ವಿದೇಶ ಪ್ರವಾಸ:
- ೧೯೮೨ರಲ್ಲಿ ಡಾ. ಎಂ. ಎಂ. ಕಲಬುರ್ಗಿಯವರು ಲಂಡನ್, ಆಕ್ಸಫರ್ಡ, ಕೆಂಬ್ರಿಜ್ ವಿಶ್ವವಿದ್ಯಾಲಯಗಳನ್ನು ಮತ್ತು ಅಲ್ಲಿಯ ರಾಷ್ಟ್ರೀಯ ಸಂಗ್ರಹಾಲಯಗಳನ್ನು ಕನ್ನಡ ಹಸ್ತಪ್ರತಿ, ಶಾಸನಗಳ ಅಧ್ಯಯನಕ್ಕಾಗಿ ಸಂದರ್ಶಿಸಿದರು.
- ೨೦೦೪ರಲ್ಲಿ ' ಏಷಿಯಾ ಪೆಸಿಫಿಕ್ ಕನ್ನಡ ಸಂಘಗಳ ಒಕ್ಕೂಟ 'ದ ಆಮಂತ್ರಣದ ಮೇರೆಗೆ ಆಸ್ಟ್ರೇಲಿಯಾ ದೇಶದ ಮೆಲ್ಬರ್ನ್, ಅಡಿಲೇಡ್, ಸಿಡ್ನಿ ಕ್ಯಾನಬರಾನಗರಗಳನ್ನು ಮತ್ತು ನ್ಯೂಜಿಲೆಂಡ್ ದೇಶದ ಆಕ್ಲಂಡ, ಮಲೇಶಿಯಾ ದೇಶದ ಕೌಲಾಲಂಪುರ ಹಾಗೂ ಸಿಂಗಾಪುರ ನಗರಗಳನ್ನು ಸಂದರ್ಶಿಸಿ ಅಲ್ಲಿಯ ಕನ್ನಡ ಸಂಘಗಳ ಸ್ಥಿತಿ - ಗತಿಗಳನ್ನು ಅಭ್ಯಸಿಸಿದರು. ಕರ್ನಾಟಕ ರಾಜ್ಯೋತ್ಸವ ಮತ್ತು ಕುವೆಂಪು ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ' ಕನ್ನಡ - ಕನ್ನಡಿಗ - ಕರ್ನಾಟಕ - ಕುವೆಂಪು ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
- ಅನೇಕ ಸಾರ್ವಜನಿಕ ಸಭೆ - ಸಮಾಲೋಚನ ಸಭೆಗಳಲ್ಲಿ ಭಾಗವಹಿಸಿ 'ಕನ್ನಡ ಸಂಘ ಸಾಧಿಸಿದ್ದೇನು ?, ಸಾಧಿಸಬೇಕಾಗಿದ್ದೇನು ? ಸಮಸ್ಯೆ ಪರಿಹಾರಗಳೇನು ? ಕನ್ನಡವನ್ನು ಹೇಗೆ ಬೆಳೆಸಬೇಕು ಮತ್ತು ಹೇಗೆ ಉಳಿಸಬೇಕು ? ವಿದೇಶಿ ಕನ್ನಡಿಗರ ಹೊಣೆಯೇನು ? ಕರ್ನಾಟಕ ಸರಕಾರದ ಹೊಣೆಯೇನು ? ಎಂಬ ವಿಷಯಗಳ ಕುರಿತು ಚರ್ಚೆ ನಡೆಸಿದರು.
- ಆಕ್ಲಂಡಿನ ಕನ್ನಡ ಕೂಟದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ "ಕುಮಾರವ್ಯಾಸ ಭಾರತ ಕೃಷ್ಣ ಕೇಂದ್ರಿತ ಮಹಾಕಾವ್ಯ " ಎಂಬ ವಿಷಯವನ್ನು ಕುರಿತು ಮಾತನಾಡಿದರು ಮತ್ತು "ವಿದೇಶಿ ಕನ್ನಡಿಗರ ಅಭಿವೃದ್ಧಿಯ ಬಗ್ಗೆ ಶಾಶ್ವತ ಯೋಜನೆ ಅಗತ್ಯ" ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
- ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದ ಬಸವ ಸಮಿತಿ ಸಭೆಯಲ್ಲಿ " ಬಸವಣ್ಣ : ಸಮಗ್ರ ಯುಗ ಪುರುಷ " ವಿಷಯವನ್ನು ಕುರಿತು ಮಾತನಾಡಿದ ಡಾ ಕಲಬುರ್ಗಿಯವರು ಬಸವಣ್ಣನವರ ಧಾರ್ಮಿಕ, ಸಾಮಾಜಿಕ, ರಾಜಕೀಯ ಮೊದಲಾದ ಸಿದ್ಧಾಂತಗಳನ್ನು ವಿವರಿಸಿದರು.
- ಅಡಿಲೇಡ್ ನಗರದ ಸಾರ್ವಜನಿಕ ಸಭೆಯಲ್ಲಿ "ಬಸವಣ್ಣ ಮತ್ತು ಪ್ರಜಾಸತ್ತೆ" ವಿಷಯವನ್ನು ಕುರಿತು ಮಾತನಾಡಿ ಬಸವಣ್ಣನವರದು ಪ್ರಜಾಸತ್ತಾ ಸಂವಿಧಾನ, ಬಿಜ್ಜಳನದು ರಾಜಸತ್ತಾ ಸಂವಿಧಾನ, ಇವರಿಬ್ಬರ ನಡುವಿನದು ಎರಡು ಸಂವಿಧಾನಗಳ ಸಂಘರ್ಷವೆಂದು ತಿಳಿಸಿದರು.
- ಸಿಡ್ನಿಯಲ್ಲಿ ಲಿಂಗಾಯತ ಸಮಾಜದ ಸಂಘಟನೆಯನ್ನು ಕುರಿತು ಚರ್ಚಿಸಿದರು. ಆಕ್ಲಂಡಿನ "ಮನೆಯಲ್ಲಿ ಮಹಾಮನೆ" ಕಾರ್ಯಕ್ರಮದಲ್ಲಿ ಬಸವಣ್ಣನವರ ಸಿದ್ಧಾಂತ ಕೇವಲ ಆತ್ಮಮುಖಿಯಲ್ಲ , ಸಮಾಜಮುಖಿ, ಸಮೃದ್ಧಿಮುಖಿ ಎಂಬುದನ್ನು ನಿರೂಪಿಸಿದರು.
- ಸಿಂಗಾಪುರದ ಬಸವಕೇಂದ್ರ ಹಮ್ಮಿಕೊಂಡಿದ್ದ 'ಮನೆಯಲ್ಲಿ ಮಹಾಮನೆ' ಸಮಾರಂಭದಲ್ಲಿ "ಬಸವ ಸಿದ್ಧಾಂತ ಶಬ್ದವಲ್ಲ, ವಾಕ್ಯ" ಎಂದು ಪ್ರತಿಪಾದಿಸಿದರು.
- ಅಮೇರಿಕಾದ 'ಅಕ್ಕ ಸಮ್ಮೇಳನ'ದಲ್ಲಿ ಭಾಗವಹಿಸಿ "ಸ್ವಾಭಿಮಾನ ಕರ್ನಾಟಕ" ಎಂಬ ವಿಷಯ ಕುರಿತು ಮಾತಾಡಿದರು.