳಗಾವಿಯ ಕೆ. ಎಲ್. ಇ ಸಂಸ್ಥೆ ಮುಂತಾದವುಗಳು ಡಾ. ಕಲಬುರ್ಗಿಯವರು ಹಾಕಿಕೊಟ್ಟ ಯೋಜನೆಗಳ ಮೂಲಕ ವಿಶೇಷ ಪ್ರಸಿದ್ಧಿಗೆ ಪಾತ್ರವಾಗಿವೆ. ಅವರು ಯಾವುದೇ ಸಂಸ್ಥೆಯ ಅಧಿಕಾರವನ್ನು ವಹಿಸಿಕೊಳ್ಳಲಿ ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಿದ್ದರು. ಡಾ. ಕಲಬುರ್ಗಿಯವರ ಪರಿಶ್ರಮಕ್ಕೆ ತಕ್ಕಂತೆ ಅನೇಕ ಉನ್ನತ ಪ್ರಶಸ್ತಿ - ಗೌರವಗಳು ಅವರಿಗೆ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ,  ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ, ರನ್ನ ಪ್ರಶಸ್ತಿ, ರಾಷ್ಟ್ರೀಯ ಬಸವ ಪ್ರಶಸ್ತಿ ಮುಂತಾದವುಗಳು ಅವರ ಮುಡಿಗೇರಿದವು. ಆದರೆ ಈ ಯಾವ ಗೌರವ-ಪ್ರಶಸ್ತಿಗಳೂ ಅವರ ತಲೆ ತಿರುಗಿಸಲಿಲ್ಲ. "ಅಂಬಲಿ ಕಂಬಳಿ ಆಸ್ತಿ ಮಿಕ್ಕಿದ್ದೆಲ್ಲ ಜಾಸ್ತಿ" ಎಂಬ ತಮ್ಮ ತಂದೆಯವರ ಆದರ್ಶಕ್ಕೆ ಅವರು ಕಟಿಬದ್ಧರಾಗಿದ್ದರು. ಕೆಲಸ ಮಾಡುವುದೊಂದೆ ನನ್ನ ಕರ್ತವ್ಯವೆಂದು ಅವರು ಬದುಕಿನುದ್ದಕ್ಕೂ ವಿನಯದಿಂದ ಬಾಗಿ ನಡೆದರು.
ಡಾ. ಎಂ. ಎಂ. ಕಲಬುರ್ಗಿಯವರು ಅನೇಕ ಸಂಘ - ಸಂಸ್ಥೆಗಳಿಗೆ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಮಾರ್ಗದರ್ಶನ ನೀಡುವುದರ ಜೊತೆಗೆ ನಿರ್ಮಾಣವಾಗಬೇಕೆಂದು ಬಯಸಿ, ಭಾಷಣ - ಬರಹಗಳ ಮೂಲಕ ಅಸತ್ಯ, ಅನ್ಯಾಯ, ಮೂಢಾಚಾರಗಳನ್ನು ಖಂಡಿಸುತ್ತ, ಶರಣರು ಕಂಡ ಸಮಾನತೆಯ - ಸದಾಚಾರದ ಸ್ವಸ್ಥಸಮಾಜ ನಿರ್ಮಾಣವಾಗಬೇಕೆಂದು ಸಾಮಾಜಿಕರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ಅವ್ಯಾಹತವಾಗಿ ತೊಡಗಿಕೊಂಡರು. ಸ್ಥಾವರಗೊಂಡ ವ್ಯವಸ್ಥೆಯನ್ನು ಚಲನಶೀಲಗೊಳಿಸಬೇಕು, ಜಂಗಮಗೊಳಿಸಬೇಕು ಎಂದು ಸಮಾಜ ಶುದ್ಧಿಯ ಕಾರ್ಯದಲ್ಲಿ ನಿರಂತರ ನಿರತರಾಗಿದ್ದರು. ಅವರ ಪ್ರಖರ ವಿಚಾರಗಳು, ವೈಚಾರಿಕ ನಿಲುವುಗಳು, ನಿಷ್ಠುರ ಸತ್ಯಗಳು ಪಟ್ಟಭದ್ರ ಹಿತಾಸಕ್ತಿಗಳಿಗೆ, ಸಂಕುಚಿತ ಭಾವದ ಸನಾತನಿಗಳಿಗೆ ಅಪಥ್ಯವೆನಿಸಿದವು. ಹೀಗಾಗಿ ಸತ್ಯಶೋಧಕರಾದ ಇವರು ೩೦-೦೮-೨೦೧೫ರಂದು ದುಷ್ಟಶಕ್ತಿಗಳ ಗುಂಡೇಟಿಗೆ ಬಲಿಯಾಗಬೇಕಾಯಿತು,  ಕರ್ನಾಟಕದ ಇತಿಹಾಸದಲ್ಲಿ ಅದೊಂದು ಕರಾಳ ದಿನವೆನಿಸಿತು.
"ನನ್ನ ಬಲ, ನನ್ನ ಛಲ ನೀರು ಗೊಬ್ಬರ ನನಗೆ.
ನಾನು ಹುಟ್ಟಿದ್ದು ಸಾಯಲಿಕ್ಕೆ ಅಲ್ಲ,
ಸೂರ್ಯ ಚಂದ್ರರ ಕೂಡ ಬದುಕಲಿಕ್ಕೆ"
ಎನ್ನುವ ಡಾ. ಕಲಬುರ್ಗಿಯವರು ಸಾಯಲಿಕ್ಕೆ ಹುಟ್ಟಲಿಲ್ಲ, 'ಸತ್ಯ-ಸತ್ವ-ತತ್ವ'ಗಳನ್ನು ಬದುಕಲಿಕ್ಕೆ ಹುಟ್ಟಿದವರು. ಹೀಗಾಗಿ ಡಾ. ಕಲಬುರ್ಗಿಯವರೆಂದರೆ ಎಲ್ಲರಿಗೂ ಒಂದು ಅಚ್ಚರಿ, ವಿಸ್ಮಯ, ಬೆರಗು, ಎಚ್ಚರ.

"ಪರಂಪರೆಯ ಪ್ರಜ್ಞೆಯಿಲ್ಲದವನಿಗೆ ಈ ದೇಶವೂ ಅಷ್ಟೇ, ಪರದೇಶವೂ ಅಷ್ಟೇ. ಈ ಭಾಷೆಯೂ ಅಷ್ಟೇ, ಪರಭಾಷೆಯೂ ಅಷ್ಟೇ. ಅಂಥವನಿಗೆ ಉಪಜೀವನ ಮುಖ್ಯವಾಗಿರುತ್ತದೆಯೇ ಹೊರತು, ಜೀವನವಲ್ಲ. ವ್ಯಕ್ತಿಕೇಂದ್ರಿತವಾಗಿ ಬದುಕುವುದು ಉಪಜೀವನ.  ಪರಂಪರೆಗ ಕೇಂದ್ರಿತವಾಗಿ ಬದುಕುವುದು ಜೀವನ. ವ್ಯಕ್ತಿಕೇಂದ್ರಿತವಾದವನು ಪರಂಪರೆಗೆ ವಿಮುಖವಾಗಿ ಬೆಳೆಯುವುದರಿಂದ ಅವನಿಗೆ ಸ್ವಂತ ಮನೆಯೂ ಅಷ್ಟೇ ಬಾಡಿಗೆ ಮನೆಯೂ ಅಷ್ಟೆ. ಅವನು ತನ್ನ ಮನೆಯನ್ನು ಸಹ ಭೌತಿಕ ನೆಲೆಯಿಂದ ನೋಡುವನೇ ಹೊರತು, ಅದರಾಚೆಯ ಸಾಂಸ್ಕೃತಿಕ ಮೌಲ್ಯದಿಂದ ನೋಡುವುದಿಲ್ಲ"